ತುಮಕೂರು
ಆಸಿಯಾನ್ ಸದಸ್ಯ ರಾಷ್ಟ್ರಗಳ ನಡುವೆ ತೆರಿಗೆ ರಹಿತ ಮುಕ್ತ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವು ಭಾರತದ ರೈತರು, ಸಣ್ಣ ವ್ಯಾಪಾರಿಗಳಿಗೆ ಮರಣ ಶಾಸನವಾಗಲಿದೆ. ಕರ್ನಾಟಕ ರಾಜ್ಯದ ಸಂಸದರುಗಳು ಇದರ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೃಷಿ, ಹೈನು ಉದ್ಯಮದ ಮೇಲೆ ಈ ಒಪ್ಪಂದ ಭಾರಿ ಹೊಡೆತ ನೀಡಲಿದ್ದು, ರಾಷ್ಟಾçದ್ಯಂತ ಇದರ ವಿರುದ್ಧ ಸಂಸದರು ಧ್ವನಿ ಎತ್ತಿ ಒಪ್ಪಂದಕ್ಕೆ ಸಹಿ ಹಾಕದಂತೆ ಒತ್ತಡ ಹೇರಬೇಕಿದೆ. ಕೇಂದ್ರ ಸರ್ಕಾರ ಸರ್ವಪಕ್ಷಗಳ ಮುಖಂಡರ ಸಭೆ ಕರೆದು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದ ನಂತರವೆ ತೀರ್ಮಾನಿಸಬೇಕಿದೆ. ಆತುರದಲ್ಲಿ ನಿರ್ಧಾರ ಕೈಗೊಂಡರೆ ಭವಿಷ್ಯದಲ್ಲಿ ನಮ್ಮ ಗ್ರಾಮೀಣ ಬದುಕು ನಶಿಸಿ ಹೋಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.
ಈ ಒಪ್ಪಂದವು ಕೃಷಿ ಉತ್ಪನ್ನಗಳ ಮೇಲೂ ಪ್ರಭಾವ ಬೀರುವುದರಿಂದ ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ನಮ್ಮ ಪ್ರಮುಖ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಕೆ ಬೆಳೆ ಬೆಲೆ ಕಳೆದುಕೊಂಡು ರೈತರನ್ನು ಬೀದಿಗೆ ತರಲಿದೆ. ಕಳಪೆ ಗುಣಮಟ್ಟದ ವಿದೇಶಿ ಆಹಾರ ಉತ್ಪನ್ನಗಳ ಜತೆಗೆ ನಮ್ಮ ಉತ್ಕೃಷ್ಟ ದರ್ಜೆಗೆ ಅಡಕೆ, ಕೊಬ್ಬರಿ ಕಲಬೆರಕೆ ಮಾಡಿ ನಮ್ಮ ವಸ್ತುಗಳಿಗೂ ಬೇಡಿಕೆ ಕಳೆಯುವ ದೊಡ್ಡ ಅಪಾಯ ನಮ್ಮ ಮುಂದಿದೆ ಎಂದರು.
ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಶೃಂಗದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಯಾವುದೇ ಕಾರಣಕ್ಕೂ ಭಾರತದ ಗ್ರಾಮೀಣ ಬದುಕು ಕಿತ್ತುಕೊಳ್ಳುವ ಒಪ್ಪಂದಕ್ಕೆ ತರಾತುರಿಯಲ್ಲಿ ಸಹಿ ಹಾಕಬಾರದು. ಈ ನಿಟ್ಟಿನಲ್ಲಿ ಸಂಸತ್ ಸದಸ್ಯರು ಕೂಡಲೇ ಧ್ವನಿ ಎತ್ತುವ ಮೂಲಕ ದೇಶದ ಬಡವರ, ರೈತರ ಹಾಗೂ ಸಣ್ಣ ವ್ಯಾಪಾರಿಗಳ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ಆಗ್ನೇಯ ಏಷ್ಯಾ ರಾಷ್ಟçಗಳಾದ (ಆಸಿಯಾನ್) ರಾಷ್ಟçಗಳಾದ ಬೃನೈ, ಕಾಂಬೋಡಿಯಾ, ಇಂಡೋನೇಷಿಯಾ, ಲಾವೋಸ್, ಮಲೇಶಿಯಾ, ಮ್ಯಾನ್ಮಾರ್, ಫಿಲಿಫೈನ್ಸ್, ಸಿಂಗಾಪುರ, ಥೈಲ್ಯಾಂಡ್, ವಿಯೆಟ್ನಾಂ ಸೇರಿದಂತೆ ಮುಕ್ತ ವ್ಯಾಪಾರ ಒಪ್ಪಂದದ ಸದಸ್ಯ ರಾಷ್ಟçಗಳಾದ ಚೀನಾ, ಜಪಾನ್, ಭಾರತ, ದಕ್ಷಿಣ ಕೊರಿಯಾ, ಆಸ್ಟ್ರೆಲಿಯಾ, ನ್ಯೂಜಿಲ್ಯಾಂಡ್ ಸೇರಿದಂತೆ 16 ರಾಷ್ಟçಗಳು ಈ ಒಪ್ಪಂದಕ್ಕೆ ಸಹಿ ಹಾಕಲು ಸಭೆ ನಡೆಸುತ್ತಿವೆ ಎಂದರು.
