ಹರಿಹರ:
ದಿವಂಗತ ಇಂದಿರಾಗಾಂಧಿ ಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ಪಾಕಿಸ್ತಾನದ ವಿರುದ್ಧ ಅನೇಕ ಸರ್ಜಿಕಲ್ ಸ್ಟ್ರೈಕ್ ಮತ್ತು ಯುದ್ಧ ಸಹ ನಡೆದಿವೆ ಎಂದು ಕಾಂಗ್ರೆಸ್ ಮುಖಂಡ ಹಾಗು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ನಗರದ ಪ್ರಮುಖ ಬೀದಿ ಗಳಲ್ಲಿ ಭಾನುವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪ ನವರ ಪರ ಬಹಿರಂಗ ಪ್ರಚಾರದ ಕೊನೆಯ ದಿನದಂದು ಬೃಹತ್ ರ್ಯಾಲಿಯಲ್ಲಿ ಸೇರಿದ್ದ ಭಾರೀ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ಮೋದಿಯವರು ಕೇವಲ ಒಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದ ಮಾತ್ರಕ್ಕೆ ನಾವು ಏನನ್ನು ಸಾಧಿಸಿದ್ದೇವೆ ಎಂದು ಜನರ ಮುಂದೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು.
ಬಿಜೆಪಿ ಮುಖಂಡರುಗಳು ಕಳೆದ ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂದು ಎಲ್ಲೆಂದರಲ್ಲಿ ಪ್ರಶ್ನಿಸುತ್ತಿದ್ದಾರೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದ ಸ್ಥಿತಿ ಹೇಗಿತ್ತು ದೇಶದ ಹಳ್ಳಿಗಳು, ಪಟ್ಟಣಗಳು ಯಾವ ರೀತಿ ಇದ್ದವು.ಈಗ ಹೇಗಿವೆ ಎಂಬುದನ್ನು ಅವಲೋಕಿಸ ಬೇಕು ಎಂದು ಹೇಳಿದರು.
ಸ್ವಾತಂತ್ರ್ಯಾನಂತರ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಯೇ ಅಥವಾ ಈಗ ಮೋದಿ ಬಂದ ನಂತರದಲ್ಲಿ ಆಗಿವೆಯೋ ಎಂದು ಚಿಂತಿಸಬೇಕು.
ಅಲ್ಲದೆ ದೇಶದಲ್ಲಿ ಅನೇಕ ವಿಶ್ವವಿದ್ಯಾಲಯ ಗಳು, ಮೆಡಿಕಲ್ ಕಾಲೇಜುಗಳು ಮತ್ತು ಅನೇಕ ವಿದ್ಯಾ ಕೇಂದ್ರಗಳು ಸ್ಥಾಪನೆ ಮಾಡಲಾಗಿದೆ.ಅನೇಕ ಉಪಗ್ರಹಗಳನ್ನು ಗಗನಕ್ಕೆ ಹರಿಸಲಾಗಿದೆ ಎಂಬ ಸತ್ಯವನ್ನು ಮರೆಯುವಂತಿಲ್ಲ ಎಂದು ಹೇಳಿದರು.
ಇಂದು ನಡೆಯುತ್ತಿರುವ ಈ ಚುನಾವಣೆಯು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ರಕ್ಷಕರ ಮಧ್ಯೆ ನಡೆಯುವ ಚುನಾವಣೆಯಾಗಿದೆ ಆದ್ದರಿಂದ ಮತದಾರ ಬಾಂಧವರು ತುಂಬಾ ಯೋಚಿಸಿ ಮತ ದಾನ ಮಾಡಲು ವಿನಂತಿಸಿದರು.
ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ ಈ ಚುನಾವಣೆಯ ಪ್ರಚಾರಕ್ಕಾಗಿ ನಾನು ಜಿಲ್ಲೆ ಯಾದ್ಯಂತ ಪ್ರವಾಸ ಮಾಡಿದ್ದೇನೆ, ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪನವರು ಖಂಡಿತವಾಗಿಯೂ ಜಯ ಗಳಿಸುತ್ತಾರೆ ಜನರ ಈ ಬಾರಿ ಜಿಲ್ಲೆಯ ಜನರ ಚಿತ್ತ ಮೈತ್ರಿ ಅಭ್ಯಾರ್ಥಿಯ ಪರವಾಗಿದೆ ಎಂದರು .
