ತುಮಕೂರು
ವಿಶೇಷ ವರದಿ :ಬರಗೂರು ವಿರೂಪಾಕ್ಷ
ಬಂಗಾರದ ಒಡವೆ ಅಂದ್ರೆ ಯಾವ ಹೆಣ್ಣು ತಾನೆ ಒಲ್ಲೆ ಅನ್ತಾರೆ ಹೇಳಿ…?. ಕೈಯಲ್ಲಿ ಒಂದಿಷ್ಟು ಹಣ ಇದೆ ಅಂದ್ರೆ ಕೊರಳಿಗೋ, ಕಿವಿಗೋ ಅದೂ ಇಲ್ಲದೇ ಇದ್ರೆ ಮೂಗಿಗೆ ಸಣ್ಣದೊಂದು ಮೂಗುತಿಯನ್ನಾದರೂ ಮಾಡಿಸಿಕೊಂಡು ಹಾಕಿಕೊಳ್ಳುವುದು ಹೆಣ್ಣಿನ ಸಹಜ ಗುಣವೂ ಹೌದು.
ಅಷ್ಟೇ ಇದ್ದರೆ ಪರವಾಗಿಲ್ಲ. ಮಾಡಿಸಿಟ್ಟ ಎಲ್ಲಾ ಒಡವೆಗಳನ್ನು ಮೈತುಂಬಾ ಹಾಕಿಕೊಂಡು ಓಡಾಡಿದ್ರೆ ಎಂತಹವರ ಕಣ್ಣೂ ಕೂಡ ಕುಕ್ಕುವಂತಹ ಕಾಲವಿದು. ‘ಬಡವ ನೀ ಮಡಗ್‍ದಂಗೆ ಇರು’ ಅನ್ನೋ ನಾಣ್ಣುಡಿಯಂತೆ ಮನೆಯಲ್ಲಿ ಒಡವೆಗಳಿದ್ದರೂ ಅವುಗಳನ್ನು ವಿಶೇಷ ಸಂದರ್ಭದಲ್ಲಿ ಮಾತ್ರ ಬಳಕೆ ಮಾಡುವಂತಹ ಜಾಣತನ ಮೆರೆಯದಿದ್ದರೆ ಚಿನ್ನದ ಒಡವೆಗಳ ಮೇಲೆ ಎಂತಹವರ ಕಣ್ಣು ಕೂಡ ಬೀಳುತ್ತದೆ.
ಕೆಲವರು ಒಡವೆಗಳನ್ನು ಮಾಡಿಸೋದು ಕಷ್ಟಕ್ಕೆ ಆಗಲಿ ಅಂತಲೋ ಇಲ್ಲವೆ ಹೆಣ್ಣೆತ್ತವರ ಸಂಕಟ, ಮಕ್ಕಳ ವಿವಾಹದ ಸಂದರ್ಭದಲ್ಲಾದರೂ ಬಗೆಹರಿಯಲಿ ಅನ್ನುವ ಉದ್ದೇಶದಿಂದಲೂ ಮಕ್ಕಳ ಮದುವೆಗೂ ಮುನ್ನವೆ ಒಡವೆ ಮಾಡಿಸಿಡುವುದು ಸಹಜವಷ್ಟೆ. ಹಾಗಂತ ಮನೆಯಲ್ಲಿರುವ ಚಿನ್ನದ ಒಡವೆಗಳನ್ನೆಲ್ಲಾ ಮೈಮೇಲೆ ಏರಿಕೊಂಡು ಓಡಾಡುವವರು ಎಷ್ಟೇ ಜಾಗೃತರಾದರೂ ಅಪಾಯ ಅನ್ನುವುದು ಯಾರನ್ನೂ ಕೇಳಿ ಬರಲಾರದು.
