ಬೆಂಗಳೂರು
ಲಾರಿ ಮಾಲೀಕನ ತೊಡೆಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಲಾರಿ ಕೆಳಗೆ ಎಸೆದಿರುವ ದುರ್ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಂದಾಪುರದ ಬನ್ನಹಳ್ಳಿಯ ಭಾಸ್ಕರ್ (45) ಅವರನ್ನು ಮೂರು ದಿನಗಳ ಹಿಂದೆ ಕೊಲೆಗೈದಿರುವ ದುಷ್ಕರ್ಮಿಗಳು ಲಾರಿ ಕೆಳಗೆ ಮೃತದೇಹವನ್ನು ಯಾರಿಗೂ ಕಾಣದಂತೆ ಹಾಕಿ ಪರಾರಿಯಾಗಿದ್ದರು. ಭಾನುವಾರ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುತ್ತಿದ್ದವರಿಗೆ ಲಾರಿ ಕೆಳಗೆ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಲಾರಿ ಕೆಳಗೆ ಪರಿಶೀಲನೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಭಾಸ್ಕರ್ ಅವರು ಮೂರು ದಿನಗಳ ಹಿಂದೆ ಉತ್ತರಹಳ್ಳಿಯಲ್ಲಿ ಲಾರಿಯಲ್ಲಿ ತುಂಬಿಕೊಂಡು ಬಂದಿದ್ದ ಸಾಮಗ್ರಿಗಳನ್ನು ಇಳಿಸಿ, ತಲಘಟ್ಟಪುರದ ಕಡೆಗೆ ಬಂದಿದ್ದಾರೆ. ಆ ನಂತರ ಅವರನ್ನು ದುಷ್ಕರ್ಮಿಗಳು ಕೊಲೆಮಾಡಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಕೆಳಗೆ ಮೃತದೇಹ ಎಸೆದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿರುವ ತಲಘಟ್ಟಪುರ ಪೊಲೀಸರು, ದುಷ್ಕರ್ಮಿಗಳಿಗಾಗಿ ತೀವ್ರಶೋಧ ನಡೆಸಿದ್ದಾರೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








