ಮೈತ್ರಿ ಅಭ್ಯರ್ಥಿಗೆ ಬೆಂಬಲಿಸಲು ಮಂಡ್ಯ ಕಾಂಗ್ರೆಸ್ ಮುಖಂಡರಿಗೆ ಸಿದ್ದರಾಮಯ್ಯ ಸೂಚನೆ

ಬೆಂಗಳೂರು

        ಮಂಡ್ಯ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈತ್ರಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.

      ನಿನ್ನೆ ಮಧ್ಯರಾತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಮಂಡ್ಯ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರ ಸಭೆ ನಡೆಸಲಾಗಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷದ ಮರ್ಯಾದೆ, ಗೌರವ ಕಾಪಾಡಬೇಕು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

      ಮಂಡ್ಯ ಹಾಗೂ ತುಮಕೂರು ಸೇರಿದಂತೆ ರಾಜ್ಯದ ಕೆಲ ಲೋಕಸಭಾ ಕ್ಷೇತ್ರಗಳು ಕಾಂಗ್ರೆಸ್ ಕೈ ತಪ್ಪಿದ್ದಕ್ಕೆ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದ್ದು,ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ಪ್ರಚಾರ ನಡೆಸುತ್ತಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ.

       ನಾನು ಹಾಗೂ ದೇವೇಗೌಡರು ಮಂಡ್ಯಕ್ಕೆ ಪ್ರಚಾರ ಮಾಡಲು ಬಂದಾಗ ನೀವೆಲ್ಲಾ ಜೊತೆಗಿರಬೇಕು ಎಂದ ಸಿದ್ದರಾಮಯ್ಯ, ಮೈತ್ರಿ ಅಭ್ಯರ್ಥಿ ಗೆಲ್ಲಿಸದಿದ್ದರೆ ಬಹಳ ದೊಡ್ಡ ತಪ್ಪು ಸಂದೇಶ ರವಾನೆಯಾಗುತ್ತದೆ. ಒಂದು ವೇಳೆ ನಿಖಿಲ್ ಗೆಲ್ಲದಿದ್ದರೆ ಕ್ಷೇತ್ರ ಕಾಂಗ್ರೆಸ್ ಕೈ ತಪ್ಪಲಿದೆ. ಒಂದು ವೇಳೆ ಸುಮಲತಾ ಗೆದ್ದರೆ ಅವರು ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ಮುಖಂಡರಿಗೆ ಮನವರಿಕೆ ಮಾಡಿದರು.

      ಜೆಡಿಎಸ್ ಗೆದ್ದರೆ ಮುಂದೆ ಕಾಂಗ್ರೆಸ್ ಕೈ ತಪ್ಪಿದ ಕ್ಷೇತ್ರಗಳನ್ನು ಮತ್ತೇ ಕೈ ವಶ ಮಾಡಿಕೊಳ್ಳಬಹುದು. ಹಾಸನ, ಮೈಸೂರು, ಮಂಡ್ಯ ಹಾಗೂ ತುಮಕೂರಲ್ಲಿ ನಾವು ಗೆಲ್ಲಬೇಕಿದೆ. ಚುನಾವಣೆವರೆಗೂ ಎಲ್ಲವನ್ನೂ ಸಹಿಸಿ ತಾಳ್ಮೆಯಿಂದಿರಿ ಎಂದು ಮುಖಂಡರನ್ನು ಸಿದ್ದು ಸಮಾಧಾನ ಪಡಿಸಿದರು.

       ಹೈಕಮಾಂಡ್ ಸೂಚನೆ ಮೇರೆಗೆ ಸಭೆ ನಡೆಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಮಾಜಿ ಶಾಸಕ ಚೆಲುವರಾಯ ಸ್ವಾಮಿ, ಅರವಿಂದ ಸಾಗರ್ ಮತ್ತು ಬಂಡಿ ಸಿದ್ದೇಗೌಡ ಸೇರಿದಂತೆ ಪ್ರಮುಖ ಮುಖಂಡರು‌ ಉಪಸ್ಥಿತರಿದ್ದರು.ಮೇಲ್ನೋಟಕ್ಕೆ ಸಿದ್ದು ಮಾತಿಗೆ ಆಯ್ತು ಅನ್ನೋ ರೀತಿಯಲ್ಲಿ ಒಪ್ಪಿ ಮಂಡ್ಯ ಮುಖಂಡರು ಸಭೆಯಿಂದ ಹೊರ ನಡೆದಿದ್ದಾರೆ. ಆದರೆ, ಚುನಾವಣಾ ಫಲಿತಾಂಶ ನಂತರವಷ್ಟೇ ಯಾರು, ಯಾರಿಗೆ ಬೆಂಬಲಿಸಿದ್ದಾರೆ ಎಂಬುದು ಹೊರಬೀಳಿಲಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link