ಸರ್ಕಾರದ ಸಾಧನೆ ಒಳಗೊಂಡ “ಮೈತ್ರಿಪರ್ವ” ನಾಳೆ ಲೋಕಾರ್ಪಣೆ.

ಬೆಂಗಳೂರು

     ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ವರ್ಷ ತುಂಬಿದ ಬೆನ್ನಲ್ಲೇ ಸರ್ಕಾರದ ಸಾಧನೆ ಬಣ್ಣಿಸುವ “ಮೈತ್ರಿಪರ್ವ” ಕೃತಿ ಗುರುವಾರ ಬಿಡುಗಡೆಯಾಗಲಿದೆ.

      ವಿಧಾನಸಭಾ ಚುನಾವಣೆಯ ನಂತರ ರೂಪುಗೊಂಡ ಅತಂತ್ರ ಪರಿಸ್ಥಿತಿ, ಅದನ್ನು ನಿವಾರಿಸಲು ಜೆಡಿಎಸ್ – ಕಾಂಗ್ರೆಸ್ ಒಗ್ಗೂಡಿ ಸರ್ಕಾರ ರಚಿಸಬೇಕಾದ ಸೂಕ್ಷ್ಮ ಸನ್ನಿವೇಶ. ನಂತರದ ದಿನಗಳಲ್ಲಿ ಎದುರಾದ ಆತಂಕಗಳ ನಡುವೆ ಸರ್ಕಾರ ಒಂದು ವರ್ಷದಲ್ಲಿ ಮಾಡಿದ ಸಾಧನೆಯ ವಿವರ ಕೃತಿಯಲ್ಲಿರಲಿದೆ.

     ಅಧಿಕಾರಕ್ಕೆ ಬಂದ ನಂತರ ಕುಮಾರಸ್ವಾಮಿ ಎರಡು ಬಜೆಟ್ ಗಳನ್ನು ಮಂಡಿಸಿದ್ದು ಆ ಮೂಲಕ 430ಭರವಸೆಗಳ ಪೈಕಿ 400 ಭರವಸೆಗಳನ್ನು ಈಡೇರಿಸಿದ್ದು, ರೈತರ ಸಾಲ ಮನ್ನಾ ಅನುಷ್ಠಾನ, ಸಾಲ ಮನ್ನಾಗೆ ನಿಗದಿಯಾಗಿದ್ದ 43 ಸಾವಿರ ಕೋಟಿ ರೂ ಬೇಕು ಅಂದಾಜು ಮೊತ್ತ 24 ಸಾವಿರ ಕೋಟಿ ರೂಗಳಿಗೆ ಇಳಿದ ಕುತೂಹಲಕಾರಿ ವಿದ್ಯಮಾನದ ಕೃತಿಯಲ್ಲಿದೆ.

     ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಸರ್ಕಾರವೊಂದು ಎರಡು ಲಕ್ಷ ರೂ ಗಳವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಿದ ಬೆಳವಣಿಗೆ ಇದಾಗಿದ್ದು ಈಗಾಗಲೇ ಇಪ್ಪತ್ತು ಸಾವಿರ ಕೋಟಿ ರೂಗಳಷ್ಟು ಕೃಷಿ ಸಾಲ ಮನ್ನಾ ಹಣ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ.

    ಉಳಿದಂತೆ ನಾಲ್ಕು ಸಾವಿರ ಕೋಟಿ ರೂಪಾಯಿಗಳು ಸಹಕಾರ ಸಂಘಗಳಲ್ಲಿ ರೈತರು ಮಾಡಿದ ಕೃಷಿ ಸಾಲವಾಗಿದ್ದು ಅವಧಿ ಪೂರ್ಣಗೊಂಡಂತೆಲ್ಲ ತನ್ನಿಂತಾನೇ ಮಾಫಿಯಾಗಲಿರುವ ಕುರಿತು ವಿವರಿಸಲಾಗಿದೆ.

     ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗೃಹ ಕಛೇರಿ ಕೃಷ್ಣಾ, ವಿಧಾನಸೌಧ ಹಾಗೂ ಜೆಪಿ ನಗರದ ತಮ್ಮ ನಿವಾಸದ ಬಳಿ ನಡೆಸುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಬಂದ ಅರ್ಜಿಗಳ ವಿವರ, ಈ ಅರ್ಜಿಗಳ ಪೈಕಿ ವಿಲೇವಾರಿಯಾದ ಅರ್ಜಿಗಳ ಸಂಖ್ಯೆಯ ವಿವರ ಕೃತಿಯಲ್ಲಿದೆ.

    ಬೀದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡುವ ಬಡವರ ಬಂಧು ಯೋಜನೆಯಿಂದ ಆಗಿರುವ ಅನುಕೂಲದ ಕುರಿತು ಕೃತಿಯಲ್ಲಿ ಮಾಹಿತಿ ನೀಡಲಾಗಿದ್ದು, ಇದೇ ರೀತಿ ರೈತರು, ಮಹಿಳೆಯರು, ಕೂಲಿ – ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳಿಗೆ ಯಾವ್ಯಾವ ರೀತಿ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡಲಾಗಿದೆ?ಎಂಬ ವಿವರ ಕೃತಿಯಲ್ಲಿದೆ.

    ಕಟ್ಟಡಗಳ ನಕ್ಷೆಗೆ ಅನುಮತಿ ನೀಡುವುದರಿಂದ ಹಿಡಿದು ವಿವಿಧ ಯೋಜನೆಗಳನ್ನು ಆನ್‌ಲೈನ್ ಮೂಲಕ ಅನುಷ್ಟಾನಗೊಳಿಸಿದ ಮಾಹಿತಿ, ಬಡವರ ಆರೋಗ್ಯ ರಕ್ಷಿಸುವ ಆಯುಷ್ಮಾನ್ ಕರ್ನಾಟಕ ಯೋಜನೆಯ ಕುರಿತು ವಿವರಗಳಿವೆ.ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾದ ಹಣವನ್ನು ಸಮರ್ಪಕವಾಗಿ ಬಳಸುವ ಕುರಿತು ಕೈಗೊಂಡ ಕ್ರಮ,ರಾಜ್ಯದ ವಿವಿಧ ಸಮುದಾಯಗಳಿಗೆ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸುವ ವಿಷಯದಲ್ಲಿ ತೆಗೆದುಕೊಂಡ ಎಚ್ಚರಿಕೆಗಳ ವಿವರವೂ ಇದರಲ್ಲಿದೆ.

    ಒಟ್ಟಿನಲ್ಲಿ ಕಲ್ಲು-ಮುಳ್ಳಿನ ದಾರಿಯಲ್ಲಿ ನಡೆದರೂ ಕಳೆದ ಒಂದು ವರ್ಷದಲ್ಲಿ ಸರ್ಕಾರ ಯಶಸ್ವಿಯಾಗಿ ಹೆಜ್ಜೆ ಗುರುತು ಮೂಡಿಸಿದ ವಿವರಗಳು ಕೃತಿಯಲ್ಲಿರಲಿವೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ಹೇಳಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap