ಪಾವಗಡ
ಸುಪ್ರಸಿದ್ದ ಅಂತ್ಯ ಸುಬ್ರಹ್ಮಣ್ಯಸ್ವಾಮಿ ನೆಲೆಯ ನಾಗಲಮಡಿಕೆ ಗ್ರಾಮದ ಉತ್ತರ ಪಿನಾಕಿನಿ ಡ್ಯಾಂ ತುಂಬಿರುವುದರಿಂದ ತೂಬುಗಳನ್ನು ತೆರೆಯಲು ಆಂಧ್ರ್ರದವರು ಸಂಚು ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡ್ಯಾಂನ ತೂಬುಗಳಿರುವ ಎರಡೂ ಪಾಶ್ರ್ವದಲ್ಲಿ ಸಿ.ಸಿ. ಕ್ಯಾಮರಾ ಮತ್ತು ವಿದ್ಯುತ್ ದೀಪ ಅಳವಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಜಿ. ನವೀನ್ ಚಂದ್ರ ತಿಳಿಸಿದರು.
ಸೋಮವಾರ ನಾಗಲಮಡಿಕೆ ಡ್ಯಾಂ ಬಳಿ ವಿದ್ಯುತ್ ದೀಪ ಮತ್ತು ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರದ ಹಂದ್ರಿನಿವಾ ಯೋಜನೆಯಲ್ಲಿ ಶ್ರೀಶೈಲ ಡ್ಯಾಂನಿಂದ ಕೃಷ್ಣಾ ನದಿ ನೀರನ್ನು ತಾಲ್ಲೂಕಿನ ಮೂಲಕ ಪಕ್ಕದ ಆಂಧ್ರದ ಪೆರೂರು ಡ್ಯಾಂಗೆ ನೀರು ಹರಿಯಬಿಟ್ಟಿದೆ. ಇದರಿಂದ ನಾಗಲಮಡಿಕೆ ಡ್ಯಾಂ ತುಂಬಿದೆ. ಕರ್ನಾಟಕದ ಈ ಡ್ಯಾಂ ಮೂಲಕ ನೀರು ಹರಿದು ಪೆರೂರು ಡ್ಯಾಂ ತುಂಬಬೇಕು.
ಆದರೆ ಅದು ತುಂಬಬೇಕಾದರೆ ಇನ್ನಷ್ಟು ದಿವಸ ನೀರು ಹರಿಯ ಬಿಡಬೇಕು. ಆಂಧ್ರ ಸರ್ಕಾರ ನೀರು ಹರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಆದರೆ ಈಗ ನಾಗಲಮಡಿಕೆ ಡ್ಯಾಂನಲ್ಲಿ ಶೇಖರಣೆಯಾಗಿರುವ ನೀರನ್ನೆ ಪೆರೂರು ಡ್ಯಾಂಗೆ ಹರಿಸಲು ಕಳೆದ ಕೆಲ ದಿನಗಳ ಹಿಂದೆ ಆಂಧ್ರದ ಮೂವತ್ತು ಜನರ ತಂಡ ತೂಬು ತೆರೆದು ಅಕ್ರಮವಾಗಿ ನೀರು ಹರಿಸಲು ಮುಂದಾಗಿತ್ತು.
ವಿಷಯ ತಿಳಿದ ತಕ್ಷಣ ನಾಗಲಮಡಿಕೆ ಗ್ರಾಮಸ್ಥರು ತಿರುಮಣಿ ಪೊಲೀಸರಿಗೆ ಮಾಹಿತಿ ನೀಡಿ, ಸಿ.ಪಿ.ಐ. ವೆಂಕಟೇಶ್ ಸ್ಥಳಕ್ಕಾಗಮಿಸಿ ಆಂಧ್ರದ ತಂಡವನ್ನು ವಾಪಸ್ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡ್ಯಾಂ ನ ಸುತ್ತಮುತ್ತ ಕಟ್ಟೆಚ್ಚರ ವಹಿಸಲು ಸಿಸಿ ಕ್ಯಾಮರಾ ಮತ್ತು ವಿದ್ಯುತ್ ದೀಪ ಅಳವಡಿಸಲಾಗಿದೆ ಎಂದು ತಿಳಿಸಿದರು.
ತಿರುಮಣಿ ಸಿ.ಪಿ.ಐ. ವೆಂಕಟೇಶ್ ಮಾತನಾಡಿ, ಕಳೆದೆರಡು ದಿನಗಳ ಹಿಂದೆ ಆಂಧ್ರÀ್ರದವರು ತೂಬು ತೆರೆÉದು ನೀರು ಹರಿಯ ಬಿಡಲು ಬಂದಿರುವುದಾಗಿ ನಾಗಲಮಡಿಕೆ ಗ್ರಾಮಸ್ಥರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಬಂದು ಇಂತಹ ಕೃತ್ಯಗಳಿಗೆ ಮುಂದಾದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ತೂಬು ತೆರೆಯುವ ವಿಚಾರ ಸರ್ಕಾರದ ಉನ್ನತ ಮಟ್ಟದಲ್ಲಿ ತೀರ್ಮಾನವಾಗಬೇಕು. ತಿರುಮಣಿ ಪೊಲೀಸ್ ಠಾಣೆಯಿಂದ ಡ್ಯಾಂ ನ ಸುತ್ತಮುತ್ತ ರಾತ್ರಿ ಮತ್ತು ಹಗಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಗ್ರಾಮದ ಮುಖಂಡ ಮೈಲಾರರೆಡ್ಡಿ, ನಾಗಲಮಡಿಕೆ ಡ್ಯಾಂನ್ನು ನೋಡಲು ತಾಲ್ಲೂಕಿನಾದ್ಯಂತ ದಿನನಿತ್ಯ ನೂರಾರು ಜನರು ಆಗಮಿಸುತ್ತಿದ್ದಾರೆ. ಡ್ಯಾಂನ ಮುಂಭಾಗ ಉತ್ತರ ಪಿನಾಕಿನಿ ಹಳ್ಳದಲ್ಲಿರುವ ಜಾಲಿ ಗಿಡಗಳನ್ನು ತೆರವುಗೊಳಿಸಬೇಕು. ಅಂತ್ಯ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗ ಸುಂದರ ಉದ್ಯಾನವನ ನಿರ್ಮಿಸಬೇಕು ಎಂದು ಮುಖ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ವೇಳೆ ಎಂಜಿನಿಯರ್‍ಗಳಾದ ಧನಂಜಯ್, ಮನೋಹರ್, ಎ.ಎಸ್.ಐ. ಶಿವಕುಮಾರ್, ಪೊಲೀಸ್ ಕಾನ್‍ಸ್ಟೇಬಲ್‍ಗಳಾದ ನಾಗೇಂದ್ರ, ವೆಂಕಪ್ಪ, ಪುಂಡಲೀಕ್ ಲಂಬಾಣಿ, ಪುರಸಭೆ ಸಿಬ್ಬಂದಿ, ವಾಟರ್ ಮನ್ ರಾಮಾಂಜಿ, ತಿಮ್ಮರಾಜು ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