ತುಮಕೂರು
ಸಂಸದ ಜಿ.ಎಸ್. ಬಸವರಾಜು ಬುಧವಾರ ಜಿಲ್ಲಾ ಪಂಚಾಯತಿಗೆ ಅನಿರೀಕ್ಷಿತ ಭೇಟಿ ನೀಡಿ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಪ್ರಧಾನಮಂತ್ರಿ ಮೋದಿ ರೂಪಿಸಿರುವ ಅಭಿವೃದ್ಧಿ ಕಾರ್ಯಕ್ರಮಗಳು ಯಶಸ್ವಿಯಾಗಿ ಅನುಷ್ಠಾನಕ್ಕೆ ಬರಬೇಕಾದರೆ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಕಳೆದ ದಿಶಾ ಸಭೆಯಲ್ಲಿ ಅಧಿಕಾರಿಗಳು ನೀಡಿದ ಅಂಕಿ-ಅಂಶದಲ್ಲಿ ನ್ಯೂನತೆ ಕಂಡುಬಂದಿದ್ದರಿಂದ ಗ್ರಾಮ ಪಂಚಾಯತಿ ಸೇರಿದಂತೆ ಎಲ್ಲ ಇಲಾಖೆಗಳಿಗೂ ಇದೇ ರೀತಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗವುದು ಎಂದು ಹೇಳಿದರು.
ದೇಶದ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕಾದಾಗ, ಜಿಲ್ಲೆಯ ಸಮಗ್ರ ಅಂಕಿ-ಅಂಶಗಳ ಕ್ರೋಡೀಕೃತ ಮಾಹಿತಿ ಅತ್ಯಗತ್ಯ. ಈ ನಿಟ್ಟಿನಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಭೌಗೋಳಿಕ ಗುರುತು ಮಾಹಿತಿ ಸ್ತರ(ಜಿಐಎಸ್) ಆಧಾರಿತ ಒಂದೇ ಬೇಸ್ ಮ್ಯಾಪ್ ತಯಾರಿಸಲು ಉದ್ದೇಶಿಸಲಾಗಿದೆ.
ಆಯಾ ಪಂಚಾಯತಿ ಸೇರಿದಂತೆ ಪ್ರತಿಯೊಂದು ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿರುವ, ಪ್ರಗತಿಯಲ್ಲಿರುವ, ಮಂಜೂರಾತಿ ಹಂತದಲ್ಲಿರುವ, ಹೊಸ ಪ್ರಸ್ತಾವನೆಗಳು ಹಾಗೂ ಪುನರ್ ನವೀಕರಣ ಯೋಜನೆಗಳ ಪ್ರಗತಿ ಅಂಕಿ-ಅಂಶಗಳನ್ನು ದೂರ ಸಂವೇದನಾ ಇಲಾಖೆ ಮೂಲಕ ಸಂಗ್ರಹಿಸಿ ದಾಖಲಿಸಿ ನಕ್ಷೆ (ಬೇಸ್ ಮ್ಯಾಪ್) ಯನ್ನು ತಯಾರಿಸಬೇಕು.