ಅದೇನೇ ಇರಲಿ ಕೂಡಿಟ್ಟ ಒಡವೆಗಳನ್ನು ಕಾಪಾಡಿಕೊಳ್ಳುವುದು ಒಡವೆ ಮಾಡಿಸಿದವರ ಕರ್ತವ್ಯವಾಗದಿದ್ದರೆ ಕಳ್ಳಕಾಕರ ಕಣ್ಣುಗಳಿಗೂ ಮೆರುಗು ಬರುತ್ತದೆ ಅನ್ನುವುದಕ್ಕೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಒಡವೆ ದೋಚಿ ಪರಾರಿಯಾಗುತ್ತಿರುವ ಪ್ರಕರಣಗಳೇ ಜ್ವಲಂತ ಸಾಕ್ಷಿ.
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅದರಲ್ಲೂ ಅತ್ಯಂತ ಗ್ರಾಮೀಣ ಪ್ರದೇಶಗಳ ಕೆಲವೆಡೆ ಹೊಸದೊಂದು ದಂಧೆಯೇ ಶುರುವಾಗಿದೆ. ಹಾಗೆಂದು ಈ ದಂಧೆ ಹೊಚ್ಚ ಹೊಸದೇನೂ ಅಲ್ಲದಿದ್ದರೂ ಈ ದಂಧೆಯ ಅರಿವಿದ್ದ ಸಾರ್ವಜನಿಕರು ಕೂಡ ಮೋಸಕ್ಕೆ ಒಳಗಾಗುತ್ತಿರುವುದು ಎಲ್ಲರಿಗೂ ಅಚ್ಚರಿ ತರಿಸತೊಡಗಿದೆ.
ಮೈತುಂಬಾ ಒಡವೆಗಳನ್ನು ಹಾಕಿಕೊಂಡ ಮಹಿಳೆಯರನ್ನು ತಮ್ಮದೆ ಆದ ತಂತ್ರಗಾರಿಕೆಯಲ್ಲಿ ಮರುಳುಗೊಳಿಸಿ ಅವರನ್ನು ತಮ್ಮದೇ ಆದ ಮಾತಿನ ಮೋಡಿಯಲ್ಲಿ ಸೆಳೆದುಕೊಂಡು ತಮ್ಮಲ್ಲಿರುವ ಒಡವೆಗಳನ್ನು ಪೂಜೆಯ ಮೂಲಕ ಡಬಲ್ ಮಾಡಿಕೊಡುತ್ತೇನೆಂದು ಯಾಮಾರಿಸಿ ಒಡವೆಯ ಸಮೇತ ನಾಪತ್ತೆಯಾಗುವಂತಹ ದಂಧೆ ಜಿಲ್ಲೆಯ ವಿವಿಧೆÉಡೆ ಇದೀಗ ವ್ಯಾಪಕವಾಗಿ ಬೀಡು ಬಿಡತೊಡಗಿದೆ.
ಕಳೆದ ವರ್ಷ ಶಿರಾ ನಗರದ ಬನ್ನಿ ನಗರ ರಸ್ತೆಯ ಮನೆಯೊಂದಕ್ಕೆ ಪ್ರವೇಶ ಮಾಡಿದ ಪಕೀರನ ವೇಷ ಹಾಕಿದ್ದ ವ್ಯಕ್ತಿಯೊಬ್ಬ ಮನೆಯಲ್ಲಿ ಯಾರೂ ಇಲ್ಲದ್ದನ್ನು ಮನಗಂಡು ಮನೆಯೊಡತಿಯನ್ನು ಮರುಳುಗೊಳಿಸಿ ಮಂತ್ರದ ಮೂಲಕ ಒಡವೆಯನ್ನು ಡಬಲ್ ಮಾಡಿಕೊಡುವುದಾಗಿ ನಂಬಿಸಿ ಆಕೆಯ ಒಡವೆಯನ್ನೆಲ್ಲಾ ಬಿಚ್ಚಿಸಿಕೊಂಡು ಅಕ್ಕಿ ಇದ್ದ ತಟ್ಟೆಯಲ್ಲಿ ಹಾಕಿ ಒಡವೆಯನ್ನು ಮುಚ್ಚಿ ಪೂಜೆ ಮಾಡಿದ್ದಾನೆ. ಇನ್ನೂ 400 ಗ್ರಾಂ ಒಡವೆ ಕಡಿಮೆ ಇದೆ ಯಾರ ಬಳಿಯಾದ್ರು ತೆಗೆದುಕೊಂಡು ಬನ್ನಿ ಗಂಟೆಯಲ್ಲಿ ಒಡವೆ ಡಬಲ್ ಆದ ನಂತರ ವಾಪಸ್ ಕೊಡುವಿರಂತೆ ಎಂದು ಪಕ್ಕದ ಮನೆಯಲ್ಲೂ ಒಡವೆ ತರಿಸಿಕೊಂಡಿದ್ದಾನೆ.
