ದಾವಣಗೆರೆ:
ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎದ್ದಿದ್ದು, ಪ್ರತಿಪಕ್ಷಗಳ ಮತ್ತಷ್ಟು ಶಾಸಕರು ಶೀಘ್ರದಲ್ಲಿಯೇ ಬಿಜೆಪಿ ಸೇರಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ತಿಳಿಸಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸನ್ನು ಸೋಲಿಸುತ್ತೇವೆ, ಬಿಜೆಪಿಗೆ ಬೆಂಬಲ ನೀಡುತ್ತೇವೆಂದು ಹೇಳುತ್ತಿರುವ ಜೆಡಿಎಸ್ ಪಕ್ಷವಂತೂ, ಬಿಜೆಪಿ ತನ್ನ ಹೆಗಲ ಮೇಲೆ ಕೂಡಬೇಕು, ತಾನು ಆಟವಾಡಬೇಕೆಂಬ ಕನಸು ಕಾಣುತ್ತಿದೆ.
ಆದರೆ, ಸ್ವಲ್ಪದಿನ ಕಾದು ನೋಡಿ, ಯಾರೆಲ್ಲಾ ಪ್ರತಿಪಕ್ಷಗಳನ್ನು ತೊರೆದು, ಬಿಜೆಪಿ ಸೇರುತ್ತಾರೆಂಬುದನ್ನು ಹೆಸರು ಏಕೆ? ನಮ್ಮ ಪಕ್ಷಕ್ಕೆ ಸೇರುವವರಂತೂ ಬಹಳ ಸಂಖ್ಯೆಯಲ್ಲಿದ್ದಾರೆ. ಅತಿ ಶೀಘ್ರದಲ್ಲಿಯೇ ನಮ್ಮ ಪಕ್ಷಕ್ಕೆ ಸೇರುವವರು ಯಾರೆಂಬುದೂ ಗೊತ್ತಾಗಲಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಪೂರ್ವದಲ್ಲಿ ಯಡಿಯೂರಪ್ಪನವರು ಹೇಳಿದಷ್ಟು ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, ಈಗಲೂ ಸಹ ಉಪ ಚುನಾವಣೆಯಲ್ಲಿ 15 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತದೆಂಬ ಆತ್ಮವಿಶ್ವಾಸದ ನುಡಿಗಳನ್ನು ಬಿಎಸ್‍ವೈ ಆಡಿದ್ದಾರೆ. ಜನರ ನಾಡಿ ಮಿಡಿತವನ್ನು ಅರಿತಿರುವ ಯಡಿಯೂರಪ್ಪನವರ ಮಾತಿನ ಮೇಲೆ ನಮಗೆ ವಿಶ್ವಾಸವಿದೆ. ಡಿ.5ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆನಡೆಯಲಿದ್ದು, 15ಕ್ಕೆ 15 ಸ್ಥಾನವನ್ನೂ ಗೆಲ್ಲುತ್ತೇವೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಭಸ್ಮಾಸುರ ಎಂಬುದಾಗಿ ಲೇವಡಿ ಮಾಡಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಏನು ಮೋಹಿನಿ ಆಗ್ತಾರಾ? ಮೋಹಿನಿ ಅವತಾರದಲ್ಲಿದ್ದಾರಾ? ಎಂದು ಪ್ರಶ್ನಿಸಿದ ಅವರು, ಲಕ್ಷ್ಮೀ ಹೆಬ್ಬಾಳಕರ್ ಮೊದಲ ಬಾರಿಗೆ ಗೆದ್ದು, ಶಾಸಕಿಯಾಗಿದ್ದಾರೆ. ಹಸುವಿಗೆ ಮೊದಲ ಬಾರಿಗೆ ಕೋಡು ಬಂದಾಗ ತುರಿಕೆ ಜಾಸ್ತಿ ಇರುತ್ತಂತೆ, ಹೀಗಾಗಿ ಅದಕ್ಕೆ ಕಂಡ ಕಂಡ ಕಡೆಗೆಲ್ಲಾ ಹಾಯಬೇಕು ಅನಿಸುತ್ತದೆ. ಇದೇ ಪರಿಸ್ಥಿತಿ ಲಕ್ಷ್ಮೀ ಹೆಬ್ಬಾಳ್ಕರ್‍ದು ಆಗಿದೆ ಎಂದು ವ್ಯಂಗ್ಯವಾಡಿದರು.
ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇತಿಮಿತಿ ಮೀರಿ ಮಾತನಾಡುತ್ತಿದ್ದಾರೆ. ಮಾತನಾಡಲಿ, ನಾವೇನೂ ತಪ್ಪು ಭಾವಿಸಲ್ಲ. ತಮ್ಮನ್ನು ತಾವೇ ಕಿತ್ತೂರು ಚನ್ನಮ್ಮ ಅಂದುಕೊಂಡಿದ್ದರೆ, ಅದು ಅವರ ಭ್ರಮೆಯಷ್ಟೇ. ಅವರ ಮಾತಿಗೆ ಯಾರೂ ಸಹ ಬೆಲೆಯನ್ನೂ ಕೊಡುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಲಕ್ಷ್ಮೀ ಹೆಬ್ಬಾಳಕರ್‍ಗೆ ಅವಕಾಶ ನೀಡಿ, ಬೆಳೆಸಿದವರೂ ಆ ಪಕ್ಷದಲ್ಲಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ ಸ್ವಂತ ಶಕ್ತಿ ಮೇಲೆ ಮಾತನಾಡುತ್ತಿಲ್ಲ. ಶಾಸಕಿ ಹೀಗೆಲ್ಲಾ ಮಾತನಾಡಲು ಬೇರೆ ನಾಯಕರು ಶಕ್ತಿ ಧಾರೆ ಎರೆದಿದ್ದಾರಷ್ಟೇ. ಈ ಕಾರಣಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಅವರು ಆರೋಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