ಚಿತ್ರದುರ್ಗ: ನಗರದ ಹಲವು ವಿದ್ಯಾರ್ಥಿ ನಿಲಯಗಳಿಗೆ ಶನಿವಾರ ಸಂಸದ ಎ.ನಾರಾಯಣ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಗುಣಮಟ್ಟದ ಆಹಾರ, ಸ್ವಚ್ಛತೆ, ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಹಾಗೂ ನಿಲಯ ಪಾಲಕರಿಗೆ ಸೂಚನೆ ನೀಡಿದರು.
ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪದವಿಪೂರ್ವ ಕಾಲೇಜು ಬಾಲಕರ `ಬಿ’ ವಿದ್ಯಾರ್ಥಿ ನಿಲಯ, ಸರ್ಕಾರಿ ವಿಜ್ಞಾನ ಕಾಲೇಜು ವಿದ್ಯಾರ್ಥಿ ನಿಲಯ, ಸರ್ಕಾರಿ ಕಲಾ ಕಾಲೇಜು `ಎ’ ವಿದ್ಯಾರ್ಥಿ ನಿಲಯಗಳನ್ನು ವೀಕ್ಷಣೆ ಮಾಡಿ, ವಿದ್ಯಾರ್ಥಿಗಳಿಂದ ಕುಂದು ಕೊರತೆಗಳ ಮಾಹಿತಿ ಪಡೆದರು.
ವಿದ್ಯಾರ್ಥಿ ನಿಲಯಗಳ ಊಟದ ಕೊಠಡಿ, ಅಡುಗೆ ಕೋಣೆ, ಸ್ನಾನದ ಗೃಹ, ಶೌಚಾಲಯದ ಸ್ವಚ್ಛತೆ ಕುರಿತು ವೀಕ್ಷಣೆ ಮಾಡಿದ ಅವರು, ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಆಹಾರ, ಸ್ವಚ್ಛತೆ, ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳು ಹಾಗೂ ನಿಲಯ ಪಾಲಕರಿಗೆ ಸೂಚನೆ ನೀಡಿದರು.
ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜುಗಳಿಗೆ ಭದ್ರತೆ ಒದಗಿಸಲು ತಡೆಗೋಡೆ ನಿರ್ಮಿಸಲಾಗುವುದು. ಜತೆಗೆ ಕಾಲೇಜುಗಳಿಗೆ ಅಗತ್ಯವಾಗಿ ಬೇಕಾಗಿರುವ ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ, ಕುರ್ಚಿ, ಟೇಬಲ್ ಪೀಠೋಪಕರಣಗಳು ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯಾರ್ಥಿ ನಿಲಯಗಳಲ್ಲಿರುವ ಸಮಸ್ಯೆ ನಿವಾರಣೆಗಾಗಿ ಈಗಾಗಲೇ ಜಿಲ್ಲೆಗೆ 1 ಕೋಟಿ ರೂ. ಬಿಡುಗಡೆಯಾಗಿದೆ. ಜತೆಗೆ ರಾಜ್ಯ ಸರ್ಕಾರದಿಂದ 75 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ವಿದ್ಯಾರ್ಥಿಗಳಿಗೆ ಅವಶ್ಯಕವಾಗಿ ಬೇಕಾಗಿರುವ ಸವಲತ್ತುಗಳಿಗೆ ಮಾತ್ರ ಬಿಡುಗಡೆಯಾಗಿರುವ ಹಣ ಸದುಪಯೋಗವಾಗಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿ ನಿಲಯಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದೇನೆ’ ಎಂದು ತಿಳಿಸಿದರು.
ವಿದ್ಯಾರ್ಥಿನಿಲಯಗಳಲ್ಲಿ ಇ-ಗ್ರಂಥಾಲಯ, ಶೌಚಾಲಯಗಳ ದುರಸ್ತಿ, ವಿದ್ಯಾರ್ಥಿ ನಿಲಯಗಳ ಮೇಲ್ಛಾವಣಿ ಭದ್ರ ಪಡಿಸುವುದು ಸೇರಿದಂತೆ ಇತರೆ ಮೂಲ ಸೌಲಭ್ಯ ಕಲ್ಪಿಸುವುದರ ಮೂಲಕ ವಿದ್ಯಾರ್ಥಿ ನಿಲಯಗಳಿಗೆ ಕಾಯಕಲ್ಪ ಕಲ್ಪಿಸುವ ಭರವಸೆ ನೀಡಿದರು.ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ವಿದ್ಯಾರ್ಥಿ ನಿಲಯಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಧಿಕಾರಿಗಳು ಭೇಟಿ ನೀಡಿದಂತಹ ಸಂದರ್ಭದಲ್ಲಿ ಸಂದರ್ಶಕರ ರಜಿಸ್ಟರ್‍ನಲ್ಲಿ ಸಹಿ ಮಾಡಬೇಕು. ಅಧಿಕಾರಿಗಳು ಕಡ್ಡಾಯವಾಗಿ ವಾರಕ್ಕೊಮ್ಮೆ ಹಾಸ್ಟೆಲ್‍ಗಳಿಗೆ ಭೇಟಿ ಮಾಡುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿದ್ಯಾರ್ಥಿ ನಿಲಯಗಳಿಗೆ ನ್ಯಾಯಾಧೀಶರು ಭೇಟಿ ನೀಡುತ್ತಿರುವುದರಿಂದ ಹಲವು ವಿದ್ಯಾರ್ಥಿ ನಿಲಯಗಳಲ್ಲಿ ಅನೇಕ ರೀತಿಯ ಪರಿವರ್ತನೆಗಳು ನಡೆಯುತ್ತಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆಯನ್ನು ಕಾಪಾಡಬೇಕು. ಅಗತ್ಯವಿರುವ ಕಾಮಗಾರಿ ಪೂರ್ಣಗೊಳಿಸುವುದು ಸೇರಿದಂತೆ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯವಾಗಿ ಬೇಕಾಗಿರುವ ಮೂಲಸೌಲಭ್ಯ ಕಲ್ಪಿಸಲು ಬದ್ಧವಾಗಿದ್ದು, ಇನ್ನು ಮುಂದೆ ಪ್ರತಿ ತಿಂಗಳಿಗೊಮ್ಮೆ ಹಾಸ್ಟೆಲ್‍ಗಳಿಗೆ ಭೇಟಿ ನೀಡುವ ಕೆಲಸ ಮಾಡುತ್ತೇನೆ. ವಿದ್ಯಾರ್ಥಿ ನಿಲಯಗಳಲ್ಲಿ ಕಂಡು ಬಂದಿರುವ ಲೋಪದೋಷಗಳನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಎರಡು ತಿಂಗಳೊಳಗೆ ಸರಿಪಡಿಸಿಕೊಳ್ಳಬೇಕು. ಸಮಸ್ಯೆಗಳಿಗೆ ಸರಿಯಾಗಿ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸಂಸದ ಎ. ನಾರಾಯಣಸ್ವಾಮಿ ಅವರು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ ಹಾಗೂ ವಿದ್ಯಾರ್ಥಿ ನಿಲಯಗಳ ನಿಲಯ ಪಾಲಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