ಮನೆಯೊಡತಿ ಪಕ್ಕದ ಮನೆಗೆ ಹೋಗಿ ಒಡವೆ ಪಡೆದುಕೊಂಡು ವಾಪಸ್ ಬರುವುದರೊಳಗೆ ಅಕ್ಕಿಯೊಳಗಿದ್ದ ಒಡವೆಗಳನ್ನು ಜೇಬಿಗೆ ಇಳಿಸಿದ ದಂಧೆಕೋರ ಪೂಜೆಯ ನಂತರ ಅರ್ಧ ಗಂಟೆ ಬಿಟ್ಟು ಅಕ್ಕಿಯನ್ನು ತೆಗೆದು ನೋಡುವಂತೆ ಹೇಳಿ ಕೊಟ್ಟಷ್ಟು ಹಣ ಪಡೆದು ಪರಾರಿಯಾಗಿದ್ದನು. ಆತ ಪೂಜೆ ಮಾಡಿಕೊಟ್ಟು ಹೊರ ಹೋಗಿ ಅರ್ಧ ಗಂಟೆ ನಂತರ ಅಕ್ಕಿಯ ಗುಡ್ಡೆಯನ್ನು ಕೆದಕಿ ನೋಡಿದ ಮಹಿಳೆಗೆ ಅಚ್ಚರಿ ಕಾದಿತ್ತು. ಅಕ್ಕಿಯೊಳಗೆ ಹಾಕಿದ್ದ ಲಕ್ಷಾಂತರ ರೂ. ಮೌಲ್ಯದ ಒಡವೆಯೆ ನಾಪತ್ತೆಯಾಗಿತ್ತು.
ಕಳೆದ ಒಂದು ವಾರದ ಹಿಂದಷ್ಟೆ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯ ದ್ವಾರನಕುಂಟೆಯ ಜಯಮ್ಮ ಎಂಬುವವರಿಗೂ ಒಡವೆಯನ್ನು ಡಬಲ್ ಮಾಡಿಕೊಡುವ ನೆಪದಲ್ಲಿ ಒಡವೆ ಬಿಚ್ಚಿಸಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಈಕೆಯ ಕೊರಳಿನ ಸುಮಾರು 60 ಗ್ರಾಂ ತೂಕದ ಒಡವೆಯನ್ನು ಕದಿಯುವಲ್ಲಿಯೂ ದಂಧೆ ಕೋರರು ಚಾಣಾಕ್ಷತನ ಮೆರೆದಿದ್ದಾರೆ.
