ಹಣ-ಗೌರವ ಗಳಿಕೆಯ ಭರದಿಂದ ಒತ್ತಡದ ಜೀವನ

ದಾವಣಗೆರೆ:

      ಮನುಷ್ಯನಿಂದು ಹಣ, ಸಂಪತ್ತು, ಕೀರ್ತಿ, ಪ್ರಶಸ್ತಿ, ಗೌರವಗಳ ಗಳಿಕೆ ಭರದಲ್ಲಿ ನೆಮ್ಮದಿ ಮರೆತು ಸಾಕಷ್ಟು ಒತ್ತಡದ ಜೀವನದಲ್ಲಿ ಮುಳುಗಿದ್ದಾನೆಂದು ಮನೋವೈದ್ಯ ಡಾ| ಚಂದ್ರಶೇಖರ್ ತಿಳಿಸಿದರು.

       ನಗರದ ಕುವೆಂಪು ಕನ್ನಡ ಭವನದಲ್ಲಿ ಕರುಣಾ ಜೀವ ಕಲ್ಯಾಣ ಜೀವ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಸಿ.ಕೆ. ನರೇಂದ್ರನಾಥ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕೃಷಿಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಜನರು ಹಣ ಗಳಿಕೆಯ ಬೆನ್ನೇರಿ ಭವರೋಗ ಭಾಗ್ಯಗಳನ್ನು ಸಂಪಾದನೆ ಮಾಡುತ್ತಿದ್ದಾರೆ. ಆದ್ದರಿಂದ ಸಕ್ಕರೆ ಕಾಯಿಲೆ, ಬಿಪಿ, ಅಸ್ತಮಾ, ಕ್ಯಾನ್ಸರ್ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದರು.

      ಕಳೆದ 50-60 ವರ್ಷಗಳ ಹಿಂದೆ ಜನರು ಸ್ಥಳೀಯವಾಗಿ ಬೆಳೆದ ಆಹಾರ ಪದಾರ್ಥಗಳಿಗೆ ಹೆಚ್ಚಾಗಿ ಎಣ್ಣೆ, ಬೆಣ್ಣೆ ಬೆರೆಸದೆ ಶುದ್ಧ ಪೌಷ್ಠಿಕ ಆಹಾರ ಸೇವಿಸುತ್ತಿದ್ದರು. ಇದರಿಂದ ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದರು. ಈಗ ಎಗ್‍ರೈಸ್, ಫ್ತೈಡ್‍ರೈಸ್, ಚಿಪ್ಸ್ ಎಲ್ಲವೂ ಕೃತಕ ಬಣ್ಣ, ರುಚಿಯಿಂದ ಕೂಡಿವೆ. ಹಾಗಾಗಿ ತಿನ್ನುವ ಆಹಾರವೆಲ್ಲ ವಿಷಯುಕ್ತವಾಗಿದೆ ಎಂದು ತಿಳಿಸಿದರು.

      ಮನುಷ್ಯನ ದೇಹದಲ್ಲಿ 60 ಸಾವಿರ ರಕ್ತನಾಳಗಳಿದ್ದು, ಅವುಗಳಲ್ಲಿ ಒಂದು ರಕ್ತನಾಳದಲ್ಲಿ ರಕ್ತ ಸಂಚಾರ ನಿಂತರೆ ಹೃದಯಾಘಾತ, ಕಾಯಿಲೆಗಳು ಆವರಿಸುತ್ತವೆ. ಆದ್ದರಿಂದ ನಿತ್ಯ ಶ್ರಮದಾನ, ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದರು. ಸಕಲ ಭಾಗ್ಯಗಳಿಗೂ ಮಿಗಿಲಾದದ್ದು ಆರೋಗ್ಯ. ಹಾಗಾಗಿ ಜನರು ತೃಪ್ತಿದಾಯಕ ಜೀವನ ನಡೆಸಲು ಹಿತಮಿತ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ಊಟ, ದಿನಕ್ಕೆ 6 ತಾಸು ನಿದ್ರೆ ಮಾಡುವ ಜತೆಗೆ ದೇಹದ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು ಎಂದು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಕೆಲವು ಟಿಪ್ಸ್ ನೀಡಿದರು.

