ಚಿತ್ರದುರ್ಗ:
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರಲ್ಲಿದ್ದ ವಿಚಾರಧಾರೆ, ಮುಂದಾಲೋಚನೆಯನ್ನು ಇಂದಿನ ರಾಜಕಾರಣಿಗಳು ಪಾಲಿಸಿದ್ದೇ ಆದಲ್ಲಿ ದೇಶ ಅಭಿವೃದ್ದಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರಸ್ವಾಮಿ ಹೇಳಿದರು.
ದಾವಣಗೆರೆ ರಸ್ತೆಯಲ್ಲಿರುವ ಭೋವಿಗುರುಪೀಠದಲ್ಲಿ ಮಂಗಳವಾರ ನಡೆದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ 134 ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಆಕಸ್ಮಿಕ, ಅನಿವಾರ್ಯವಾಗಿ ಯೋಗ ಕೂಡಿ ಬಂದಿದ್ದರಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಹತ್ತನೆ ವಯಸ್ಸಿನಲ್ಲಿಯೇ ರಾಜನಾಗಿ ನಾಡನ್ನು ಹೇಗೆ ಕಟ್ಟಬೇಕೆಂಬ ಆಲೋಚನೆಯಿಟ್ಟುಕೊಂಡು ನೂರಾರು ಜನಪರ ಹಾಗೂ ಜನಮುಖಿ ಕೆಲಸಗಳನ್ನು ಮಾಡಿದ್ದಾರೆ. ಕ್ರಾಂತಿಕಾರಿಯಾಗಿದ್ದರು ಅವರು ಎಂದಿಗೂ ಯಾರೊಡನೆಯೂ ಯುದ್ದಕ್ಕೆ ಇಳಿಯಲಿಲ್ಲ.
ಬ್ರಿಟೀಷರ ಜೊತೆ ಜಾಣ್ಮೆಯಿಂದ ಹೊಂದಾಣಿಕೆ ಮಾಡಿಕೊಂಡು ಕರ್ನಾಟಕದಲ್ಲಿದ್ದ ಕನ್ನಡಿಗರಿಗೆ ತೊಂದರೆಯಾಗಲು ಅವಕಾಶ ಕೊಡಲಿಲ್ಲ. ಸರ್ವರಿಗೂ ಸಮಪಾಲು-ಸಮಬಾಳು ಎನ್ನುವ ತತ್ವದಡಿ ಅವರ ಕಾಲದಲ್ಲಿಯೇ ಮೀಸಲಾತಿಯನ್ನು ಜಾರಿಗೆ ತಂದ ಪರಿಣಾಮ ಮೀಸಲಾತಿ ಜನಕ ಎನಿಸಿಕೊಂಡಿದ್ದಾರೆ ಎಂದು ಗುಣಗಾನ ಮಾಡಿದರು.
ದೇಶಕ್ಕೆ ಸ್ವಾತಂತ್ರ ಸಿಕ್ಕು ಎಪ್ಪತ್ತು ವರ್ಷಗಳಾಗಿದ್ದರೂ ಇಂದಿಗೂ ಮೀಸಲಾತಿ ಕುರಿತು ಚರ್ಚೆ ನಡೆಯುತ್ತಿದೆ. ಇನ್ನು ಮಾನಸಿಕ ಶೋಷಣೆಯಲ್ಲಿ ಬದುಕುತ್ತಿದ್ದೇವೆ. ಎಲ್ಲಿಯವರೆಗೂ ಜಾತಿ ಕಾಲಂ ಇರುತ್ತದೋ ಅಲ್ಲಿಯತನಕ ರಾಜರು ಹಾಕಿಕೊಟ್ಟ ಮೀಸಲಾತಿ ಬೇಕು. ಸಾಹಿತ್ಯ, ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾಗಿದೆ. ಜಾತಿ ವ್ಯವಸ್ಥೆ ಬದಲಾಗಬೇಕಿದೆ. ಮೀಸಲಾತಿ ಉನ್ನತೀಕರಣಗೊಳಿಸಬೇಕು ನಾಲ್ವಡಿ ಕೃಷ್ಣರಾಜ ಒಡೆಯರ್ ಯಾವ ಕೆಲಸ ಮಾಡಿದರೂ ಗುಣಮಟ್ಟದಿಂದ ಇರುತ್ತಿತ್ತು ಎಂದು ಹೇಳಿದರು.
