ತುಮಕೂರು
ಕ್ಷುಲ್ಲಕ ವಿಷಯವಾಗಿ ಉಂಟಾದ ಕಲಹ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಹಾಡಹಗಲೇ ತುಮಕೂರು ನಗರದ ಕುಣಿಗಲ್ ರಸ್ತೆಯ ಹೇಮಾವತಿ ಕಚೇರಿ ಬಳಿ ನಡೆದಿದೆ.
ಗುರುವಾರ ಬೆಳಗ್ಗೆ ಸುಮಾರು 10 ಗಂಟೆಯಲ್ಲಿ ಸದಾಶಿವನಗರ ನಿವಾಸಿ ಸೈಯದ್ ಅಜ್ಗರ್ (34) ಎಂಬಾತನಿಗೂ ರಾಜೀವ್‍ಗಾಂಧಿನಗರದ ನಿವಾಸಿಗಳಾದ ಫಯಾಜ್ ಪಾಷ ಮತ್ತು ಇರ್ಪಾನ್ ಎಂಬುವವರಿಗೂ ನಡುವೆ ಕ್ಷುಲ್ಲಕ ಕಾರಣಕ್ಕೆ ಕಲಹ ಉಂಟಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅಜ್ಗರ್ ಒಂದು ಹಂತದಲ್ಲಿ ಫಯಾಜ್‍ಗೆ ಹೊಡೆದಿದ್ದಾನೆ. ಗಾಯಗೊಂಡ ಫಯಾಜ್ ತಕ್ಷಣವೇ ಚೂರಿಯಿಂದ ಸೈಯದ್ ಅಜ್ಗರ್‍ನನ್ನು ಇರಿದಿದ್ದಾನೆ.
ಈ ಘರ್ಷಣೆಯಿಂದ ರಕ್ತ ಗಾಯಗಳುಂಟಾಗಿದ್ದ ಈರ್ವರನ್ನೂ ಆಟೋದಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಈರ್ವರಿಗೂ ಚಿಕಿತ್ಸೆ ನೀಡಿದ್ದು, ಈ ಹಂತದಲ್ಲಿ ಸೈಯದ್ ಅಜ್ಗರ್ ಮೃತಪಟ್ಟಿದ್ದಾನೆ. ಫಯಾಜ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆ ಘಟನೆಗೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ನವೀನ್ ಮೊಕದ್ದಮೆ ದಾಖಲಿಸಿದ್ದಾರೆ. ಆರೋಪಿಗಳಾದ ಫಯಾಜ್‍ಪಾಷ ಮತ್ತು ಘಟನೆ ನಡೆದ ಸಂದರ್ಭದಲ್ಲಿ ಈತನ ಜೊತೆಯಲ್ಲಿದ್ದ ಇರ್ಫಾನ್ ಎಂಬುವವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.