ಟೂಡಾದ 29ನೇ ಅಧ್ಯಕ್ಷರಾಗಿ ಬಿ.ಎಸ್.ನಾಗೇಶ್ ಅಧಿಕಾರ ಸ್ವೀಕಾರ..!

ತುಮಕೂರು

    ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ 29ನೇ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಬಿ.ಎಸ್.ನಾಗೇಶ್(ಬಾವಿಕಟ್ಟೆ ನಾಗಣ್ಣ) ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜಿಲ್ಲಾಧಿಕಾರಿಗಳೇ ಟೂಡಾ ಅಧ್ಯಕ್ಷರಾಗಿದ್ದರು,
ಮುಂದಿನ ಮೂರು ವರ್ಷ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಸರ್ಕಾರ ನಾಗೇಶ್ ಅವರನ್ನು ಟೂಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

    ಟೂಡಾ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮದ ನಡುವೆ ಬಿ.ಎಸ್.ನಾಗೇಶ್ ಅಧಿಕಾರ ಸ್ವೀಕಾರ ಮಾಡಿದರು. ಈ ವೇಳೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಜರಿದ್ದು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.ಸುಮಾರು 30-35 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದ ನಾಗೇಶ್ ಅವರ ಸೇವೆಗೆ ಸರ್ಕಾರ ಈ ಗೌರವ ನೀಡಿದೆ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಗೆಲುವು ಸಾಧ್ಯವಾಗಲು ನಾಗೇಶ್ ಅವರ ಶ್ರಮ ಗಮನಾರ್ಹ ಎಂದು ಶಾಸಕರು ಈ ವೇಳೆ ಹೇಳಿದರು.

   ಬಿ.ಸಿ.ನಾಗೇಶ್ ಮಾತನಾಡಿ, ಟೂಡಾದಲ್ಲಿ ಸಾರ್ವಜನಿಕರ ಕೆಲಸಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಅಪವಾದವಿದೆ, ಇನ್ನುಮೇಲೆ ಅಂತಹ ಅಪವಾದಗಳನ್ನು ದೂರ ಮಾಡಿ ಸಕಾಲದಲ್ಲಿ ಸಾರ್ವಜನಿಕರ ಕೆಲಸ ಆಗುವಂತೆ ನೋಡಿಕೊಳ್ಳುವುದಾಗಿ ಹೇಳಿದರು.
ಟೂಡಾದಿಂದ ನಗರದಲ್ಲಿ ಡಾ.ಶಿವಕುಮಾರಸ್ವಾಮೀಜಿಗಳ ಹೆಸರಿನ ದೊಡ್ಡ ವಸತಿ ಬಡಾವಣೆ ನಿರ್ಮಾಣ ಮಾಡಬೇಕೆಂಬ ಆಶಯವಿದ್ದು, ತಮ್ಮ ಅಧಿಕಾರವಧಿಯಲ್ಲಿ ಅದನ್ನು ಈಡೇರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

   ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿಶಂಕರ್, ನಗರ ಅಧ್ಯಕ್ಷ ಹನುಮಂತರಾಜು, ಮಹಿಳಾ ಘಟಕ ಅಧ್ಯಕ್ಷೆ ಸರೋಜಗೌಡ, ನಗರಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್, ಜಯಲಕ್ಷ್ಮೀಪುಟ್ಟರಾಜು, ಮುಖಂಡರಾದ ಸ್ನೇಕ್‍ನಂದೀಶ್, ರುದ್ರೇಶ್, ಶಂಕರ್ ಸೇರಿದಂತೆ ಹಲವರು ಹಾಜರಿದ್ದು ನೂತನ ಟೂಡಾ ಅಧ್ಯಕ್ಷರನ್ನು ಅಭಿನಂದಿಸಿ ಶುಭ ಕೋರಿದರು.

ಈವರೆಗಿನ ಟೂಡಾ ಅಧ್ಯಕ್ಷರು

   1988ರಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿತು. ಆಗಿನಿಂದ ಈಗ ಅಧ್ಯಕ್ಷರಾಗಿರುವ ಬಿ.ಎಸ್.ನಾಗೇಶ್‍ವರೆಗೆ 29 ಮಂದಿ ಅಧ್ಯಕ್ಷರಾಗಿದ್ದಾರೆ.1988ರಲ್ಲಿ ಟೂಡಾ ಅಸ್ತಿತ್ವಕ್ಕೆ ಬಂದಾಗ ಆಗಿನ ಜಿಲ್ಲಾಧಿಕಾರಿ ಲಕ್ಷ್ಮೀವೆಂಕಟಾಚಲಂ ಮೊದಲ ಅಧ್ಯಕ್ಷರಾದರು. ನಂತರದ ಜಿಲ್ಲಾಧಿಕಾರಿ ಐ.ಆರ್.ಪೆರುಮಾಳ್ 91ರವರೆಗೆ, ನಂತರದ ಜಿಲ್ಲಾಧಿಕಾರಿ ಡಿ.ಸತ್ಯಮೂರ್ತಿ 92ರವರೆಗೆ ಟೂಡಾ ಅಧ್ಯಕ್ಷರಾಗಿದ್ದರು.

   ಇದಾಗಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಟೂಡಾ ಅಧ್ಯಕ್ಷರ ನೇಮಕ ಆರಂಭಿಸಿತು. ದೇವೇಗೌಡ (ಎರಡು ಬಾರಿ), ವಿಶ್ವೇಶ್ವರಯ್ಯ(ವಿಶ್ವಣ್ಣ), ಅಬ್ದುಲ್ ಮುನಾಫ್, ಮಹಮ್ಮದ್ ಇಕ್ಬಾಲ್, ರೆಡ್ಡಿಚಿನ್ನಯಲ್ಲಪ್ಪ, ಸಿದ್ಧಲಿಂಗೇಗೌಡ, ಸುಲ್ತಾನ್ ಮಹಮ್ಮದ್, ಎಸ್.ಆರ್.ಶ್ರೀಧರಮೂರ್ತಿ, ಸಿ.ಶಿವಮೂರ್ತಿ, ಡಾ.ಎಸ್.ರಫಿಕ್ ಅಹಮದ್ ಹಾಗೂ ಈಗ ಬಿ.ಎಸ್.ನಾಗೇಶ್ ಟೂಡಾ ಅಧ್ಯಕ್ಷರಾಗಿದ್ದರೆ.
ಆಯಾ ಅಧ್ಯಕ್ಷರ ಅವಧಿ ಪೂರ್ಣಗೊಂಡು ಇಲ್ಲವೆ, ಸರ್ಕಾರ ಇವರನ್ನು ಪದಚ್ಯುತಿಗೊಳಿಸಿದ ನಡುವಿನ ಅವಧಿಯಲ್ಲಿ ಆಗಿನ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದರು.ಶಾಸಕರಾಗಿದ್ದ ಡಾ.ರಫಿಕ್ ಅಹಮದ್ ಅವರು 3.6.2018ರಂದು ಟೂಡಾ ಅಧ್ಯಕ್ಷ ಸ್ಥಾನ ಮುಗಿಸಿದ ನಂತರ ಇಲ್ಲಿಯವರೆಗೆ ಸುಮಾರು ಎರಡು ವರ್ಷ ಕಾಲ ಟೂಡಾ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರದಿಂದ ನೇಮಕ ಆಗಿರಲಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link