ದ್ವಾರನಕುಂಟೆಯ ದಿವಂಗತ ರೇವಣ್ಣ ಅವರ ಪತ್ನಿ ಜಯಮ್ಮ ಇದೇ ಗ್ರಾಮದ ರಸ್ತೆ ಬದಿಯಲ್ಲಿ ಪುಟ್ಟದೊಂದು ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದಾರೆ. ಕಳೆದ 7 ದಿನದ ಹಿಂದೆ ಮೂವರು ಯುವಕರು ದ್ವಿಚಕ್ರ ವಾಹನದಲ್ಲಿ ಅಂಗಡಿಗೆ ಬಂದು ಬಿಸ್ಕೆಟ್ ಕೊಂಡು ಕೊಂಡರು. ಕೊರಳಿನ ಚಿನ್ನದ ಸರಕ್ಕೆ ಪೂಜೆ ಮಾಡಿಕೊಡುತ್ತೇವೆ. ವ್ಯಾಪಾರ ಚೆನ್ನಾಗಿ ಆಗುತ್ತೆ ಅಂತಾ ನಂಬಿಸಿದರು. ನಂತರ ತನಗೆ ಅರಿವೆ ಇಲ್ಲದೆಯೆ ತನ್ನ ಕೊರಳಿನ ಚಿನ್ನದ ಸರವನ್ನು ಬಿಚ್ಚಿಕೊಟ್ಟಳು ಎನ್ನಲಾಗಿದೆ.
ಅಂಗಡಿಯ ಸಮೀಪದಲ್ಲಿಯೆ ಇದ್ದವರು ಕೂಡ ಏನು ನಡೆಯುತ್ತಿದೆ ಅನ್ನುವಷ್ಟರಲ್ಲಿ ಸದರಿ ದಂಧೆಕೋರರು ದ್ವಿಚಕ್ರ ವಾಹನಗಳನ್ನು ಹತ್ತಿ ಧರ್ಮಪುರದ ಕಡೆಗೆ ಹೋದ ಒಂದರ್ಧ ಗಂಟೆÉಯ ನಂತರ ಜಯಮ್ಮನಿಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ಇದೆಂತಹ ತಂತ್ರ, ಮಂತ್ರ ಅನ್ನುವುದು ಕೂಡ ಗ್ರಾಮಸ್ಥರಿಗೆ ಸೋಜಿಗದ ಸಂಗತಿಯೂ ಆಗಿದೆ.
ನ.18 ರಂದು ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ ಇಂತಹುದೆ ಮತ್ತೊಂದು ಘಟನೆ ನಡೆದಿದೆ. ಪಟ್ಟನಾಯಕನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಅಂಗಡಿಯನ್ನು ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದ ರಾಜಮ್ಮ ಎಂಬುವರು ಕೂಡ ಒಡವೆ ಡಬಲ್ ಮಾಡಿಕೊಡುವ ನೆಪದಲ್ಲಿ ತಮ್ಮ ಒಡವೆಗಳನ್ನು ಕಳೆದಕೊಂಡ ಘಟನೆ ನಡೆದಿದೆ.
ನ.18 ರಂದು ಶಿವರಾಮಯ್ಯ ಅವರ ಪತ್ನಿ ಜಯಮ್ಮ ಅವರ ಅಂಗಡಿಗೆ ಹೋಗಿ 20 ರೂ. ಕೊಟ್ಟು 10 ರೂಪಾಯಿಯ ಬಿಸ್ಕೆಟ್ ಪಡೆದು 10 ರೂ. ವಾಪಸ್ ಪಡೆದ ಆಸಾಮಿಯೊಬ್ಬ ಅಂಗಡಿಯೊಳಗೆ ಇದ್ದ ಮತ್ತೊಂದು ಕುರ್ಚಿಯಲ್ಲಿ ಕೂತು ಅಂಗಡಿ ವ್ಯಾಪಾರವನ್ನು ಚೆನ್ನಾಗಿ ನಡೆಯುವಂತೆ ಮಾಡಿಕೊಡುತ್ತೇನೆ. ನಿಮ್ಮ ಮಾಂಗಲ್ಯ ಸರಕ್ಕೆ ಲಕ್ಷ್ಮೀ ಪೂಜೆ ಮಾಡಿಕೊಡುತ್ತೇನೆ ಎಂದು ನಂಬಿಸಿದ್ದಾನೆ.