ದೂರ ಸಂವೇದಿ ಇಲಾಖೆಯಾಗಿ ಎನ್‍ಆರ್‍ಡಿಎಂಎಸ್ (ನ್ಯಾಚುರಲ್ ರಿಸೋರ್ಸಸ್ ಡಾಟಾ ಮ್ಯಾನೇಜ್‍ಮೆಂಟ್ ಸಿಸ್ಟಮ್) ಅನ್ನು ನೇಮಿಸಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಈಗಾಗಲೇ ಎನ್‍ಆರ್‍ಡಿಎಂಎಸ್ ಶಾಖೆ ಕಾರ್ಯನಿರ್ವಹಿಸುತ್ತಿದೆ. ನಕ್ಷೆ ತಯಾರಿಕೆಯಿಂದ ಪ್ರತಿ ಗ್ರಾಮದಲ್ಲಿರುವ ಕೆರೆ-ಕಟ್ಟೆ, ಕೊಳವೆಬಾವಿ, ತೆರೆದ ಬಾವಿ, ಜನಸಂಖ್ಯೆ, ಕುಟುಂಬ, ರಸ್ತೆ, ಮನೆ, ಕೃಷಿಭೂಮಿ, ಸರ್ಕಾರಿ ಜಮೀನು, ಶಾಲೆ, ಮರ-ಗಿಡ, ಅಂಗನವಾಡಿ ಕೇಂದ್ರ, ಆಸ್ಪತ್ರೆ, ಸಂಘ-ಸಂಸ್ಥೆ, ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು ಹಾಗೂ ಮತ್ತಿತರ ಅಂಕಿ-ಅಂಶಗಳನ್ನು ಪಡೆಯಬಹುದಲ್ಲದೆ ಅವುಗಳ ಸ್ಥಿತಿ-ಗತಿಯನ್ನು ಅರಿತು ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ನೆರವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿರುವ ಎನ್‍ಆರ್‍ಡಿಎಂಎಸ್ ಶಾಖೆ ಕಾರ್ಯವೈಖರಿಯನ್ನು ಪರಿಶೀಲಿಸಲು ಇಂದು ಆಕಸ್ಮಿಕವಾಗಿ ಭೇಟಿ ನೀಡಿದ್ದು, ಇಲ್ಲಿನ ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರದೆ ನಿಷ್ಠೆಯಿಂದ ಕಾರ್ಯನಿರ್ವಹಿಸುವುದರೊಂದಿಗೆ ಮುಂದಿನ ದಿಶಾ ಸಮಿತಿ ಸಭೆಗೆ ನಿಖರ ಮಾಹಿತಿ ನೀಡಬೇಕು ಎಂದು ಕೊನೆಯ ಎಚ್ಚರಿಕೆ ನೀಡಿದರು. ಜಿಲ್ಲಾ ಪಂಚಾಯತಿ ಸಿಇಓ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು , ತಮಗೆ ಸಮಾಧಾನ ತಂದಿದೆ ಎಂದರಲ್ಲದೆ ಮಾಹಿತಿ ಸಂಗ್ರಹಣಾ ಕಾರ್ಯವು ಕೇವಲ ಕಚೇರಿ ಮಟ್ಟದಲ್ಲಾಗದೆ ಕ್ಷೇತ್ರ ಮಟ್ಟದಲ್ಲಾಗಬೇಕು.
ಕ್ಷೇತ್ರಗಳಿಗೆ ಭೇಟಿ ನೀಡಿ ಸಮಗ್ರ ಮಾಹಿತಿ ಕಲೆ ಹಾಕುವಲ್ಲಿ ಪಂಚಾಯತಿಗಳ ಪಿಡಿಓಗಳು ಹಾಗೂ ಕಾರ್ಯದರ್ಶಿಗಳು ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಎನ್‍ಆರ್‍ಡಿಎಂಎಸ್‍ನೊಂದಿಗೆ ಸಹಕರಿಸಿದಾಗ ಮಾತ್ರ ಈ ಬೇಸ್ ಮ್ಯಾಪ್ ತಯಾರಿಕೆ ಉದ್ದೇಶ ಸಫಲವಾಗುತ್ತದೆ. ಇದರೊಂದಿಗೆ ಪಂಚಾಯತಿಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಮ್ಮ ಗ್ರಾಮ ನಮ್ಮ ಯೋಜನೆಯಡಿ ಪ್ರಾರಂಭಿಸಲಾಗಿರುವ ಮಿಷನ್ ಅಂತ್ಯೋದಯ ಕಾರ್ಯಕ್ರಮಕ್ಕೆ ಪೂರಕವಾಗಿ ನೆರವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಸಿಇಓ ಶುಭಾ ಕಲ್ಯಾಣ್, ಮತ್ತಿತರರು ಉಪಸ್ಥಿತರಿದ್ದರು.