ಬೆಂಗಳೂರು
ಈ ವರ್ಷದ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ತಲೆದೋರಿದ ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರಕಾರವು ಕೇವಲ 949.49 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿರುವುದಕ್ಕೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿನ ಬರಪೀಡಿತ ಪ್ರದೇಶಗಳಿಗೆ ಇಂದು ಭೇಟಿ ನೀಡಿರುವ ಸಚಿವರು, ಈ ಬಗ್ಗೆ ಅಲ್ಲಿಂದಲೇ ಪ್ರತಿಕ್ರಿಯಿಸಿದ್ದು “ಮುಂಗಾರು ಹಂಗಾಮಿನಲ್ಲಿ ರಾಜ್ಯದ 100 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಅಲ್ಲದೆ, ವಾಸ್ತವವಾಗಿ 16,600 ಕೋಟಿ ರೂ.ಗಳಿಗಿಂತಲೂ ಹೆಚ್ಚು ನಷ್ಟವಾಗಿದೆ. ಅದರಂತೆ, ಕೇಂದ್ರದ ಮಾನದಂಡಗಳ ಪ್ರಕಾರವೇ ರಾಜ್ಯ ಸರಕಾರವು 2,434 ಕೋಟಿ ರೂ. ಪರಿಹಾರ ನೀಡುವಂತೆ 2018ರ ಅಕ್ಟೋಬರ್ 29ರಂದು ಮನವಿ ಸಲ್ಲಿಸಿತ್ತು. ಆದರೆ ಈಗ ಕೇವಲ 949.49 ಕೋಟಿ ರೂ.ಗಳನ್ನು ಮಾತ್ರ ಕೊಟ್ಟಿರುವುದು ಸಮಾಧಾನ ತಂದಿಲ್ಲ,’’ ಎಂದಿದ್ದಾರೆ.
ರಾಜ್ಯವು ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿದ್ದು, ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಇನ್ನೊಂದೆಡೆ, ರಾಜ್ಯದಲ್ಲಿ ಹಿಂಗಾರು ಮಳೆಯೂ ಕೈಕೊಟ್ಟಿದ್ದು ಈ ಅವಧಿಗೆ ಅನ್ವಯವಾಗುವಂತೆ 156 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದ್ದರಿಂದ ಕೇಂದ್ರ ಸರಕಾರವು ರಾಜ್ಯಕ್ಕೆ ಇನ್ನೂ ಹೆಚ್ಚಿನ ನೆರವು ನೀಡಬೇಕು,’’ ಎಂದು ದೇಶಪಾಂಡೆ ಆಗ್ರಹಿಸಿದ್ದಾರೆ.
ರಾಜ್ಯದ ಅನೇಕ ಭಾಗಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ತಲೆದೋರಿದ್ದು, ಜನರು ಗುಳೆ ಹೋಗದಂತೆ ತಡೆಯಲು ಉದ್ಯೋಗಸೃಷ್ಟಿ ಮಾಡಬೇಕಾದ ಜರೂರೂ ಎದುರಾಗಿದೆ. ಅಲ್ಲದೇ, ರಾಜ್ಯದ ಜನ ತೀವ್ರ ಬರಗಾಲದಿಂದ ಕಂಗೆಟ್ಟಿದ್ದಾರೆ. ಇದನ್ನು ಎದುರಿಸಲು ರಾಜ್ಯ ಸರಕಾರ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಆದರೆ, ಭೀಕರ ಬರಗಾಲವನ್ನು ಎದುರಿಸಲು ಕೇಂದ್ರದ ನೆರವು ಕೂಡ ಅಗತ್ಯ ಪ್ರಮಾಣದಲ್ಲಿ ಬೇಕಾಗಿದೆ,’’ ಎಂದು ಕಂದಾಯ ಸಚಿವರು ಹೇಳಿದ್ದಾರೆ.
ಬರ ಪರಿಸ್ಥಿತಿಯನ್ನು ನಿಭಾಯಿಸಲು ತ್ವರಿತವಾಗಿ ಹಣ ಬಿಡುಗಡೆ ಮಾಡುವಂತೆ ಕೋರಿ ದೇಶಪಾಂಡೆಯವರು ಈ ತಿಂಗಳ 10ರಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಲ್ಲದೆ, ಹಿಂಗಾರು ಹಂಗಾಮಿನಲ್ಲಿ ತಲೆದೋರಿದ ಭೀಕರ ಬರಗಾಲದಿಂದಾದ ನಷ್ಟವನ್ನು ಅಂದಾಜಿಸಿ ಕೇಂದ್ರಕ್ಕೆ ಸಲ್ಲಿಸಲು ಮೆಮೊರಾಂಡಮ್ ಸಿದ್ಧಪಡಿಸುತ್ತಿದ್ದು, ಸದ್ಯದಲ್ಲೇ ಕೇಂದ್ರಕ್ಕೆ ವಿವರವಾದ ವರದಿ ಸಲ್ಲಿಸಲಾಗುವುದೆಂದೂ ಸಚಿವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.