ಜಯಮ್ಮ ಅವರಿಂದ ಪಡೆದ ಸರವನ್ನು ಒಂದು ಪೇಪರ್‍ನಲ್ಲಿ ಸುತ್ತಿ ಗಲ್ಲದ ಒಳಗೆ ಹಾಕಿ ಅದರ ಮೇಲೆ ಚಾಕೋಲೇಟ್‍ಗಳನ್ನು ಹಾಕಿ ಮುಚ್ಚಿ ಅರಿಸಿನ ಕುಂಕುಮ ಕೇಳಿದ್ದಾನೆ. ಆಕೆ ಅರಿಸಿನ ಕುಂಕುಮ ತೆಗೆದುಕೊಡಲು ಪಕ್ಕಕ್ಕೆ ತಿರುಗಿದಾಗ ಆಕೆಗೆ ಅರಿವಿಲ್ಲದೆಯೇ ಮಾಂಗಲ್ಯ ಸರವನ್ನು ಎತ್ತಿಕೊಂಡಿದ್ದಾನೆ. ಪೂಜೆ ಮಾಡಿ ಅರ್ಧ ಗಂಟೆಯ ನಂತರ ಮಾಂಗಲ್ಯ ಸರ ತೆಗೆದುಕೊಳ್ಳುವಂತೆ ಹೇಳಿ ಆಸಾಮಿ ಹೊರಟು ಹೋಗಿದ್ದಾನೆ. ಚಾಕೋಲೇಟ್‍ಗಳ ಮಧ್ಯದಲ್ಲಿದ್ದ ಸರವನ್ನು ಜಯಮ್ಮ ಹುಡುಕಿದಾಗ ಸರವೇ ಮಾಯವಾಗಿತ್ತು. ಈ ಸಂಬಂಧ ಆಕೆ ಪ.ನಾ.ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ಇಷ್ಟೇ ಅಲ್ಲ…ಚಿನ್ನದ ನಾಣ್ಯಗಳನ್ನು ನೀಡುವ ನೆಪದಲ್ಲೂ ದಂಧೆಕೋರರು ತಮ್ಮ ತಂತ್ರಗಾರಿಕೆ ಮೆರೆಯುತ್ತಿದ್ದಾರೆ. ನಗದು ಹಣ ನೀಡಿದರೆ ಅಸಲಿ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿ ನಗದನ್ನು ಪಡೆದ ಆಸಾಮಿಯೊಬ್ಬರು ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 11,60,000 ರೂ.ಗಳನ್ನು ಪಡೆದು ವಂಚಿಸಿ ಪರಾರಿಯಾದವನನ್ನು ಶಿರಾ ನಗರ ಠಾಣಾ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಪಾಮಿಡಿ ಗ್ರಾಮದ ಅಪ್ಪಾರಾವ್ ಎಂಬಾತನಿಗೆ ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಗ್ರಾಮದ ಇಟಗಿ ಉಮೇಶಪ್ಪ ಎಂಬಾತ 11,60,000 ರೂ.ಗಳನ್ನು ನೀಡಿದರೆ ಒಂದೂವರೆ ಕೆ.ಜಿ. ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿದ್ದಾನೆ.
ಕೆಜಿ ಗಟ್ಟಲೆ ಚಿನ್ನ ಕಡಿಮೆ ದÀರದಲ್ಲಿ ಸಿಗುವುದನ್ನು ಕಂಡು ಅಪ್ಪಾರಾವ್ ಇಟಗಿ ಉಮೇಶಪ್ಪನಿಗೆ 11,60,000 ರೂ.ಗಳನ್ನು ನೀಡಿ ಒಂದೂವರೆ ಕೆ.ಜಿ. ಚಿನ್ನದ ನಾಣ್ಯ ಪಡೆದಿದ್ದಾನೆ. ನಗದು ಹಣ ಪಡೆದ ಇಟಗಿ ಉಮೇಶಪ್ಪ ಕೂಡ¯ೀ ಕಾಲ್ಕಿತ್ತಿದ್ದಾನೆ. ನಾಣ್ಯಗಳನ್ನು ಪರಿಶೀಲಿಸಿದ ನಂತರ ಆತನಿಗೆ ಇದು ನಕಲಿ ನಾಣ್ಯ ಎಂದು ಕಂಡು ಬಂದ ಕೂಡಲೆ ನಗರ ಠಾಣಾ ಪೋಲೀಸರಿಗೆ ಅಪ್ಪಾರಾವ್ ದೂರು ನೀಡಿದ್ದಾರೆ.
