ಹರಪನಹಳ್ಳಿ:
ಎಂ.ಪಿ.ರವೀಂದ್ರರ ನೆನಪಿಗಾಗಿ ಅವರ ಕುಟುಂಬ ವರ್ಗ, ಅಭಿಮಾನಿ ಬಳಗ ಹಾಗೂ ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದಲ್ಲಿ ಡಿ.4ರಂದು `ನುಡಿ-ನಮನ’ ಕಾರ್ಯಕ್ರಮ ನಡೆಯಲಿದೆ.
ಎಡಿಬಿ ಕಾಲೇಜಿನಲ್ಲಿ ವೇದಿಕೆ ನಿರ್ಮಾಣ ಸಿದ್ಧತೆಯನ್ನು ಸೋಮವಾರ ಪರಿಶೀಲಿಸಿ ಮಾತನಾಡಿದ ಎಂ.ಪಿ.ರವೀಂದ್ರರ ಸಹೋದರಿ ಎಂ.ಪಿ.ಲತಾ ಮಲ್ಲಿಕಾರ್ಜುನ್, `ಹರಪನಹಳ್ಳಿ ಕ್ಷೇತ್ರಕ್ಕೆ ಶಾಶ್ವತ ಕೊಡುಗೆ ನೀಡಬೇಕು ಎಂದು ರವೀಂದ್ರ ಬಯಸಿದ್ದರು. ತಾಲ್ಲೂಕಿನ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್, 60 ಕೆರೆ ನೀರು ತುಂಬಿಸುವ ಯೋಜನೆ, ಬಡವರಿಗೆ ಸೂರು, ಊರೂರಿಗೂ ಶುದ್ಧ ಕುಡಿಯುವ ನೀರಿನ ಘಟಕ, ಸಂವಿಧಾನದ 371ಜೆ ಸೌಲಭ್ಯ ಜನರಿಗೆ ಒದಗಿಸುವಲ್ಲಿ ರವೀಂದ್ರರು ಪಟ್ಟ ಶ್ರಮ ಶ್ಲಾಘನೀಯ’ ಎಂದರು
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ವಿ.ಅಂಜೀನಪ್ಪ ಮಾತನಾಡಿ, ಅಭಿವೃದ್ಧಿ ಕೆಲಸಗಳ ಕುರಿತು ರವೀಂದ್ರ ಅವರಲ್ಲಿದ್ದ ದೂರದೃಷ್ಟಿ, ಚಿಂತನೆಗಳು ಅನುಕರಣೀಯ. ಅವರ ತಂದೆ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ ಅವರ ಹಾದಿಯಲ್ಲಿ ಸಾಗಿದವರು. ಚುನಾವಣೆಯಲ್ಲಿ ಸೋಲು-ಗೆಲುವು ಕಂಡರೂ ಜನಸೇವೆಗೆ ಸದಾ ಸ್ಪಂದಿಸುವ ತುಡಿತ ಅವರಲ್ಲಿತ್ತು ಎಂದರು.
ರವೀಂದ್ರ ಅವರ ಭಾವನವರಾದ ಮಲ್ಲಿಕಾರ್ಜುನ್ ಮಾತನಾಡಿ, `ನುಡಿ-ನಮನ ಕಾರ್ಯಕ್ರಮಕ್ಕೆ ರಾಜ್ಯದ ರಾಜಕೀಯ ಮುಖಂಡರು, ಕಾಂಗ್ರೆಸ್ ಪಕ್ಷದ ಧುರೀಣರು, ಹತೈಶಿಗಳು, ಸಿನಿಮಾ ನಟರು, ಅಭಿಮಾನಿ ಬಳಗ, ಸ್ನೇಹವೃಂದ ಆಗಮಿಸಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ವಕೀಲರಾದ ಟಿ.ಎಚ್.ಎಂ.ವಿರುಪಾಕ್ಷಯ್ಯ, ಚಂದ್ರೇಗೌಡ, ಅಬ್ದುಲ್ ರಹಿಮಾನ, ನೀಲಗುಂದ ವಾಗೀಶ, ಮುಖಂಡರಾದ ಕೆ.ಎಂ.ಬಸವರಾಜಯ್ಯ, ಅರುಣ ಪೂಜಾರ, ತೆಲಿಗಿ ಉಮಾಕಾಂತ, ಇರ್ಫಾನ್, ಶಮಿವುಲ್ಲಾ, ಇರ್ಷಾದ್, ಜಾಕೀರ್ ಹುಸೇನ್, ಎಲ್ .ಮಂಜನಾಯ್ಕ, ಮುತ್ತಿಗೆ ಜಂಬಣ್ಣ, ಜಿಶಾನ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
