ಪರಶುರಾಮಪುರ
ಟಿಎನ್ ಕೋಟೆ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸೇವಾ ಟ್ರಸ್ಟ್ (ರಿ) ಸೇವಾಸಮಿತಿ, ಗುಡಿಕಟ್ಟೆಯ ಭಕ್ತರು, ಗ್ರಾಮಸ್ಥರು ಗ್ರಾಮದ ಹೊರವಲಯದ ವೇದಾವತಿ ನದಿಯಲ್ಲಿ ಸ್ವಾಮಿಗೆ ಗಂಗಾಪೂಜೆ ನೆರವೇರಿಸಿ ನಂತರ ಸಾರೋಟಿನಲ್ಲಿ ಸ್ವಾಮಿಯ ಮೂರ್ತಿಗಳನ್ನಿಟ್ಟು ಗ್ರಾಮದಲ್ಲಿ ಜನಪದ ಕಲಾತಂಡಗಳ ಮೂಲಕ ಮೆರವಣಿಗೆ ನಡೆಸಿದರು.
ಟಿಎನ್‍ಕೋಟೆ ಗ್ರಾಮದಲ್ಲಿ ಸ್ವಾಮಿಯ ಭಕ್ತರು ಸೂರ್ಯೋದಯದ ವೇಳೆಗೆ ಮೈಲಾರಲಿಂಗೇಶ್ವರಸ್ವಾಮಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಿ, ಸನಿಹದ ವೇದಾವತಿ ನದಿಗೆ ಭಕ್ತರು ಕೊಂಡೊಯ್ದು ಗಂಗಾಪೂಜೆ, ನೈವೇದ್ಯ, ಪ್ರಾಣ ಪ್ರತಿಷ್ಟಾಪನೆ, ಕುಂಭಾಕಳಶ, ನಂದೀಧ್ವಜ, ಗೊರವಯ್ಯನ ಕುಣಿತದ ಮೂಲಕ ಹೂವಿನ ಅಲಂಕೃತ ಬೆಳ್ಳಿ ಸಾರೋಟಿನಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಿದರು.
ಈ ವೇಳೆ ಅಲಂಕೃತ ಸಾರೋಟಿನಲ್ಲಿ ಸ್ವಾಮಿಯ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ಮೆರವಣಿಗೆಯ ಮೂಲಕ ಗ್ರಾಮ ಪರ್ಯಟನೆ, ಕೋರಣ್ಯ ಭಿಕ್ಷೆ, ಭಕ್ತರಿಗೆ ಭಂಡಾರ ನೀಡುವ ಉತ್ಸವ ನಡೆಸಿದರು. ನಂತರ ವೇದ ಬ್ರಹ್ಮ ಅನಂತರಾಮ ಗೌತಮ್, ನಾಗಶಯನ ಗೌತಮ್ ಇವರ ನೇತೃತ್ವದಲ್ಲಿ ನೂತನ ದೇವಾಲಯದ ಪ್ರವೇಶೋತ್ಸವ ಜರುಗಿತು.
ಭಾನುವಾರ ಸಂಜೆ ಮೈಲಾರಲಿಂಗನ ನೂತನ ದೇವಸ್ಥಾನದಲ್ಲಿ ಗಣಪತಿ ಪೂಜೆ, ಶುಧ್ದಪುಣ್ಯಾಹ, ಋತಿಗ್ರಹಣ, ದೇವನಾಂದಿ, ಕಳಶಸ್ಥಾಪನೆ, ನವಗ್ರಹಾರಾಧನೆ, ವಾಸ್ತುಶಾಂತಿ, ಮೃತ್ಯುಂಜಯ ಹೋಮ, ಅಷ್ಟದಿಕ್ಪಾಲಕರ ಆವಾಹನೆ, ಅಗ್ನಿಪ್ರತಿಷ್ಟಾಪನೆ, ನವಗ್ರಹ ಶಾಂತಿ, ವಾಸ್ತು ರುದ್ರಹೋಮ, ಪರಿವಾರ ದೇವತಾ ಹೋಮಗಳು, ಜಪಗಳು, ನಂತರ ಮಹಾಮಂಗಳಾರತಿ ಸೇವೆ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.
ಭಾನುವಾರ ರಾತ್ರಿಯಿಡಿ ಸ್ವಾಮಿಯ ಭಕ್ತರು ಗ್ರಾಮದಲ್ಲಿ ಗೊರವಯ್ಯನವರ ಕುಣಿತ, ಮೈಲಾರಲಿಂಗನ ಹಾಡುಗಳು, ದೇವರ ಕಥನಗೀತೆಗಳನ್ನು ಜನಪದರು ಹಾಡಿ ಸ್ವಾಮಿಯ ಉತ್ಸವ ನಡೆಸಿದರು. ಈ ವೇಳೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷ ಓ ಬೈಲಪ್ಪ, ಶ್ರೀ ಮೈಲಾರಲಿಂಗೇಶ್ವರ ಸೇವಾ ಟ್ರಸ್ಟ್ ಸೇವಾಸಮಿತಿಯ ಅಧ್ಯಕ್ಷ ಪ್ರಾಧ್ಯಾಪಕ ಎಂ ಶಿವಲಿಂಗಪ್ಪ, ಜಿಪಂ ಸದಸ್ಯೆ ಶಶಿಕಲಾಸುರೇಶಬಾಬು, ತಾಪಂ ಸದಸ್ಯ ಕರಡಪ್ಪ, ಗ್ರಾಮದ ಹನ್ನೆರೆಉ ಕೈವಾಡಸ್ಥರು, ಚೌಳೂರು ಬಸವರಾಜು, ದುರ್ಗದ ಒಡೆಯರ್, ಭಕ್ತರಾದ ಬಸವರಾಜು, ಮಹಾಲಿಂಗಪ್ಪ, ಮಂಜುನಾಥ, ಬಸವರಾಜು, ಸಚಿನ್, ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ಗುರುಸ್ವಾಮಿ, ತಿಮ್ಮಯ್ಯ, ಸುತ್ತೇಳು ಹಳ್ಳಿಗಳ ಭಕ್ತರು, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಕುರುಬ ಸಮುದಾಯದವರಿದ್ದರು.