       ಮನುಷ್ಯನ ಎಲ್ಲಾ ಉತ್ಸಾಹದ ಕೆಲಸಕ್ಕೂ ಮನಸ್ಸು ಚೆನ್ನಾಗಿರಬೇಕು. ಆದರೆ ತನ್ನ ಸ್ವಾರ್ಥಕ್ಕಾಗಿ ಆಸೆಗಳ ಬೆನ್ನೇರಿ ಮನುಷ್ಯ ತನ್ನ ದೇಹಕ್ಕೆ ಸಂತಸ ನೀಡುವ ಬದಲು ಚಿಂತೆ, ನೋವು ನೀಡುತ್ತಿದ್ದಾನೆ. ಚಿತೆ ದೇಹ ಸುಡಬಹುದು ಆದರೆ ಚಿಂತೆ ನಮ್ಮ ಮನಸ್ಸನ್ನೆ ಸುಡುತ್ತದೆ ಎಂಬುದನ್ನು ಮರೆತಿದ್ದಾನೆ. ಪ್ರತಿಯೊಬ್ಬರು ಕೂಡ ಚಿಂತೆ ಬಿಟ್ಟು ಚಿಂತನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಎಂದು ಹೇಳಿದರು.

        ತೃಪ್ತಿಯಿಂದ ಜೀವನ ಮಾಡುವ ಬಗ್ಗೆ ಪ್ರಜ್ಞಾವಂತ ಜನರಿಂದು ಚಿಂತಿಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ಯುವ ಪೀಳಿಗೆಯನ್ನು ಚಿಂತೆಗೀಡು ಮಾಡಬೇಕಾಗುತ್ತದೆ. ಮಕ್ಕಳಿಗೆ ಅಂಕಗಳಿಕೆಯ ಒತ್ತಡ ಹಾಕದೇ ಅವರಲ್ಲಿರುವ ಆಸಕ್ತಿ ಕ್ಷೇತ್ರ ಗುರ್ತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿ. ಇದರಿಂದ ಮಕ್ಕಳು ಪ್ರಬುದ್ಧರಾಗುತ್ತಾರೆ ಎಂದು ತಿಳಿಸಿದರು. ಇಂಪಾದ ಸಂಗೀತ ಆಲಿಸುವುದು, ಉತ್ತಮ ದೃಶ್ಯ ವೀಕ್ಷಿಸುವುದು, ಒಳ್ಳೆಯ ವಿಚಾರಗಳ ಬಗ್ಗೆ ಚಿಂತನೆ ಮಾಡುವ ಬಗ್ಗೆ ಚಿಂತಿಸಿ ಎಂದು ಉಪಯುಕ್ತ ಸಲಹೆ ನೀಡಿದರು.

       ಉದ್ಯಮಿ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಅರಕೆರೆ ಮಲ್ಲೇಶಣ್ಣ, ಕಲಾಭೀಮಾನಂದ್, ಸ್ವಾತಂತ್ರ್ಯ ಹೋರಾಟಗಾರ ಕ್ಷೀರಸಾಗರದ ಹನುಮಂತಪ್ಪ, ಆವರಗೆರೆ ರುದ್ರಮುನಿ ಅವರಿಗೆ ಕೃಷಿಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

         ಸಿ.ಜಿ. ದಿನೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚನ್ನಗಿರಿ ಪಾಂಡೋಮಟ್ಟಿಯ ಶ್ರೀ ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವನಕೆರೆ ಬಸವಲಿಂಗಪ್ಪ, ಮಂಜುಳಾ ಬಸವಲಿಂಗಪ್ಪ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link