ಸರ್‍ಮಿರ್ಜಾ ಇಸ್ಮಾಯಿಲ್, ಮಿಲ್ಲರ್, ಸರ್. ಎಂ.ವಿಶ್ವೇಶ್ವರಯ್ಯನವರಂತ ಪ್ರತಿಭೆಗಳನ್ನು ಹೊರೆಗೆ ತಂದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಸಾಹಿತ್ಯ, ಕೃಷಿ, ಶಿಕ್ಷಣ, ಜಲ ಕ್ಷೇತ್ರದಲ್ಲಿ ಘನತೆ ಗೌರವ ಹೆಚ್ಚಿಸಿಕೊಂಡು ಕೀರ್ತಿ ಸಂಪಾದಿಸಿದ್ದಾರೆ. ಹಾಗಾಗಿ ಅಂತಹ ರಾಜರ ವಿಚಾರ ಹಾಗೂ ಧ್ಯೆಯೋದ್ದೇಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಸ್ವಾಮೀಜಿ ತಿಳಿಸಿದರು.
ನಿವೃತ್ತ ಪ್ರಾಚಾರ್ಯರಾದ ಜೆ.ಯಾದವರೆಡ್ಡಿ ಮಾತನಾಡಿ ಜನಮುಖಿ, ಸಮಾಜಮುಖಿ, ಅಪರೂಪದ ರಾಜ, ರಾಜಕಾರಣಿಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರು ನೂರು ವರ್ಷಗಳ ಹಿಂದೆ ಕಟ್ಟಿಸಿದ ನೂರಾರು ಕೆರೆಗಳು ಇನ್ನು ಜೀವಂತವಾಗಿದೆ. ಜನಪರ ಆಡಳಿತ ನೀಡಬೇಕೆಂಬ ರಾಜಕಾರಣಿಗಳು ಮೊದಲು ನಾಲ್ವಡಿ ಕೃಷ್ಣರಾಜ ಒಡೆಯರ್‍ರವರನ್ನು ಅಧ್ಯಯನ ಮಾಡಲಿ ಎಂದು ಮನವಿ ಮಾಡಿದರು.
ಕರ್ನಾಟಕ ಇತಿಹಾಸದಲ್ಲಿಯೇ ಅಚ್ಚುಕಟ್ಟು, ಪಾರದರ್ಶಕ ಆಡಳಿತ ನೀಡಿದ ಏಕೈಕ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರಲ್ಲಿ ನಾಡಿನ ಅಭಿವೃದ್ದಿ ಬಗ್ಗೆ ಮುನ್ನೋಟವಿತ್ತು. ಮೈಸೂರು ಆಡಳಿತ ಜಗತ್ತಿಗೆ ಪ್ರಸಿದ್ದಿಯಾಗಿತ್ತು ಎನ್ನುವುದಕ್ಕೆ ರಾಜರಲ್ಲಿದ್ದ ಸಾಮಾಜಿಕ ಕಳಕಳಿಯೇ ಕಾರಣ.
ಜಾತಿ ವ್ಯವಸ್ಥೆ ನಿರ್ಮೂಲನೆ ಗೆ ಮೊದಲು ಕೈಹಾಕಿ ಮಿಲ್ಲರ್ ಆಯೋಗದ ಮೂಲಕ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಹಾಗೂ ಓ.ಬಿ.ಸಿ.ಗೆ ಶೇ.42 ರಷ್ಟು ಮೀಸಲಾತಿಯನ್ನು ನೀಡಿದರು. ಹಿರಿಯೂರಿನ ವಾಣಿವಿಲಾಸ ಸಾಗರ ನಿರ್ಮಾಣಕ್ಕೆ ತಮ್ಮ ಮನೆಯಲ್ಲಿದ್ದ ಬಂಗಾರವನ್ನು ಒತ್ತೆಯಿಟ್ಟು ಐದು ವರ್ಷದಲ್ಲಿ ಕಟ್ಟಿದ್ದರ ಫಲವಾಗಿ ಇಂದಿಗೂ ನಮಗೆ ಕುಡಿಯುವ ನೀರು ಸಿಗುತ್ತಿದೆ ಎಂದು ರಾಜರಲ್ಲಿದ್ದ ಸಮಾಜಮುಖಿ ಚಿಂತನೆಯನ್ನು ಸ್ಮರಿಸಿಕೊಂಡರು.