ಜಿಲ್ಲೆಯಾದ್ಯಂತ ಕಾಂಗ್ರೆಸ್-ಜೆಡಿಎಸ್ ಕಾರ್ಯ ಕರ್ತರು ಮೈತ್ರಿ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ನಡೆಸಿದ್ದು ಮಂಜಪ್ಪನವರು ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದ ಅವರು ಚುನಾವಣೆಗೆ ಕೆಲವೇ ಗಂಟೆಗಳು ಮಾತ್ರ ಇದ್ದು ಕಾರ್ಯಕರ್ತರು ತುಂಬಾ ಎಚ್ಚರಿಕೆಯಿಂದ ಪ್ರಚಾರ ಮಾಡುವಂತೆ ಕಿವಿಮಾತು ಹೇಳಿದರು.
ಇದೇ ವೇಳೆ ಶಾಸಕ ಎಸ್.ರಾಮಪ್ಪ ಮಾತ ನಾಡಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಕ್ಷೇತ್ರ ದಾದ್ಯಂತ ಪ್ರವಾಸ ಮಾಡಿ ಪ್ರಚಾರ ನಡೆಸಿದ್ದೇನೆ. ಮೈತ್ರಿ ಅಭ್ಯರ್ಥಿಯ ಪರ ಜನರ ಹೆಚ್ಚಿನ ಬೆಂಬಲ ಇದ್ದು, ಯಾವುದೇ ಅಲೆ ಏನೂ ಮಾಡಲು ಸಾಧ್ಯ ವಿಲ್ಲ.ಅತಿ ಹೆಚ್ಚು ಮತಗಳ ಅಂತರದಲ್ಲಿ ಮಂಜಪ್ಪ ಗೆಲ್ಲಲಿದ್ದಾರೆ.
ಬಿಜೆಪಿ ನಾಯಕರುಗಳು ಪ್ರಚಾರದ ವೇಳೆ ತಮ್ಮ ಪ್ರಚಾರದಲ್ಲಿ ಮೋದಿಯವರನ್ನು ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ, ಆದರೆ ಇಲ್ಲಿನ ಬಿಜೆಪಿ ನಾಯಕರು ಯಾವುದೇ ಮಾಡಿಲ್ಲವೇ ಹಾಗಿದ್ದರೆ ಏಕೆ ಮೋದಿಯವರ ಹೆಸರಿನಿಂದ ಮತ ಕೇಳುತ್ತಿದ್ದಾರೆ ಎಂದು ಬಿಜೆಪಿಯವರನ್ನು ಪ್ರಶ್ನಿಸಿದರು.
ಇದೇ ವೇಳೆ ವಿಧಾನಪರಿಷತ್ ಮಾಜಿ ಸದಸ್ಯೆ ಜಲಜಾ ನಾಯಕ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ ಮುಂತಾದವರು ಮಾತನಾಡಿದರು.
ಬೃಹತ್ ರ್ಯಾಲಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷರುಗಳಾದ ಬಿ.ರೇವಣಸಿದ್ದಪ್ಪ,ಶಂಕರ್ ಖಟಾವ್ಕರ್, ತಾ.ಪಂ.ಮಾಜಿ ಸದಸ್ಯ ಬೆಳ್ಳೂಡಿ ಬಸವರಾಜ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಲ್.ಬಿ.ಹನುಮಂತಪ್ಪ,ಎಂ.ಬಿ.ಅಬಿದಾಲಿ,ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್ ಪಟೇಲ್, ಮುಖಂಡರುಗಳಾದ ಬಂಡೇರ ತಿಮ್ಮಣ್ಣ,ಡಿ.ಜಿ. ರಘುನಾಥ್,ಕೆ.ಮರಿದೇವ,ಪಿ.ಎನ್.ವಿರೂಪಾಕ್ಷ, ರತ್ನಮ್ಮ,ಸಿ.ಎನ್.ಹುಲಿಗೇಶ್,ಸನಾವುಲ್ಲಾ,ಗೀತಾ ಕದರಮಂಡಲಗಿ, ನೇತ್ರಾವತಿ, ವಿದ್ಯಾ,ಲಕ್ಷ್ಮಿ ಆಚಾರ್ ಎಚ್.ನಿಜಗುಣ,ಎಂ.ಎಸ್. ಆನಂದ್ ಕುಮಾರ್, ಎಚ್ ಶಿವಪ್ಪ ಇನ್ನೂ ಅನೇಕ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.