ನದಿ ಜೋಡಣೆ : ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಆಗ್ರಹ

ತುಮಕೂರು

     ಬ್ರಹ್ಮಪುತ್ರ ನದಿ ಜೋಡಣೆ ಮಾಡುವ ಮೂಲಕ ರಾಜ್ಯದಲ್ಲಿ ನೀರಿನ ಸಮಸ್ಯೆ ನಿವಾರಣೆ ಮಾಡುವ ಉದ್ದೇಶವಿದ್ದು, ನದಿ ಜೋಡಣೆ ಕುರಿತಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಂಸದ ಜಿ.ಎಸ್.ಬಸವರಾಜು ಒತ್ತಾಯಿಸಿದರು.

     ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನ, ಜಾನುವಾರುಗಳಿಗೆ, ಪ್ರಾಣಿ, ಪಕ್ಷಿಗಳಿಗೆ ನೀರಿನ ಅಭಾವ ತಲೆ ದೋರಿದ್ದು, ನಗರದಲ್ಲೇ ನೀರಿಗೆ ಅಭಾವ ಉಂಟಾಗಿದೆ. ಈ ನಿಟ್ಟಿನಲ್ಲಿ ನದಿಯ ಮೂಲಗಳಿಂದ ಕೆರೆಗಳ ತುಂಬಿಸುವ ಯೋಜನೆ ಇದಾಗಿದ್ದು, ಇದಕ್ಕೆ ಜಲಧಾರೆ ಎಂಬ ಯೋಜನೆ ರೂಪಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿನ ಪ್ರವಾಹ ಕಂಟ್ರೋಲ್ ಮಾಡಿ, ನದಿ ಹಾಗೂ ಕೆರೆಗಳಿಂದ ವ್ಯರ್ಥವಾಗುವ ನೀರನ್ನು ಸದುಪಯೋಗ ಪಡಿಸಿಕೊಳ್ಳುವ ಯೋಜನೆ ಇದಾಗಿದೆ ಎಂದರು.

     ಈ ಯೋಜನೆಯಿಂದ ಸಂಗ್ರಹಿಸುವ ನೀರನ್ನು ಕುಡಿಯಲು, ಹನಿ ನೀರಾವರಿಗೆ ಬಳಸಬಹುದಾಗಿದೆ. ನೇತ್ರಾವತಿ ನದಿ ಒಣಗಿದ್ದರಿಂದ ಎತ್ತಿನ ಹೊಳೆಗೆ ನೀರಿಲ್ಲ ಎಂದು ಸುಮ್ಮನೆ ಹೇಳಿಕೆಗಳನ್ನು ನೀಡಲಾಗುತ್ತಿದೆ. ರೈತರಿಗೆ ನೀರು, ಉಚಿತ ಕರೆಂಟ್ ಹಾಗೂ ಉತ್ತಮ ಬೆಲೆ ನೀಡಿದರೆ ಯಾವ ಸರಕಾರವೂ ಸಾಲಮನ್ನಾ ಮಾಡುವ ಅವಶ್ಯಕತೆ ಇಲ್ಲ. ರೈತರೇ ಸರಕಾರಕ್ಕೆ ಸಾಲ ನೀಡುತ್ತಾರೆ. ಈ ಬಗ್ಗೆ ಸರಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.

       ಜಾನುವಾರು, ಪ್ರಾಣಿ, ಪಕ್ಷಿಗಳು ನೀರಿಲ್ಲದೆ ಪರದಾಡುವ ಸ್ಥಿತಿ ಒದಗಿ ಬಂದಿದೆ. ವಾಡಿಕೆಯಂತೆ 15 ಸೆಂ.ಮೀ. ಮಳೆ ಬರಬೇಕಿತ್ತು. ಆದರೆ ಕೇವಲ 3 ಸೆಂ.ಮೀ. ಮಳೆ ಮಾತ್ರ ಆಗಿದೆ. 1.5 ಟಿಎಂಸಿ ಹೇಮಾವತಿಯಿಂದ ತುಮಕೂರು ಕೆರೆಗೆ ನೀರು ಬಿಡಬೇಕು. ಮೈದಾಳ, ಮರಳೂರು, ದೇವರಾಯಪಟ್ಟಣ, ಬುಗಡನಹಳ್ಳಿ ಕೆರೆಗೆ ನೀರು ಹರಿಸಬೇಕು. ನೀರಿನ ವಿಚಾರದಲ್ಲಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಇರಬೇಕು. ಇದು ನಮ್ಮ ರಾಜ್ಯದಿಂದಲೇ ಪ್ರಾರಂಭವಾಗಬೇಕು ಎಂದು ತಿಳಿಸಿದರು.

