ದಾವಣಗೆರೆ:
ಜಿಲ್ಲಾಡಳಿತದ ವತಿಯಿಂದ ಜೂ.27 ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಸುವ ನಾಡಪ್ರಭು ಕೆಂಪೆಗೌಡ ಜಯಂತಿಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಸಮಾಜದ ಮುಖಂಡರುಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದ ಅಪರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜೂ.21 ರಂದು ನಾಡಪ್ರಭು ಕೆಂಪೆಗೌಡ ಜಯಂತಿಯ ಆಚರಣೆ ಕುರಿತು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಯಂತಿಯಂದು ಸಭಾಂಗಣದ ವೇದಿಕೆ ಅಲಂಕಾರ, ಸಂಗೀತ ಕಾರ್ಯಕ್ರಮ, ಉಪನ್ಯಾಸ ಹಾಗೂ ನಗರದ ಮೂರು ಕಡೆಯಲ್ಲಿ ಜಯಂತಿ ಪ್ರಚಾರಕ್ಕಾಗಿ ಫ್ಲೆಕ್ಸ್‍ಗಳನ್ನು ಹಾಕಿಸಲಾಗುವುದು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಣದ ಕೆಲಸ ಕಾರ್ಯವನ್ನು ಜಿಲ್ಲಾಡಳಿತವೇ ವಹಿಸಿಕೊಳ್ಳಲಿದೆ ಎಂದರು.
ಈ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಮಾತನಾಡಿ, ಕಳೆದ ಬಾರಿಯಂತೆ ಈ ಬಾರಿಯು ಕೂಡ ಜಯಂತಿಯನ್ನು ನಗರದ ಕುವೆಂಪು ಕನ್ನಡ ಕಲಾಭವನದಲ್ಲಿ ಆಯೋಜಿಸಲಾಗುದು. ಹಾಗೂ ತಾಲೂಕುವಾರು ಜಯಂತಿ ಆಚರಣೆಯ ಕುರಿತು ಈಗಾಗಲೇ ಆಯಾ ತಾಲೂಕು ತಹಶೀಲ್ದಾರ್‍ಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಈ ವೇಳೆ ಸಮಾಜದ ಮುಖಂಡರುಗಳು ಮಾತನಾಡಿ, ಕಳೆದ ಬಾರಿ ಜಯಂತಿಯಂದು ಸಸಿ ನೆಡಲಾಗಿತ್ತು. ಈ ಬಾರಿಯು ಸಸಿ ನೆಡುವ ಮೂಲಕ ಕಾರ್ಯಕ್ರಮ ಆಚರಿಸಲು ಸಹಕರಿಸಬೇಕು. ಉಪನ್ಯಾಸಕರ ಕುರಿತು ಸಮಾಜದ ಮುಖಂಡರೆಲ್ಲರೂ ಸೇರಿ ಚರ್ಚಿಸಿ ಹೆಸರಗಳನ್ನು ಆದಷ್ಟು ಬೇಗ ತಿಳಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗೆ ಹೇಳಿದರು. ನಗರದ ಐದು ಕಡೆಗಳಲ್ಲಿ ಜಯಂತಿ ಆಚರಣೆಯ ಕುರಿತು ಹೆಚ್ಚಿನ ಪ್ರಚಾರಕ್ಕಾಗಿ ನಿಟ್ಟುಹಳ್ಳಿ, ವಿನೋಭನಗರ, ಮೋತಿ ವೀರಪ್ಪ ವೃತ್ತ, ಎಚ್.ಕೆ.ಆರ್ ವೃತ್ತ ಹಾಗೂ ವಿದ್ಯಾರ್ಥಿ ಭವನದ ಸಮೀಪ ಫ್ಲೇಕ್ಸ್ ಹಾಕಿಸುವಂತೆ ಮನವಿ ಮಾಡಿದರು.
ಅಪರ ಜಿಲ್ಲಧಿಕಾರಿ ಪ್ರತಿಕ್ರಿಯಿಸಿ, ಜಿಲ್ಲಾಡಳಿತ ವತಿಯಿಂದ ನೀವು ತಿಳಿಸಿದ ಮೂರು ಕಡೆಗಳಲ್ಲಿ ಮಾತ್ರ ಪ್ಲೇಕ್ಸ್ ಹಾಕಿಸಲಾಗುವುದು. ಹೆಚ್ಚಿನ ಪ್ರಚಾರಕ್ಕೆ ಸಮಾಜದ ವತಿಯಿಂದಲೇ ಪ್ಲೇಕ್ಸ್‍ಗಳನ್ನು ಹಾಕಿಸಿಕೊಳ್ಳುವಂತೆ ಹೇಳಿದರು. ಉಪನ್ಯಾಸಕ್ಕೆ ಆದಷ್ಟೂ ಬೇಗ ಹೆಸರು ತಿಳಿಸಿದರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವ ವ್ಯವಸ್ಥೆ ಮಾಡಲಾಗುವುದು. ವೇದಿಕೆಯ ಕಾರ್ಯಕ್ರಮಯು ಜೂ.27 ರಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ದಾವಣಗೆರೆ ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ನಾಗರಾಜ್ ಎಂ.ಜೆ, ಗೌರಾಧ್ಯಕ್ಷ ಪುಟ್ಟರಾಜು, ಕಾರ್ಯದರ್ಶಿ ಮಂಜುಶ್ರೀ ಗೌಡರು, ಮಾಜಿ ಅಧ್ಯಕ್ಷರುಗಳಾದ ಅಶೋಕ್ ವಿ.ಎನ್ ಹಾಗೂ ಯೋಗೇಶ್ವರ್, ಮಾಜಿ ಕಾರ್ಯದರ್ಶಿ ಹನುಮೇಗೌಡರು, ಸೇರಿದಂತೆ ಅರುಣ್‍ಕುಮಾರ್, ಎಂ.ಎಸ್.ರಮೇಗೌಡ, ನಾಗರಾಜ್, ಚಂದ್ರಶೇಖರ್ ವಿಜಯಕುಮಾರ್ ಮತ್ತಿತರರು ಹಾಜರಿದ್ದರು.