ಬೆಂಗಳೂರು
ಮತದಾರರ ಪಟ್ಟಿಯಲ್ಲಿ ಶೇ 1ಕ್ಕಿಂತಲೂ ಹೆಚ್ಚು ನಕಲಿ ಮತದಾರರಿದ್ದು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಆಯೋಗ ಕಾರ್ಯಪ್ರವೃತ್ತವಾಗಿದೆ, ಶುದ್ಧ ಮತ್ತು ಆರೋಗ್ಯಪೂರ್ಣ ಚುನಾವಣೆಯ ಉದ್ದೇಶದಿಂದ ಮತದಾರರ ಪಟ್ಟಿ ಪರಿಶೀಲನೆ ಮಾಡುತ್ತಿರುವುದಾಗಿ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ
ನಗರದ ವಾರ್ತಾ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಚೇರಿಯಲ್ಲಿರುವ ಮಹಾತ್ಮಾ ಗಾಂಧೀ ಮಾಧ್ಯಮಕೇಂದ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ನಕಲಿ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸಾಧ್ಯ ಎಂದು ಪ್ರತಿಪಾದಿಸಿದರು.
ಸದ್ಯದ ಚುನಾವಣಾ ಪಟ್ಟಿಯಲ್ಲಿ ಲಿಂಗ ಅಸಮಾನತೆ ಸಮರ್ಪಕವಾಗಿದೆ. ಪುರುಷ – ಮಹಿಳೆ ಮತದಾರರ ಸಂಖ್ಯೆ ಸಾವಿರಕ್ಕೆ 929 ಇದೆ. ಯುವ ಮತದಾರರ ಸಂಖ್ಯೆಯಲ್ಲಿ ಸಮಸ್ಯೆ ಇದ್ದು, ಅರ್ಹ ಮತದಾರರ ಸಂಖ್ಯೆ 11 ಲಕ್ಷಕ್ಕೂ ಅಧಿಕ ಇದೆ. ಆದರೆ ನೋಂದಣಿ ಮಾಡಿಕೊಂಡಿರುವ ಸಂಖ್ಯೆ ಸುಮಾರು 10 ಲಕ್ಷ ಇದೆ. ಈ ಕಾರ್ಯಕ್ರಮದ ಮೂಲಕ ಯುವ ಮತದಾರರ ನೋಂದಣಿ ನೂರಕ್ಕೆ ನೂರರಷ್ಟು ಮಾಡಲು ಶ್ರಮಿಸಲಾಗುವುದು ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಯ ವಿವಿಧ ಕಾರ್ಯಕ್ರಮಗಳನ್ನು ದೇಶದ್ಯಾಂತ ಆಯೋಜಿಸಲಾಗಿದೆ. ಇಡೀ ರಾಜ್ಯದಲ್ಲಿ ಇಂದಿನಿಂದ ಮತದಾರರ ಪಟ್ಟಿ ಪರಿಷ್ಕರಣೆ ಆಂದೋಲನ ಸ್ವರೂಪದಲ್ಲಿ ಆರಂಭವಾಗಿದ್ದು, ಅಕ್ಟೋಬರ್ 15ರ ವರೆಗೆ ಈ ಕಾರ್ಯಕ್ರಮ ಜಾರಿಯಲ್ಲಿರುತ್ತದೆ. ಮತದಾರರ ಉತ್ತಮ ನೋಂದಣಿಯಿಂದ ಉತ್ತಮ ಚುನಾವಣೆ ನಡೆಸಲು ಸಾಧ್ಯ ಎಂದರು. ಮೊಬೈಲ್ ಆಪ್, ಮೂಲಕವೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಅವಕಾಶವಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಕಳೆದ ವರ್ಷ 6.5 ಲಕ್ಷ ಗುರುತಿನಚೀಟಿ ವಿತರಿಸಲಾಗಿದೆ. ಜನವರಿ 25 ರಿಂದ ಹೊಸ ಗುರುತಿನಚೀಟಿ ವಿತರಿಸಲಾಗುವುದು.