ನಗರಸಭೆ ಗದ್ದುಗೆ ಹಿಡಿಯುವುದು ನಿಶ್ಚಿತ : ಲೋಕೇಶ್ವರ್

ತಿಪಟೂರು:

   ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆದು ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಜೆಡಿಎಸ್ ಮುಖಂಡ ಲೋಕೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

   ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ 31 ವಾರ್ಡ್‍ಗಳ ಪೈಕಿ 27 ವಾರ್ಡ್‍ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಲಾಗಿದೆ. ಉಳಿದ ಕೆಲವೆಡೆ ಪಕ್ಷೇತರ ಅಥವಾ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದು ಪಕ್ಷಗಳ ನಡುವಿನ ಯಾವುದೇ ಮೈತ್ರಿಯಲ್ಲ. ಕೆಲ ಅಭ್ಯರ್ಥಿಗಳ ಕೋರಿಕೆ ಮೇರೆಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.

    ಅಧಿಕಾರ ಹಿಡಿಯುವಷ್ಟು ಸದಸ್ಯರು ಜೆಡಿಎಸ್‍ನಿಂದ ಆಯ್ಕೆಯಾಗುವ ನಿರೀಕ್ಷೆ ಇದೆ. ಅದು ಸಾಧ್ಯವಾಗದಿದ್ದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ಜೆಡಿಎಸ್‍ನ ಗುರಿ. ಮುಂದಿನ ಪಕ್ಷ ಸಂಘಟನೆ ದೃಷಿಯಿಂದ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿಲ್ಲ ಎಂದು ತಿಳಿಸಿದರು.

    ಎಲ್ಲಾ ಜಾತಿ, ಜನಾಂಗದವರಿಗೆ ಆದ್ಯತೆಯಲ್ಲಿ ಟಿಕೆಟ್ ನೀಡಲಾಗಿದೆ. ಕೆಲ ಸಾಮಾನ್ಯ ಕ್ಷೇತ್ರಗಳಿಗೂ ಮಹಿಳೆಗೆ ಪಕ್ಷ ಆದ್ಯತೆ ಕೊಟ್ಟಿದೆ. ಇತರೆ ಮೀಸಲು ಕ್ಷೇತ್ರಗಳಲ್ಲಿ ಒಟ್ಟು 7 ಸಣ್ಣಪುಟ್ಟ ಜಾತಿಗಳ ವ್ಯಕ್ತಿಗಳನ್ನು ಅಭ್ಯರ್ಥಿ ಮಾಡಲಾಗಿದೆ. 8 ಮುಸ್ಲಿಂ, 5 ಲಿಂಗಾಯಿತ, 3 ವಕ್ಕಲಿಗ, 3 ಎಸ್‍ಸಿ, 1 ಎಸ್‍ಟಿ ಅಭ್ಯರ್ಥಿಗಳಿದ್ದಾರೆ. ಯಾವುದೇ ಗೊಂದಲ, ಭಿನ್ನಮತವಿಲ್ಲದಂತೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

   ಲೋಕಸಭೆ ಚುನಾವಣೆ ಫಲಿತಾಂಶದ ನಂತರ ನಗರಸಭೆ ಚುನಾವಣೆ ನಡೆಯುವುದರಿಂದ ಅದೂ ಕೂಡ ಪರಿಣಾಮ ಬೀರಲಿದೆ. ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ 1.50 ಲಕ್ಷ ಮತ ಅಂತರದಿಂದ ಆಯ್ಕೆಯಾಗುವುದು ನಿಶ್ಚಿತ. ಲೋಕಸಭೆ ಫಲಿತಾಂಶದ ನಂತರ ರಾಜ್ಯದಲ್ಲಿ ಮತ್ತು ಸ್ಥಳೀಯ ರಾಜಕೀಯ ದೃವೀಕರಣ ಆರಂಭವಾಗಲಿದೆ ಎಂದರು.

   ನಗರದ ಕುಡಿವ ನೀರಿನ ವ್ಯವಸ್ಥೆ, ಒಳ ಚರಂಡಿ ವ್ಯವಸ್ಥೆ ಸಮರ್ಪಕಗೊಳಿಸಲು ಜೆಡಿಎಸ್ ಆದ್ಯತೆ ನೀಡಲಿದೆ. ಒಳಚರಂಡಿ ಸಮಗ್ರವಾಗಿ ಪೂರ್ಣಗೊಳಿಸಲು ಜೆಡಿಎಸ್ ಬದ್ಧತೆ ಹೊಂದಿದೆ. ನಗರದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಿ ಸಾಮಾಜಿಕ ಕಾರಣಕ್ಕೆ ಬಳಸಿಕೊಳ್ಳುವುದು ಕೂಡ ಜೆಡಿಎಸ್ ಪ್ರಣಾಳಿಕೆಯಲ್ಲಿ ಇರಲಿದೆ.

   24/7 ಕುಡಿವ ನೀರಿನ ಯೋಜನೆ ನೊಣವಿನಕೆರ ಸುತ್ತಲಿನ ರೈತರ ವಿರೋಧದಿಂದ ಅತಂತ್ರ ಸ್ಥಿತಿಯಲ್ಲಿದೆ. ಅದಕ್ಕೆ ಕನ್ನುಘಟ್ಟ ಮತ್ತು ನಾಗರಘಟ್ಟ ಕೆರೆಗಳನ್ನು ಸಂಗ್ರಹಾಗಾರಗಳನ್ನಾಗಿ ಬಳಿಸಿ ಯೋಜನೆ ಪೂರ್ಣಗೊಳಿಸುವುದು ಜೆಡಿಎಸ್ ಉದ್ದೇಶವಾಗಿದೆ. ನಗರದಲ್ಲಿ ಸೊರಗಿರುವ ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪಾರ್ಕ್ ಸ್ಥಳಗಳನ್ನು ಗುರುತಿಸಿ ರಕ್ಷಿಸುವುದು ಉದ್ದೇಶವಾಗಿದೆ ಎಂದರು.

     ಜೆ.ಡಿ.ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಕ್ಕನಹಳ್ಳಿ ಲಿಂಗರಾಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸೊಪ್ಪು ಗಣೇಶ್, ಕಾರ್ಯಾಧ್ಯಕ್ಷ ಶಿವಸ್ವಾಮಿ, ಪಕ್ಷದ ವಿವಿಧ ಪದಾಧಿಕಾರಿಗಳಾದ ಯೋಗಾನಂದ್, ಪೈರೋಜ್ ಖಾನ್, ಪತ್ರಿಕಾಗೋಷ್ಠಿಯಲ್ಲಿ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link