ಕುಣಿಗಲ್ : ಸಿಎಎ ಖಂಡಿಸಿ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ

ಕುಣಿಗಲ್

    ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಮತ್ತು ಪೌರತ್ವ ತಿದ್ದುಪಡಿ ಕಾನೂನನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುವಂತೆ ಒತ್ತಾಯಿಸಿ ಮುಸ್ಲಿಂ ಬಾಂಧವರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟಿಸಿ ತಹಸೀಲ್ದಾರ್ ಅವರಿಗೆ ಮನವಿ ನೀಡುವ ಮೂಲಕ ಒತ್ತಾಯಿಸಿದರು.

   ಪಟ್ಟಣದಲ್ಲಿ ವಿವಿಧ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಿದ್ದ ಮುಸ್ಲಿಂ ಬಾಂಧವರು ಶನಿವಾರ ಸಂಪೂರ್ಣವಾಗಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಕೈಬಿಟ್ಟು ಒಂದೆಡೆ ಸಮಾವೇಶಗೊಳ್ಳುವ ಮೂಲಕ ಮುಸ್ಲಿಂ ಸಂಘಟನೆಗಳು ಹಾಗೂ ಶಾಸಕ ಡಾ. ರಂಗನಾಥ್ ಮತ್ತು ಪ್ರಗತಿಪರ ಹೋರಾಟಗಾರ ನೇತೃತ್ವದಲ್ಲಿ ಪಟ್ಟಣದ ಹೃದಯ ಭಾಗ ಹಕ್ಕೀಂ ಷಾ ಕಾಂಪ್ಲೆಕ್ಸ್ ಮುಂಭಾಗ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

    ಪ್ರತಿಭಟನಾ ಕಾರರನ್ನು ಕುರಿತು ಮಾತನಾಡಿದ ಶಾಸಕ ಡಾ.ರಂಗನಾಥ್ ಕೇಂದ್ರ ಸರ್ಕಾರ ಧರ್ಮದ ಆಧಾರದಲ್ಲಿ ತಾರತಮ್ಯಯುಕ್ತ ಪೌರತ್ವ ನೀಡುವ ಕಾನೂನನ್ನು ಜಾರಿಗೆ ತಂದು ದೇಶದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಿ ಇಂದು ಇಡೀ ದೇಶದಾದ್ಯಂತ ಅಹಿತಕರ ಘಟನೆಗೆ ನೇರವಾಗಿ ಕೇಂದ್ರ ಸರ್ಕಾರವೆ ಕಾರಣ ಎಂದು ಕಟುವಾಗಿ ಟೀಕಿಸಿದರು.

    ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಎಂದಿಗೂ ದೇಶದ ಅಶಾಂತಿಗೆ ಭಂಗವನ್ನು ಉಂಟು ಮಾಡದೆ ಸಂಪೂರ್ಣವಾಗಿ ಸಹೋದರತ್ವದ ಸಹಬಾಳ್ವೆಯನ್ನು ಮಾಡುವಂತಹ ಆಡಳಿತವನ್ನು ನೀಡುತ್ತ ಹಲವು ದಶಕಗಳ ಕಾಲ ಈ ದೇಶವನ್ನು ಕಟ್ಟಿ ಬೆಳೆಸಿದ ಕೀರ್ತಿ ಸಲ್ಲುತ್ತದೆ ಎಂದ ಅವರು, ಇಂದು ಕೇಂದ್ರ ಸರ್ಕಾರ ಜಾತಿ ತಾರತಮ್ಯ ಮಾಡುವ ಮೂಲಕ ಅಸಮಾನತೆ ತಾಂಡವವಾಡುವಂತೆ ಮಾಡಿದ್ದಾರೆ. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರ ಆಶಯದಂತೆ ನೆಹರು, ಇಂದಿರಾ ಗಾಂಧಿಯವರು ಆಳ್ವಿಕೆ ಮಾಡಿಕೊಂಡು ಬಂದಿದ್ದರು. ಆದರೆ ಸರ್ವಾಧಿಕಾರಿಯಾಡಳಿತವನ್ನು ಇಂದು ಮೋದಿಯವರ ಸರ್ಕಾರ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರಗತಿಪರ ಚಿಂತಕ ಜಿ.ಕೆ. ನಾಗಣ್ಣ ಮಾತನಾಡಿ, ಇಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್.ಆರ್.ಸಿ. ಹಾಗೂ ಸಿಎಎ ಕಾಯ್ದೆಗಳು ಬರೀ ಮುಸ್ಲಿಮರಿಗೆ ಮಾತ್ರ ಅನ್ಯಾಯವಾಗುವುದಿಲ್ಲ. ದೇಶದಲ್ಲಿರುವ ಮೂಲನಿವಾಸಿಗಳಾದ ದಲಿತರು, ಅಲೆಮಾರಿಗಳು, ಹಿಂದುಳಿದ ಜನರಿಗೂ ಅನ್ಯಾಯವಾಗುತ್ತದೆ. ಆದ್ದರಿಂದ ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಇಂದಿನ ಬ್ರಾಹ್ಮಣಶಾಹಿತ್ವವನ್ನು ಮತ್ತೆ ಮೇಲ್ಮಟ್ಟಕೆ ತರಲು ಸಂಚು ರೂಪಿಸುತ್ತಿರುವ ಕೇಂದ್ರದ ನೀತಿಯನ್ನು ಖಂಡಿಸಿ, ಒಗ್ಗಟ್ಟಿನಿಂದ ಎಲ್ಲರೂ ಹೋರಾಟ ಮಾಡುವ ಮೂಲಕ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು.

    ದೇಶದ ನಾಗರಿಕರಿಗೆ ತಾರತಮ್ಯ ಮಾಡದೆ ಪ್ರತಿಯೊಬ್ಬರನ್ನು ಸಮಾನರಾಗಿ ಕಾಣುವ ಮೂಲಕ ದೇಶವನ್ನು ಉಳಿಸಿ ಬೆಳಸಬೇಕು. ಬಿಜೆಪಿಯವರು ನಿತ್ಯ ಹೊಡೆದಾಟ, ಸಾವು, ನೋವು ಸೃಷ್ಟಿಸಿ ಅಧಿಕಾರ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ರಹಮನ್‍ಷರೀಪ್, ಅಬ್ದುಲ್‍ಹಮೀದ್, ಏಜಾಜ್‍ಪಾಷಾ, ರಹಮತ್‍ವುಲ್ಲಾ, ಮುಮ್ತಾಜ್‍ಅಹಮದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ತೋಳಿಗೆ ಕಪ್ಪುಪಟ್ಟಿಯನ್ನು ಕಟ್ಟಿಕೊಂಡು ಶಾಂತಿಯುತ ಪ್ರತಿಭಟನೆಯನ್ನು ಮಾಡಿದರು. ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ವಿಶ್ವನಾಥ್ ಅವರಿಗೆ ಮನವಿ ನೀಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೂಬಸ್ತ್ ಮಾಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap