ದಲಿತ ಸಂರಕ್ಷಕ ಸಮಿತಿ ಸಂಘಟನೆಯ ಹೆಸರಿನಲ್ಲಿ ಬಡ್ಡಿ ದಂಧೆ

ಬೆಂಗಳೂರು

         ದಲಿತ ಸಂರಕ್ಷಕ ಸಮಿತಿ ಸಂಘಟನೆಯ ಹೆಸರಿನಲ್ಲಿ ದುಬಾರಿ ಬಡ್ಡಿ ದಂಧೆ ನಡೆಸುತ್ತಾ ಕಿರುಕುಳ ನೀಡುತ್ತಿದ್ದ ಹಾಗೂ ಬಿಲ್ಡರ್‍ಗಳು ಹಾಗೂ ಇಂಜಿನಿಯರ್‍ಗಳಿಗೆ ಬೆದರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

         ಎ ನಾರಾಯಣಪುರದ ಬಾಲಕೃಷ್ಣ ಅಲಿಯಾಸ್ ಲಯನ್ ಬಾಲಕೃಷ್ಣ ಹಾಗೂ ಹುಬ್ಬಳ್ಳಿಯ ದಾದಾಪೀರ್ ಹಲಗೇರಿ ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ ಏರ್ ಗನ್ ಹಾಗೂ ಏರ್ ಪಿಸ್ತೂಲ್‍ನ್ನು ವಶಪಡಿಸಿಕೊಳ್ಳಲಾಗಿದೆ.

       ದಲಿತ ಸಂರಕ್ಷಕ ಸಮಿತಿ ಎನ್ನುವ ಸಂಘಟನೆ ಕಟ್ಟಿಕೊಂಡಿದ್ದ ಲಯನ್ ಬಾಲಕೃಷ್ಣ ಮನೆಯಲ್ಲಿಯೇ ಕಚೇರಿ ತೆಗೆದು ಬಡ್ಡಿ ವ್ಯವಹಾರ ದಂಧೆ ನಡೆಸುತ್ತಿದ್ದನು.ಸಾರ್ವಜನಿಕರಿಗೆ ಸಾಲ ನೀಡಿ ದುಬಾರಿ ಬಡ್ಡಿ ಪಡೆಯುತ್ತಿದ್ದ ಆರೋಪಿಯು 2014 ರಲ್ಲಿ ರಾಜು ಎಂಬುವವರಿಗೆ ಬಿಡಿಎ ನಿವೇಶನ ಕೊಡಿಸುವುದಾಗಿ 15 ಲಕ್ಷ ರೂ. ಪಡೆದು ನಿವೇಶನ ಕೊಡಿಸದೆ, ವಂಚನೆ ನಡೆಸಿದ್ದ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ಪೊಲೀಸರಿಗೆ ತನಿಖೆಯನ್ನು ವಹಿಸಲಾಗಿತ್ತು.

        ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು ಇಂದಿರಾನಗರದ ಎ ನಾರಾಯಣಪುರದ ಮನೆಯ ಮೇಲೆ ದಾಳಿ ನಡೆಸಿ, 1.28 ಲಕ್ಷ ರೂ. ನಗದು, ಏರ್ ಗನ್, ಏರ್ ಪಿಸ್ತೂಲ್, ಚೆಕ್‍ಗಳು, ದಾಖಲಾತಿಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

         ವಿಚಾರಣೆ ವೇಳೆ ಲಯನ್ ಬಾಲಕೃಷ್ಣನ ಸಹಚರ, ಮತ್ತೊಬ್ಬ ಆರೋಪಿ ದಾದಾಪೀರ್ ಹಲಗೇರಿ, ನಿರ್ಮಾಣ ಹಂತದ ಕಟ್ಟಡಗಳ ಮಾಹಿತಿಯಲ್ಲಿ ಆರ್.ಟಿ.ಐನಲ್ಲಿ ಪಡೆದು ಸಂಬಂಧಪಟ್ಟ ಇಂಜಿನಿಯರ್‍ಗಳು ಹಾಗೂ ಕಟ್ಟಡಗಳ ಮಾಲೀಕರನ್ನು ಬೆದರಿಸಿ ಸುಲಿಗೆ ಮಾಡುತ್ತಿರುವುದು ಪತ್ತೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