ತುರುವೇಕೆರೆ:
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಇತ್ತೀಚೆಗೆ ಡಿ.ಎಸ್.ಪಾಳ್ಯದಲ್ಲಿ ಹೇಮಾವತಿ ನಾಲಾ ತೂಬ್‍ಗಳನ್ನು ಎತ್ತಲು ಹೋಗಿ ಹೋರಾಟ ಮಾಡುತ್ತೇವೆಂದು ತಮ್ಮ ರಾಜಕಾರಣದ ಅಸ್ಥಿತ್ವ ತೋರಿಸಲು ಮುಂದಾಗಿದ್ದಾರೆಂದು ಶಾಸಕ ಮಸಾಲ ಜಯರಾಮ್ ವ್ಯಂಗ್ಯವಾಡಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ವರ್ಷ ಮೈತ್ರಿ ಸರ್ಕಾರದಲ್ಲಿ ನಾನು ಅನ್ನ ನೀರು ಬಿಟ್ಟು ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿದ್ದೆ, ಅಂದು ಈ ಮಾಜಿ ಶಾಸಕರ ಹೋರಾಟಗಳು ಎಲ್ಲಿ ಹೋಗಿದ್ದವು, ಅವರ ಹೋರಾಟ ಹೋರಾಟವೇ ಅಲ್ಲ.
ಅದೊಂದು ರಾಜಕಾರಣದ ಶೋ ಅಷ್ಟೆ. ಜಿಲ್ಲಾಡಳಿತ ಸೆಪ್ಟಂಬರ್ ಮೊದಲ ವಾರದಲ್ಲಿ ನೀರು ಹರಿಸುತ್ತೇವೆಂದು ಸ್ಪಷ್ಟನೆ ನೀಡಿದ್ದರೂ ಸಹಾ ಹೋರಾಡುತ್ತೇನೆಂದು ಹೇಳುತ್ತಾ ರಾಜಕಾರಣದ ಶೋ ತೋರಿಸಿದ್ದಾರೆ, ಅದು ಅವರ ವೈಯಕ್ತಿಕ ರಾಜಕಾರಣದ ನಿಲುವು . ಅದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ನನಗೆ ತಾಲೂಕಿನ ಅಭಿವೃದ್ದಿ ಮುಖ್ಯ.
ಆಗಸ್ಟ್ 30 ರಿಂದ ಸಿ.ಎಸ್.ಪುರ ಭಾಗದ ಕೆರೆಗಳಿಗೆ ನೀರು ಹರಿಸಲಾಗುವುದು ಈಗಾಗಲೇ ಮಂತ್ರಿಗಳಾದ ಜೆ.ಸಿ. ಮಾಧುಸ್ವಾಮಿಯವರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ನೀರು ಹರಿಸುವ ಬಗ್ಗೆ ತಿಳಿಸಿದ್ದಾರೆ, ಅದರಂತೆ ಹಂತ ಹಂತವಾಗಿ ನೀರು ಹರಿಯಲಿದ್ದು, ಸಿ.ಎಸ್.ಪುರ ಭಾಗದ ನಂತರ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ಹರಿಸಲಾಗುವುದು ಎಂದರು.
ಕಳೆದ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಗೆ ಮೂರು ಸಚಿವ ಸ್ಥಾನ ನೀಡಿದ್ದರು, ಹಾಗೂ 2 ನಿಗಮ ಮಂಡಳಿಗಳ ಸ್ಥಾನ ನೀಡಿದ್ದರು, ಆದರೆ ನಮ್ಮ ಬಿಜೆಪಿ ಸರ್ಕಾರದಲ್ಲಿ 4 ಜನ ಶಾಸಕರಿದ್ದರೂ ಕೇವಲ ಒಂದು ಸಚಿವ ಸ್ಥಾನ ನೀಡಿದ್ದಾರೆ. ಅದೂ ಕಾನೂನು ಸಂಸದೀಯ ನೀಡಿರುವುದು ನನಗೆ ಬೇಸರದ ಸಂಗತಿ. ವೈಯಕ್ತಿಕವಾಗಿ ನನಗೆ ಸಚಿವನಾಗುವ ಆಸೆಯಿಲ್ಲ. ಆದರೆ ಜಿಲ್ಲೆಯ ಅಭಿವೃದ್ದಿ ದೃಷ್ಟಿಯಿಂದ ಉತ್ತಮ ಖಾತೆಯೊಂದನ್ನು ಜೆ.ಸಿ.ಮಾಧುಸ್ವಾಮಿಯವರಿಗೆ ನೀಡಬೇಕಿತ್ತು ಎಂದರು.
ಸುದ್ದಿಗೋಷ್ಟೀಯಲ್ಲಿ ಮುಖಂಡರುಗಳಾದ ಗ್ರಾ,ಪಂ.ಅಧ್ಯಕ್ಷ ಮುನಿಸ್ವಾಮಿ, ಚೌಟ್ರಿಕುಮಾರ್, ಸದಾಶಿವಕುಮಾರ್, ಸಿ.ವಿ.ಗಂಗಾಧರಯ್ಯ, ರಾಘು, ಹರೀಶ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