ಅವರ ಕಾಲದಲ್ಲಿ ಕಟ್ಟಿದ ಮುನ್ನೂರು ಕೆರೆಗಳು ಇನ್ನು ಜೀವಂತವಾಗಿವೆ. ರಾಜರೆಂದರೆ ಮೋಜು, ಮಸ್ತಿ, ಯುದ್ದಮಾಡಿಕೊಂಡು ಇರುವವರು ಎನ್ನುವ ಕಲ್ಪನೆ ಎಲ್ಲರಲ್ಲಿಯೂ ಮೂಡುವುದು ಸಹಜ. ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಪರೂಪದ ರಾಜರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯ ಆರಂಭಗೊಂಡಿದ್ದು, ಇವರ ಕಾಲದಲ್ಲಿ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ವಾಣಿವಿಲಾಸ ಆಸ್ಪತ್ರೆ ಕಟ್ಟಿಸಿದರು. ಮಹಿಳೆಗೆ ಮೊಟ್ಟ ಮೊದಲಿಗೆ ಓಟಿನ ಹಕ್ಕು ಕೊಟ್ಟವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎನ್ನುವುದನ್ನು ನೆನಪಿಸಿದರು.
ಇಲ್ಲಿಯವರೆಗೂ ಯಾವ ಮುಖ್ಯಮಂತ್ರಿಯೂ ಮಾಡದ ಜನಪರ ಕೆಲಸವನ್ನು ಅಂದಿನ ಕಾಲದಲ್ಲಿಯೇ ರಾಜರು ಮಾಡಿದ್ದರಿಂದ ಇಂದಿಗೂ ಎಲ್ಲರೂ ಸ್ಮರಿಸಿಕೊಳ್ಳುವಂತೆ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಮನುಷ್ಯತ್ವವುಳ್ಳ ರಾಜರಾಗಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ ಹುಟ್ಟು ಹಾಕಿದರು. ಪ್ರಜಾಪ್ರಭುತ್ವ ರಾಜ್ಯದಲ್ಲಿ ಬೇರೂರಿದೆ ಎಂದರೆ ಅದಕ್ಕೆ ಈ ರಾಜರೆ ಕಾರಣ. ರಾತ್ರಿ ಶಾಲೆಗಳು ಆರಂಭಗೊಂಡವು. ಲಾಟಿನ್ ಬೆಳಕಿನಲ್ಲಿ ಅಕ್ಷರ ಕಲಿಸಿದವರು. ಅದಕ್ಕಾಗಿ ಎಲ್ಲರೂ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ವಿಚಾರ-ಧಾರೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅಪ್ರತಿಮ ರಾಜರಲ್ಲಿ ಒಬ್ಬರಾಗಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ವಿದ್ಯುತ್ ಉತ್ಪಾದಿಸಿ. ಡ್ಯಾಂಗಳನ್ನು ಕಟ್ಟಿಸಿ ವಿಶ್ವವಿದ್ಯಾನಿಲಯಗಳನ್ನು ತೆರೆದರು. ನೀರಾವರಿ ಕೃಷಿಗೆ ಮೊದಲ ಆದ್ಯತೆ ನೀಡಿದರು. ಗಾಯತ್ರಿ ಜಲಾಶಯ ನಿರ್ಮಿಸಿ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಮಾನತೆ ಕೊಟ್ಟರು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಜೆಡಿಎಸ್.ಮುಖಂಡ ಲಿಂಗಸೂರಿನ ಸಿದ್ದುಬಂಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಭೋವಿ ಸಮಾಜದ ಕಾರ್ಯದರ್ಶಿ ಹೆಚ್.ಲಕ್ಷ್ಮಣ್, ಪ್ರಾಂಶುಪಾಲರಾದ ಕನಕದಾಸ್ ವೇದಿಕೆಯಲ್ಲಿದ್ದರು.
ಪುಟಾಣಿ ಮಕ್ಕಳು ಹಾಗೂ ಶಿಕ್ಷಕ ವೃಂದದವರು ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ಜಯಂತಿಯಲ್ಲಿ ಪಾಲ್ಗೊಂಡಿದ್ದರು.