ಈಗಾಗಲೇ ಪೂರ್ವ ಯೋಜನೆ ಇಲ್ಲದೆ ತರಾತುರಿಯಲ್ಲಿ ಜಾರಿಗೊಳಿಸಿದ ನೋಟು ಅಮಾನ್ಯೀಕರಣ, ಜಿ.ಎಸ್.ಟಿ. ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದು ನಮ್ಮ ಅನುಭವಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಎಡವಟ್ಟು ಕೇಂದ್ರ ಸರ್ಕಾರದಿಂದ ಆಗಬಾರದು. ಪ್ರಸ್ತುತ ದೇಶ ಆರ್ಥಿಕ ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲಿ ಆಮದು ನೀತಿಯಲ್ಲಿ ಬದಲಾವಣೆ ಮಾಡುವುದು ದೇಶದ ಮಾರುಕಟ್ಟೆಯ ನಾಶವೇ ಸರಿ ಎಂದರು.
ಪ್ರಪಂಚದ ಮಾರುಕಟ್ಟೆಯಲ್ಲಿ ಚೀನಾ ಹಾಗೂ ಜಪಾನ್ ಹಿಡಿತ ಸಾಧಿಸಿದ್ದು, ಕೇಂದ್ರ ಸರ್ಕಾರದ ಉದ್ದೇಶಿತ ಆರ್‌ಸಿಇಪಿ ಈ ದೇಶಗಳನ್ನು ಮತ್ತಷ್ಟು ಬಲಿಷ್ಠವಾಗಿಸುವ ಜೊತೆಗೆ ಭಾರತದ ದೇಶಿ ಮಾರುಕಟ್ಟೆಯನ್ನು ಸಂಪೂರ್ಣ ನೆಲಸಮ ಮಾಡುವ ಅಪಾಯವಿದೆ. ಮಲೇಷಿಯಾ ಅಡಕೆ, ನ್ಯೂಜಿಲ್ಯಾಂಡ್, ಆಸ್ಟ್ರೆಲಿಯಾ ಹಾಲು, ವಿಯೆಟ್ನಾಂನ ಕಾಳುಮೆಣಸು, ಬ್ರೆಜಿಲ್‌ನ ಕಾಫಿ ಅಗ್ಗದ ಬೆಲೆಗೆ ಭಾರತದ ಮಾರುಕಟ್ಟೆಯಲ್ಲಿ ಸಿಗಲಿವೆ. ಗುಣಮಟ್ಟದಲ್ಲಿ ಶ್ರೀಮಂತಿಕೆ ಇರುವ ನಮ್ಮ ಉತ್ಪನ್ನಗಳನ್ನು ಆ ದೇಶದಲ್ಲಿ ಹೆಚ್ಚು ಬೆಲೆಗೆ ಯಾರೂ ಕೊಂಡುಕೊಳ್ಳುವುದಿಲ್ಲ. ಇಂತಹ ಸಾಕಷ್ಟು ಸಮಸ್ಯೆ ಎದುರಾಗಲಿದೆ.
