ತುಮಕೂರು
ತುಮಕೂರು ನಗರದ ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡಿ ನಗರಾಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ಈ ವಿಷಯದಲ್ಲಿ ಅಸಮರ್ಥವಾಗಿದೆ. ಪ್ರಾಧಿಕಾರದಿಂದ ನೀಡಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡದೆ ನಾಗರಿಕರನ್ನು ವಂಚಿಸುತ್ತಿದೆ ಎಂದು ಮೆಳೆಕೋಟೆ-ವೀರಸಾಗರ ವಸತಿ ಬಡಾವಣೆಯ ನಿವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ರಚಿಸಿದ ಮೇಳೆಕೊಟೆ-ವೀರಸಾಗರ ವಸತಿ ಬಡಾವಣೆಯಲ್ಲಿ ಹಂಚಿಕೆಯಾಗಿರುವ ನಿವೇಶನಗಳಲ್ಲಿ ನಿಗದಿತ ಅವಧಿಯಲ್ಲಿ ಗೃಹ ನಿರ್ಮಾಣ ಮಾಡಿಕೊಳ್ಳಿ ಎಂದು ನೋಟಿಸ್ ನೀಡುವ ಪ್ರಾಧಿಕಾರವು, ಆ ಬಡಾವಣೆಯಲ್ಲಿ ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನೆ ಒದಗಿಸಿಲ್ಲ. ಒಳಚರಂಡಿಗಳು (ಯುಜಿಡಿ) ತುಂಬಿ ರಸ್ತೆಗೆಲ್ಲ ಹರಿಯುತ್ತಿದೆ. ಅದನ್ನೆಲ್ಲ ಸಂಗ್ರಹಿಸುವ ಗಂಗಸಂದ್ರ ಮುಖ್ಯ ರಸ್ತೆಯ (ಶೇಷಾದ್ರಿ ಪುರಂ ಕಾಲೇಜು ಹಿಂಭಾಗ ಇರುವ) ವೆಟ್ ವೆಲ್ ಗೆ ಅಳವಡಿಸಿರುವ ಮೋಟಾರ್‍ಗಳು ಕೆಟ್ಟು ಹೋಗಿದ್ದು, ಅವುಗಳನ್ನು ರಿಪೇರಿ ಮಾಡಿಸಲು ಪ್ರಾಧಿಕಾರಕ್ಕೆ ಸಾಧ್ಯವಾಗಿಲ್ಲ.
ಯುಜಿಡಿ ತುಂಬಿ ಹರಿಯುತ್ತಿದ್ದು ಇದನ್ನು ಸರಿಪಡಿಸಿರೆಂದು ಬಡಾವಣೆಯ ನಾಗರೀಕರು ಮನವಿ ಕೊಟ್ಟರೂ, ಟೂಡಾ ಏನೂ ಮಾಡದೆ ನಿರ್ಲಕ್ಷಿಸಿದೆ. ತುಂಬಿ ಹರಿಯುತ್ತಿರುವ ಯುಜಿಡಿಗಳ ಸಮಸ್ಯೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಇರುವುದರಿಂದ ಇದನ್ನು ಬೇಗ ಪರಿಹರಿಸಲು ಸ್ಥಳೀಯ ನಿವಾಸಿಗಳು ಪ್ರಾಧಿಕಾರವನ್ನು ಒತ್ತಾಯಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