ಬೆಂಗಳೂರು:
ನಾನೊಬ್ಬ ನಟ. ಮುನಿರತ್ನ ನಿರ್ಮಾಪಕರಷ್ಟೇ. ಕುರುಕ್ಷೇತ್ರ ಸಿನಿಮಾ ಮುಗಿಯುತ್ತಿದ್ದಂತೆ ಅವರ ಹಾಗೂ ನನ್ನ ಸಂಬಂಧ ಮುಗಿದಿದೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಅವರ ಪರ ರೋಡ್‌ಶೋನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುನಿರತ್ನ ನಿರ್ಮಾಪಕರು, ನಾನೊಬ್ಬ ನಟ ಅಷ್ಟೇ, ಕುರುಕ್ಷೇತ್ರ ಸಿನಿಮಾದಲ್ಲಿ ನನಗೊಂದು ಪಾತ್ರ ಕೊಟ್ಟಿದ್ದರು. ಅದನ್ನು ನಾನು ಮಾಡಿದ್ದೇನೆ. ನನ್ನ ಹಾಗೂ ಮುನಿರತ್ನ ನಡುವಿನ ಸಂಬಂಧ ಸಿನಿಮಾಗೆ ಮಾತ್ರ ಸೀಮಿತ ಎಂದು ಹೇಳಿದರು.
ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನ ವೈಯಕ್ತಿಕ ಕಾರಣಕ್ಕಾಗಿ ಪಕ್ಷದ ಕಾರ್ಯಕರ್ತರಿಗೆ ವಿಷ ಹಾಕುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಈ ಬಗ್ಗೆ ಹಲವು ವದಂತಿಗಳನ್ನು ಕ್ಷೇತ್ರದಲ್ಲಿ ಹಬ್ಬಿಸಿದ್ದಾರೆ. ಅವುಗಳಿಗೆ ಕಿವಿಗೊಡುವ ಕೆಲಸವನ್ನು ಕಾರ್ಯಕರ್ತರು ಮಾಡಬಾರದು. ಕೃಷ್ಣಮೂರ್ತಿ ಅವರ ಗೆಲುವಿಗೆ ಕೆಲಸ ಮಾಡಿ ಎಂದು ಕರೆ ನೀಡಿದರು.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿನ ರೇಸ್‌ನಲ್ಲಿ ಇಲ್ಲ ಎಂದು ಎಲ್ಲರೂ ಅಂದುಕೊಂಡಿದ್ದಾರೆ ಅದು ತಪ್ಪು, ತಳಮಟ್ಟದಲ್ಲಿ ಜೆಡಿಎಸ್ ಗೆಲುವಿನ ತರಂಗ ಕಾಣುತ್ತಿದೆ. ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿರುವುದು ಗೊತ್ತಾಗುತ್ತಿದೆ. ಕೃಷ್ಣಮೂರ್ತಿ ಅವರ ತಂದೆ ವೆಂಕಟೇಶ್ ಜೆಡಿಎಸ್‌ಗಾಗಿ 25 ವರ್ಷ ದುಡಿದಿದ್ದಾರೆ. ಸೋತ ತಕ್ಷಣ ಪಕ್ಷ ಬಿಟ್ಟು ಹೋಗುವ ಅಭ್ಯರ್ಥಿಗಳಿಗಿಂತ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದು ಗೆಲ್ಲುವ ವಿಶ್ವಾಸ ಇದೆ ಎಂದರು.
ಇನ್ನು, ಕಾಂಗ್ರೆಸ್‌ನ ಜಾತಿ ಕಾರ್ಡ್ ಬಗ್ಗೆ ಮಾತನಾಡಿದ ಅವರು, ಈಗ ಒಕ್ಕಲಿಗ ಜಾತಿಯನ್ನು ಚುನಾವಣೆಯಲ್ಲಿ ತಂದಿರುವ ಕಾಂಗ್ರೆಸ್‌ನವರೇ ಮುನಿರತ್ನಂ ಅವರನ್ನು ಈ ಹಿಂದೆ ಎರಡು ಬಾರಿ ಟಿಕೆಟ್ ನೀಡಿ ಗೆಲ್ಲಿಸಿದ್ದಾರೆ. ಆಗ ಇರದ ಜಾತಿ ಮೇಲಿನ ಪ್ರೀತಿ, ಅವರಿಗೆ ಈಗ ಬಂದಿದೆ. ನಮ್ಮ ಅಭ್ಯರ್ಥಿಯೂ ಒಕ್ಕಲಿಗ ಜಾತಿಗೆ ಸೇರಿದವರು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