ನ್ಯಾಯಾಲಯಕ್ಕೆ ಹಾಜರಾದ ನಾಗೇಂದ್ರ

0
14

ಬೆಂಗಳೂರು

     ಬಳ್ಳಾರಿ ಜಿಲ್ಲೆಯ ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೂಡ್ಲಿಗಿ ಶಾಸಕ ನಾಗೇಂದ್ರ ಅವರು ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದರು.

       ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಪದೇ ಪದೇ ವಿಚಾರಣೆಗೆ ಗೈರು ಹಾಜರಾದ ನಾಗೇಂದ್ರ ಹಾಗೂ ಶಾಸಕ ಆನಂದ್ ಸಿಂಗ್ ವಿರುದ್ಧ ನಿನ್ನೆ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಇದರಿಂದ ಬಂಧನ ಭೀತಿಗೊಳಗಾದ ನಾಗೇಂದ್ರ ಅವರು ಇಂದು ನ್ಯಾಯಾಲಯಕ್ಕೆ ಹಾಜರಾಗಿ ವಾರಂಟ್ ಹಿಂಪಡೆಯುವಂತೆ ಮನವಿ ಮಾಡಿದರು.

      ತಾವೊಬ್ಬ ಜನಪ್ರತಿನಿಧಿಯಾಗಿದ್ದು, ಕ್ಷೇತ್ರದಲ್ಲಿ ಹಲವು ಕೆಲಸದ ಒತ್ತಡದಲ್ಲಿ ಸಿಲುಕಿದ್ದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ ಎಂದು ವಿವರಣೆ ನೀಡಿದರು. ಈ ಸಂದರ್ಭದಲ್ಲಿ ನಾಗೇಂದ್ರ ಪರ ವಕೀಲರು, ಮುಂದಿನ ವಿಚಾರಣೆಗಳಲ್ಲಿ ಖುದ್ದು ಹಾಜರಿಯಿಂದ ವಿನಾಯ್ತಿ ಕೋರಿ ಅರ್ಜಿ ಸಲ್ಲಿಸಿದರು.

        ಇದನ್ನೊಪ್ಪದ ನ್ಯಾಯಾಧೀಶ ಬಿ.ವಿ.ಪಾಟೀಲ, ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಆರೋಪಿಗಳ ಮುಂದೆಯೇ ಸಾಕ್ಷಿಗಳ ವಿಚಾರಣೆ ನಡೆಯಬೇಕು. ಆದ್ದರಿಂದ ಮನವಿ ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿದರು. ವಾರಕ್ಕೆ ಒಂದು ಬಾರಿ ಮಾತ್ರ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಬೇಕು ಎಂಬ ಮನವಿಯನ್ನು ಕೂಡ ನ್ಯಾಯಾಧೀಶರು ಪುರಸ್ಕರಿಸಲಿಲ್ಲ.

        ಪ್ರಕರಣದ ಇತರ ಆರೋಪಿಗಳಾದ ಆನಂದ್ ಸಿಂಗ್ ಹಾಗೂ ಸ್ವಸ್ತಿಕ್ ನಾಗರಾಜ್ ಅವರ ವಿರುದ್ಧ ಕೂಡ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here