ಬಹುಮುಖ್ಯವಾಗಿ ಔಷಧದ ಮೇಲೆ ಒಪ್ಪಂದ ದುಷ್ಪರಿಣಾಮ ಬೀರಲಿದೆ. ಸಹಕಾರ ಸಂಘಗಳು ನಾಶದತ್ತ ಸಾಗಲಿವೆ. ಕೃಷಿ, ಹೈನು, ಜವಳಿ, ಮೀನುಗಾರಿಕೆ, ನೇಕಾರರು, ಆಟೋಮೊಬೈಲ್ಸ್, ಆರೋಗ್ಯ ಸೇವಾ ಕ್ಷೇತ್ರ ಸೇರಿದಂತೆ ದೇಶದ ಶೇ. 90 ರಷ್ಟು ಜನರು ಒಪ್ಪಂದದ ದುಷ್ಪರಿಣಾಮ ಎದುರಿಸುತ್ತಾರೆ.
ನಮ್ಮಲ್ಲಿ ಆರ್ಥಿಕ ಜಾಗತೀಕರಣಕ್ಕೆ ನಾಂದಿ ಹಾಡಿದ್ದು, 1984 ರ ಗ್ಯಾಟ್ ಒಪ್ಪಂದ. ಅತೀವ ಒತ್ತಡದ ಹಿನ್ನೆಲೆಯಲ್ಲಿ ನಮ್ಮ ದೇಶ ಸಹಿ ಹಾಕಿದ್ದ ಗ್ಯಾಟ್ ಒಪ್ಪಂದದ ಸಹೋದರ ಈ ಆರ್‌ಸಿಇಪಿ ಒಪ್ಪಂದ. ಜಾಗತೀಕರಣದಿಂದ ನಾವು ಗಳಿಸಿದ್ದು, ಕಳೆದುಕೊಂಡಿದ್ದು ನಮ್ಮ ಕಣ್ಣಮುಂದಿದೆ. ಈ ಕರಾಳ ಚರಿತ್ರೆ ಮತ್ತೆ ಮರುಕಳಿಸಬಾರದು ಎಂಬುದು ನಮ್ಮ ಆಶಯ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಮಹತ್ವದ ಆರ್ಥಿಕ ಚಟುವಟಿಕೆ ನಡೆಸುವಾಗ ಎಲ್ಲರ ಅಭಿಪ್ರಾಯ ಪಡೆದು ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಿ ದೇಶಕ್ಕೆ ಒಳ್ಳೆಯದಾಗುವ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಒಪ್ಪಂದ ಪ್ರಾಥಮಿಕ ಮಾಹಿತಿಯನ್ನು ದೇಶವಾಸಿಗಳಿಗೆ ನೀಡುವ ಸದಸ್ಯ ರಾಷ್ಟçಗಳನ್ನು ಮೆಚ್ಚಿಸಲು ಬಂಡವಾಳಶಾಹಿಗಳ ಹಿತ ಕಾಯಲು ತರಾತುರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಲಾಗುತ್ತಿದೆ ಎಂಬ ಅನುಮಾನ ಮೂಡಿದೆ.
ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿರುವ 16 ರಾಷ್ಟ್ರಗಳಲ್ಲಿ ಚೀನಾ ನಂತರದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ. ಉಳಿದ 15 ರಾಷ್ಟçಗಳಿಗೆ ಬೃಹತ್ ಮಾರುಕಟ್ಟೆಯಾಗಲಿದೆ. ಕಡಿಮೆ ಜನಸಂಖ್ಯೆ ಹೆಚ್ಚು ಉತ್ಪನ್ನ ಹೊಂದಿರುವ ಈ ರಾಷ್ಟçಗಳು ಭಾರತದಿಂದ ಅನುಕೂಲ ಪಡೆಯಲಿವೆಯಷ್ಟೆ. ಈ ಸಣ್ಣ ಮಾರುಕಟ್ಟೆ ಹೊಂದಿರುವ ರಾಷ್ಟçಗಳಿಂದ ಭಾರತಕ್ಕೆ ಅನುಕೂಲವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲು ತರಾತುರಿ ತೋರಬಾರದು ಎಂದು ಮಾಜಿ ಸಂಸದರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ರಾಯಸಂದ್ರ ರವಿಕುಮಾರ್, ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