ಜಿಲ್ಲೆಯ ಪಾವಗಡ, ಮಧುಗಿರಿ, ಹುಳಿಯಾರು ಸೇರಿದಂತೆ ಅನೇಕ ಭಾಗಗಳಲ್ಲಿ ಲಕ್ಷ್ಮೀ ಪೂಜೆಯನ್ನು ಮಾಡಿ ಒಡವೆಗಳನ್ನು ಡಬಲ್ ಮಾಡಿಕೊಡುವಂತಹ ಪ್ರಕರಣಗಳು ನಡೆದಿವೆಯಾದರೂ ಮೋಸಹೋದ ಅನೇಕ ಮಂದಿ ತಮ್ಮ ಮರ್ಯಾದೆ ಹೋದೀತು ಎಂದು ದೂರನ್ನೂ ಕೊಡದೆ ಮಾಡಿಕೊಂಡ ತಮ್ಮದೇ ತಪ್ಪಿಗೆ ತಮ್ಮನ್ನು ತಾವೆ ಶಪಿಸಿಕೊಳ್ಳುವ ಪ್ರಸಂಗಗಳೂ ನಡೆದಿವೆ ಎನ್ನಲಾಗಿದೆ.
ಅದೇನೇ ಇದ್ದರೂ ಜಿಲ್ಲೆಯ ವಿವಿಧೆÉಡೆಯಲ್ಲಿ ದಂಧೆಕೋರರ ಕಣ್ಣು ಇದೀಗ ಚಿನ್ನದ ಮೇಲೆ ಬಿದ್ದಿದ್ದು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಇಂತಹ ಅನೇಕ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೆ ಇವೆ. ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆ ವಹಿವಾಟಿನ ಪ್ರದೇಶಗಳು, ಅಂಗಡಿಗಳಲ್ಲಿ ವ್ಯಾಪಾರಕ್ಕೆಂದು ಕುಳಿತ ಮಹಿಳೆಯರು, ಅತ್ಯಂತ ವಯಸ್ಸಾದ ವೃದ್ದೆಯರನ್ನು ವಂಚಿಸುವ ಪ್ರಕರಣ ಅಲ್ಲಲ್ಲಿ ಕಂಡು ಬರುತ್ತಿವೆ.
ಒಂಟಿಯಾಗಿ ವೃದ್ಧೆಯರು ಸಿಕ್ಕಿದರಂತೂ ಒಡವೆಯನ್ನು ಡಬಲ್ ಮಾಡುವ ಆಸೆಯನ್ನು ಅವರ ತೆಲೆಯಲ್ಲಿ ತುಂಬಿ ಕೊರಳಿನ ಸರವನ್ನು ಉಪಾಯವಾಗಿ ಬಿಡಿಸಿಕೊಂಡು ಪೇಪರ್‍ನಲ್ಲಿ ಸುತ್ತಿಕೊಟ್ಟು ಪೂಜೆ ಮಾಡಿಕೊಡುವ ರೀತಿ ನಟಿಸಿ ಮನೆಗೆ ಹೋಗಿ ಒಡವೆ ಸುತ್ತಿದ ಚೀಟಿ ಬಿಚ್ಚುವಂತೆ ಮರುಳು ಮಾಡಿ ಕಳುಹಿಸುತ್ತಾರೆ. ಮನೆಗೆ ತೆರಳಿ ಪೇಪರ್ ಬಿಚ್ಚಿ ನೋಡಿದರೆ ಒಡವೆಯೇ ಮಾಯವಾಗಿರುತ್ತದೆ. ಇಂತಹ ಘಟನೆಗಳು ನಡೆಯುತ್ತಿವೆಯಾದರೂ ದೂರು ನೀಡಿ ಅಪಹಾಸ್ಯಕ್ಕೀಡಾಗುವುದೇಕೆಂದು ಕೆಲವರಂತೂ ತಣ್ಣಗಾಗುತ್ತಿದ್ದಾರೆ.