ಚುನಾವಣಾ ಆಯೋಗ ಇದೀಗ ಮತದಾರರ ಗುರುತಿನ ಚೀಟಿಯನ್ನು ಸ್ಮಾರ್ಟ್‌ಕಾರ್ಡ್ ಮಾದರಿಯಲ್ಲಿ ವಿತರಿಸಲು ಟೆಂಡರ್ ಕರೆದಿದೆ. ಆನ್ ಲೈನ್ ವ್ಯವಸ್ಥೆಯಿಂದ ಸಮಸ್ಯೆ ಸರಿಪಡಿಸಲು ಸಾಧ್ಯ. ಆದರೆ ಆಪ್ ಲೈನ್ ನಿಂದ ಮಾಹಿತಿ ಪಡೆಯುವುದು ಕಷ್ಟ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಾಗರಿಕ ಸೇವಾ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ಕೇಂದ್ರಗಳಲ್ಲಿ ಮತದಾರರ ಪಟ್ಟಿ ತಿದ್ದುಪಡಿ ಮಾಡಬಹುದು, ಜತೆಗೆ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಪಡೆಯಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿಹ್ನಾ ಮಾತನಾಡಿ, ಮತದಾರರ ಗುರುತಿನ ಚೀಟಿಯಲ್ಲಿರುವ ಹಳೆಯ ಕಪ್ಪುಬಿಳುಪು ಭಾವಚಿತ್ರವನ್ನು ಬದಲಾಯಿಸಲು ಅವಕಾಶವಿದೆ. ಇದೀಗ ಗುರುತಿನ ಚೀಟಿಯಲ್ಲಿ ವರ್ಷರಂಜಿತ ಫೋಟೋಗೆ ಬದಲಾವಣೆಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಹಾಗೆಯೇ ಒಂದು ಕುಟುಂಬದ ಎಲ್ಲ ಮತದಾರರನ್ನು ಒಂದೇ ಮತಗಟ್ಟೆಯಲ್ಲಿ ಸೇರಿಸಲು ಅವಕಾಶ ಇದೆ. ಆನ್ ಲೈನ್ ಮೂಲಕವೇ ಇದನ್ನು ಮಾಡಿಕೊಳ್ಳಬಹುದು ಎಂದರು.
ಡಾಟಾ ಎಂಟ್ರಿ ಆಪರೇಟರ್ ಗಳು ಮಾಡುವ ತಪ್ಪಿನಿಂದ ಗುರುತಿನ ಚೀಟಿಯಲ್ಲಿ ಮಾಹಿತಿಗಳು ತಪ್ಪಾಗಿ ಮುದ್ರಿತವಾಗಿರುತ್ತವೆ. ಅರ್ಜಿ ತುಂಬಿದ ಮೇಲೆ ಮೂರ್ನಾಲ್ಕು ಬಾರಿ ಪರಿಶೀಲಿಸಬೇಕು. ಇಂಗ್ಲಿಷ್ ನಿಂದ ಅಥವಾ ಕನ್ನಡದಿಂದ ಅನುವಾದ ಮಾಡುವಾಗುವಾಗಲೂ ತಪ್ಪಾಗುತ್ತವೆ ಎಂದು ಸಮರ್ಥಿಸಿಕೊಂಡರು.
ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಗೆ ಹತ್ತು ಹದಿನೈದು ವರ್ಷಗಳ ಹಿಂದೆ ನೀಡಿರುವ ಹಳೆ ಫೋಟೋ ಬದಲಾಯಿಸಿ ಈಗಿನ ಕಲರ್ ಫೋಟೋ ಆನ್ಲೈನ್ ಮೂಲಕ ಅಪ್ಲೋಡ್ ಮಾಡಬಹುದಾಗಿದೆ ಮೂಲಕ ಫೋಟೋ ಬದಲಾವಣೆ ಅಥವಾ ಎರಡು ಮೂರು ಕಡೆಗಳಲ್ಲಿ ಹೆಸರು ಇದ್ದಲ್ಲಿ ಸರಿ ಪಡಿಸಿಕೊಳ್ಳಲು ಅವಕಾಶ ಇದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