      ನೀರಾವರಿ ಬಗ್ಗೆ ಜಿಲ್ಲೆಯ ಜನತೆಗೆ ಅರಿವು ಮೂಡಿಸಲಾಗಿದೆ. ಹಾಸನದಿಂದ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಜನರು ಅರಿತುಕೊಂಡಿದ್ದಾರೆ. ಇದರಿಂದ ಮಧುಗಿರಿಯ ಎಲ್ಲಾ ಭಾಗಗಳಲ್ಲಿ ಹೆಚ್ಚಿನ ಮತಗಳು ದೊರೆತಿವೆ. ಇದರಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು. ನಾನು ಚುನಾವಣೆಗೆ ಸ್ಪರ್ಧೆ ಮಾಡುವುದು ಇದೇ ಕೊನೆಯದ್ದು, ಮುಂದಿನ ಚುನಾವಣೆಗೆ ಹೊಸಬರನ್ನು ಸಿದ್ದ ಮಾಡುತ್ತೇವೆ.

     ಯಾವುದೇ ಕಾರಣಕ್ಕೂ ಹೊರಗಡೆಯಿಂದ ಬಂದವರಿಗೆ ಅವಕಾಶ ನೀಡುವುದಿಲ್ಲ. ನೂರಾರು ಕೋಟಿ ರೂ. ಖರ್ಚು ಮಾಡಿದವರ ಮುಂದೆ ನಾನು ಏನೂ ಅಲ್ಲ. ಆದರೆ ಜಿಲ್ಲೆಯ ಜನತೆ ಹಣಕ್ಕೆ ಬೆಲೆ ನೀಡದೆ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಪರೋಕ್ಷವಾಗಿ ದೇವೇಗೌಡರಿಗೆ ಟಾಂಗ್ ನೀಡಿದರು.

       ಸಚಿವ ಸ್ಥಾನದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆಯೇ ಸಚಿವ ಸ್ಥಾನಕ್ಕೆ ನಿರ್ದಿಷ್ಠ ವಯಸ್ಸನ್ನು ನಿಗದಿ ಮಾಡಿದ್ದರು. ಅದರಂತೆ ನನಗೆ ವಯಸ್ಸು ಮೀರಿದೆ. ಹಾಗಾಗಿ ನನಗೆ ಸಚಿವ ಸ್ಥಾನ ದೊರೆತಿಲ್ಲ. ಹಾಗಂತ ನನಗೆ ಬೇಸರವಿಲ್ಲ. ಸಚಿವ ಸ್ಥಾನ ಪಡೆದವರು ನನ್ನ ಸ್ನೇಹಿತರೇ. ಕೇಂದ್ರ ಮಂತ್ರಿಯಾಗಿದ್ದವರಿಗೆ ಒಂದೇ ಇಲಾಖೆ, ಅಲ್ಲಿಯೇ ಕೆಲಸ ಮಾಡಬೇಕು. ನಮಗೆ ಎಲ್ಲಾ ಇಲಾಖೆಗಳಲ್ಲೂ ಕೆಲಸ ಮಾಡುವ ಅವಕಾಶ ಇದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ನಾಗರಾಜ, ನಟರಾಜ್, ಮಾಜಿ ನಗರ ಸಭೆ ಅಧ್ಯಕ್ಷೆ ಕಮಲಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap