ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಸಹಕರಿಸಿ:ಸಿದ್ದರಾಮಯ್ಯ

ತುಮಕೂರು:

     ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹೆಚ್.ಡಿ.ದೇವೇಗೌಡರ ಗೆಲುವಿಗೆ ಎಲ್ಲರೂ ಸಹಕರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

       ಬುಧವಾರ ಸಂಜೆ ಮಧುಗಿರಿ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ಸಾಗುವ ಮಾರ್ಗದಲ್ಲಿ ತುಮಕೂರು ಕಾಳಿದಾಸ ವಿದ್ಯಾವರ್ಧಕ ಸಂಘಕ್ಕೆ ಭೇಟಿ ನೀಡಿದ ಅವರು, ಅಲ್ಲಿ ಸೇರಿದ್ದ ಸಮುದಾಯದ ಮುಖಂಡರುಗಳನ್ನುದ್ದೇಶಿಸಿ ಮಾತನಾಡಿದರು.

       ತುಮಕೂರು ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಸ್ಪರ್ಧಿಸಿದ್ದಾರೆ. ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡುವ ಇರಾದೆ ಹೊಂದಿದ್ದಾರೆ. ಅಂತಹವರನ್ನು ಸ್ಮರಿಸುವುದು ಮತ್ತು ಗೌರವಿಸುವುದು ನಮ್ಮ ಕರ್ತವ್ಯ. ಮೈತ್ರಿ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ಇರುವ ಕಾರಣ ನೀವೆಲ್ಲರೂ ಅವರನ್ನು ಬೆಂಬಲಿಸಬೇಕಾಗಿದೆ ಎಂದು ಮನವಿ ಮಾಡಿದರು.

         ಬಂಡೆಪ್ಪ ಕಾಶಂಪುರ್ ಮಾತನಾಡಿ ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಹಾಕಿರುವ ಪರಿಣಾಮ ಬಹುತೇಕ ಕಡೆ ಗೆಲುವು ಸಾಧಿಸುವ ಖಾತ್ರಿ ಇದೆ. ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಎಲ್ಲರ ಸಹಕಾರ ಮುಖ್ಯ. ನಾನು ಗೆದ್ದದ್ದು ಎಲ್ಲಾ ಜನರ ಸಹಕಾರದಿಂದ. ಆನಂತರ ಮಂತ್ರಿಯಾದದ್ದು ಕುರುಬ ಸಮಾಜದ ಸಹಕಾರದಿಂದ ಎಂದರು.

        ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಮಾತನಾಡಿ ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ಈಗಾಗಲೇ ಪ್ರಚಾರ ಸಭೆಗಳನ್ನು ಆಯೋಜಿಸಲಾಗಿದೆ. ಯಾವುದೇ ಗೊಂದಲ ಬೇಡ. ಬರುವ ಶನಿವಾರ ಸಮಾಜದ ಮುಖಂಡರುಗಳ ಸಭೆ ಕರೆದಿದ್ದು, ಮತ್ತೊಮ್ಮೆ ಅಲ್ಲಿ ಸ್ಪಷ್ಟಪಡಿಸಲಾಗುವುದು ಎಂದರು.ಸಭೆಯಲ್ಲಿ ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ಮಾಲೂರಪ್ಪ, ಆರ್.ಸಿ.ಅಂಜನಪ್ಪ, ಚಿಕ್ಕವೆಂಕಟಯ್ಯ ಸೇರಿದಂತೆ ನಿರ್ದೇಶಕರುಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