ಸಾಲ ವಾಪಾಸ್ ಕೇಳಿದ್ದಕ್ಕೆ ಮಹಿಳೆ ಕೊಲೆ…!!!

ಬೆಂಗಳೂರು

       ಮಗಳ ಮದುವೆ ನಿಶ್ಚಯವಾಗಿದ್ದರಿಂದ ಸಾಲ ನೀಡಿದ ಹಣವನ್ನು ವಾಪಸ್ ಕೇಳಿದ ಮಹಿಳೆಗೆ ಹಣ ಕೊಡುವುದಾಗಿ ನಂಬಿಸಿ ಕಾರಿನಲ್ಲಿ ಕರೆದೊಯ್ದ ಕೊಲೆ ಮಾಡಿ ಮೃತದೇಹವನ್ನು ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಗುರುತು ಸಿಗದಂತೆ ಮಾಡಿದ್ದ ಆರೋಪಿಗಳು ಗೌರಿಬಿದನೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

       ದೊಡ್ಡಬಳ್ಳಾಪುರದ ಕಾಡತಿಪ್ಪೂರುವಿನ ರಾಮಾಂಜಿನಪ್ಪ ಮತ್ತು ನರಸಿಂಹಮೂರ್ತಿಯನ್ನು ಬಂಧಿತ ಆರೋಪಿಗಳಾಗಿದ್ದು ಕಳೆದ ಜ.19ರಂದು ಆರೋಪಿಗಳು ನೆಲಮಂಗಲದ ತಾವರೆಕೆರೆಯ ಶಾಂತಮ್ಮ ಅವರನ್ನು ಕೊಲೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಗುರುತು ಸಿಗದಂತೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

       ಕಳೆದ ಜ.21ರಂದು ಗೌರಿಬಿದನೂರಿನ ಸೋಮಶೆಟ್ಟಿಹಳ್ಳಿ ಬಳಿ ನರಸಿಂಹಯ್ಯ ಎಂಬವರ ಜಮೀನಿನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಗೌರಿಬಿದನೂರು ಪೊಲೀಸರಿಗೆ ಮೃತಳ ಮಗ ಹಾಗೂ ಮಗಳು ಮೃತದೇಹವನ್ನು ಕಂಡು ಇದು ತನ್ನ ತಾಯಿ ಶಾಂತಮ್ಮಳದ್ದೇ ಎಂದು ಪತ್ತೆ ಹಚ್ಚಿದರು. ಹೀಗಾಗಿ ಶಾಂತಮ್ಮಳ ಕೊಲೆ ಪ್ರಕರಣದ ತನಿಖೆಗೆ ಮುಂದಾದ ಪೊಲೀಸರು ಮೊಬೈಲ್ ಕರೆಗಳನ್ನು ಆಧರಿಸಿ ರಾಮಾಂಜಿನಪ್ಪನನ್ನು ಬಂಧಿಸಿದ್ದಾರೆ.

        ವಿಚಾರಣೆಯಲ್ಲಿ ಕೊಲೆಯಾದ ಶಾಂತಮ್ಮ ಗಾರ್ಮೆಂಟ್ಸ್ ನೌಕರಳಾಗಿದ್ದು,ಕೊಲೆ ಮಾಡಿದ ರಾಮಾಂಜಿನಪ್ಪ ಗಾರ್ಮೆಂಟ್ಸ್‍ಗೆ ಮಹಿಳಾ ಕಾರ್ಮಿಕರನ್ನು ಕರೆದೊಯ್ಯವ ವಾಹನದ ಚಾಲಕ ಕಂ ಮಾಲೀಕನಾಗಿದ್ದ.ಪತಿ ಮರಣದ ನಂತರ ಶಾಂತಮ್ಮ ತನ್ನ ಬಳಿ ಇದ್ದ ಹಣವನ್ನು ಪರಿಚಯಸ್ಥ ರಾಮಾಂಜಿನಪ್ಪನಿಗೆ ನೀಡಿದ್ದಳು.ಶಾಂತಮ್ಮಳ ಮಗಳ ಮದುವೆ ನಿಶ್ಚಯವಾಗಿದ್ದು ಮದುವೆಗೆ ಹಣ ಬೇಕು ಕೊಡು ಎಂದು ರಾಮಾಂಜಿನಪ್ಪನ ಬಳಿ ಪಟ್ಟು ಹಿಡಿದಿದ್ದಾಳೆ.

       ಮೊದಲೇ ಮೈ ತುಂಬಾ ಸಾಲ ಮಾಡಿಕೊಂಡಿದ್ದ ರಾಮಾಂಜಿನಪ್ಪ ಸಂಚು ರೂಪಿಸಿ ಶಾಂತಮ್ಮಳನ್ನು ಹಣ ಕೊಡುವುದಾಗಿ ಜ. 19ರಂದು ಕಾರಿನಲ್ಲಿ ಕರೆದುಕೊಂಡು ಬಂದು ಕಾರಿನಲ್ಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಸೋಮಶೆಟ್ಟಿಹಳ್ಳಿ ಜಮೀನೊಂದರಲ್ಲಿ ಎಸೆದು ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಗುರುತು ಸಿಗದಂತೆ ಸುಟ್ಟು ಹಾಕಿದ್ದ. ಈ ಕೃತ್ಯಕ್ಕೆ ರಾಮಾಂಜಿನಪ್ಪ ತೋಟದಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ಸಹಕರಿಸಿರುವುದು ಪತ್ತೆಯಾಗಿದ್ದು ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link