ಘಟನೆಯನ್ನು ಸಮೀಪದಿಂದ ಕಂಡವರು ಹಾಗೂ ಇಂತಹ ಘಟನೆಯಿಂದ ಅನುಭವ ಪಡೆದವರು ಹೇಳುವಂತೆ ಒಡವೆಗಳನ್ನು ಡಬಲ್ ಮಾಡಿಕೊಡುವುದಾಗಿ ನಂಬಿಸಲು ಬರುವವರು, ಒಡವೆಗಳನ್ನು ಪಡೆಯುವವರನ್ನು ಮಂತ್ರಮುಗ್ದರನ್ನಾಗಿಸುತ್ತಾರೆ. ಕೆಲವು ಕ್ಷಣ ತಮಗರಿವಿಲ್ಲದಂತೆಯೇ ಚಿನ್ನದ ಸರವನ್ನು ಬಿಚ್ಚಿಕೊಟ್ಟು ಬಿಟ್ಟಿರುತ್ತೇವೆ. ನಮಗೆ ಏನು ನಡೆಯುತ್ತಿದೆ ಎಂಬುದೆ ಅರ್ಥವಾಗೋದಿಲ್ಲ ಎಂದು ಘಟನೆಯ ಕ್ಷಣಗಳನ್ನು ಮೆಲುಕು ಹಾಕುತ್ತಾರೆ.
ಒಟ್ಟಾರೆ ಒಡವೆ ಡಬಲ್ ಮಾಡಿಕೊಡುವ, ಹಣ ಕೊಟ್ಟರೆ ಚಿನ್ನದ ನಾಣ್ಯಗಳನ್ನು ನೀಡುವಂತಹ ಮೋಸದ ಜಾಲಗಳು ನಡೆಯುತ್ತಿರುವ ಬೆನ್ನ ಹಿಂದೆಯೇ ಆರಕ್ಷಕ ಇಲಾಖೆಯು ಇಂತಹ ಪ್ರಕರಣಗಳಿಂದ ಎಚ್ಚರಿಕೆಯಿಂದ ಇರಲು ವ್ಯಾಪಕ ಪ್ರಚಾರಗಳನ್ನು ಕೈಗೊಂಡಿದ್ದರೂ ಸಾರ್ವಜನಿಕರು ಇಂತಹ ಮೋಸಗಳಿಗೆ ಬಲಿಯಾಗುತ್ತಲೆ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಸಾರ್ವಜನಿಕರೆ ಹುಷಾರು…..ಅದರಲ್ಲೂ ಮಹಿಳೆಯರೆ ನೀವಂತೂ ತುಂಬಾ ಹುಷಾರಾಗಿರಲೆ ಬೇಕು. ಒಡವೆ ಡಬಲ್ ಮಾಡಿಕೊಡುವ ಮಂದಿ ಬಂದರೆ ಪಾಠ ಕಲಿಸಲೆ ಬೇಕು. ಸಮೀಪದ ಆರಕ್ಷಕ ಠಾಣೆಗೆ ಫೋನಾಯಿಸಬೇಕು. ಡಬಲ್ ಆಸೆಗೆ ಮರುಳಾದರಂತೂ ಒಡವೆಯೂ ಸಿಕ್ಕೋದಿಲ್ಲ… ಒಡವೆ ಕದ್ದವನೂ ಸಿಕ್ಕೋದಿಲ್ಲ….!
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