ಬೆಂಗಳೂರು
ಮೈಸೂರು ಟರ್ಫ್ ಕ್ಲಬ್‍ನ ಗುತ್ತಿಗೆ ಅವಧಿಯನ್ನು 30 ವರ್ಷಗಳ ಕಾಲ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಸೂರು ಟರ್ಫ್ ಕ್ಲಬ್‍ನ ಗುತ್ತಿಗೆ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಷಯ ತಿಳಿಸಿದರು.
ಮೈಸೂರು ಟರ್ಫ್ ಕ್ಲಬ್‍ನ ಗುತ್ತಿಗೆ ಅವಧಿಯನ್ನು ವಿಸ್ತರಿಸುವಾಗ ಲಭ್ಯವಾಗುವ ವಾರ್ಷಿಕ ಲಾಭದಲ್ಲಿ ಶೇಕಡಾ ಎರಡರಷ್ಟು ಹೆಚ್ಚಳ ಮಾಡಬೇಕು ಎಂಬ ಕರಾರು ವಿಧಿಸಲಾಗಿದೆ ಎಂದು ಹೇಳಿದರು.
ಜಯಚಾಮರಾಜೇಂದ್ರ ಗಾಲ್ಪ್ ಕ್ಲಬ್‍ನ ಗುತ್ತಿಗೆ ಅವಧಿಯನ್ನೂ ಮೂವತ್ತು ವರ್ಷ ವಿಸ್ತರಣೆ ಮಾಡಲಾಗಿದ್ದು ವಾರ್ಷಿಕ ಲಾಭದಲ್ಲಿ ಶೇಕಡಾ ಎರಡರಷ್ಟು ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕು ಎಂದು ಕರಾರು ವಿಧಿಸಲಾಗಿದೆ ಎಂದರು.ಬೆಂಗಳೂರು ಟರ್ಫ್ ಕ್ಲಬ್‍ನ್ನು ತೆರವುಗೊಳಿಸಲು ಈ ಹಿಂದೆ ನಿರ್ಧಾರ ಕೈಗೊಳ್ಳಲಾಗಿತ್ತು.ಆದರೆ ಈ ತಕರಾರಿನ ನಡುವೆ ಸದರಿ ಕ್ಲಬ್ 31.12 ಕೋಟಿ ರೂಗಳಷ್ಟು ಬಾಡಿಗೆ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡುವ ಪ್ರಕ್ರಿಯೆ ಬಾಕಿ ಇದೆ.
ಬೆಂಗಳೂರು ಟರ್ಫ್ ಕ್ಲಬ್‍ನ್ನು ತೆರವುಗೊಳಿಸಬೇಕು ಎಂಬ ಈ ಹಿಂದಿನ ನಿರ್ಧಾರಕ್ಕೆ ಸರ್ಕಾರ ಬದ್ಧ.ಆದರೆ ಈ ನಿರ್ಧಾರದ ವಿರುದ್ಧ ಸದರಿ ಕ್ಲಬ್ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದೆ ಎಂದು ಹೇಳಿದರು.ಈಗ ಬೆಂಗಳೂರು ಟರ್ಫ್ ಕ್ಲಬ್‍ನ್ನು ತೆರವುಗೊಳಿಸುವ ಪ್ರಕ್ರಿಯೆಗೂ ತಡೆಯಾಜ್ಞೆ ಬಂದಿದೆ.ಅತ್ತ ಅದು ಪಾವತಿಸಬೇಕಾದ ಬಾಡಿಗೆ ಹಣವೂ ಬಾಕಿ ಇದೆ.ಹೀಗಾಗಿ ತಡೆಯಾಜ್ಞೆ ತೆರವುಗೊಳಿಸುವ ಪ್ರಕ್ರಿಯೆ ಒಂದು ಕಡೆ ನಡೆಯುತ್ತಿರಲಿ,ಮತ್ತೊಂದು ಕಡೆ ಬಾಡಿಗೆ ಹಣ ವಸೂಲಿ ಮಾಡಿಕೊಳ್ಳಬೇಕು ಎಂದು ಸಚಿವ ಸಂಪುಟ ತೀರ್ಮಾನಿಸಿದೆ.