ಚಿಕ್ಕನಾಯಕನಹಳ್ಳಿ
ರೈತರು ಜಮೀನು ಬಿಟ್ಟುಕೊಡಲಿ ಅಥವಾ ಬಿಟ್ಟುಕೊಡದೇ ಇರಲಿ ಹೇಮಾವತಿ ನಾಲಾ ಕಾಮಗಾರಿ ಮಾತ್ರ ಇನ್ನು ಮುಂದೆ ಸ್ಥಗಿತಗೊಳ್ಳುವುದಿಲ್ಲ, ಇಂದು ಆರಂಭವಾಗಿರುವ ನಾಲಾ ಕಾಮಗಾರಿ ಕೆಲವೇ ತಿಂಗಳಿನಲ್ಲಿ ಸಾಸಲು ಕೆರೆಗೆ ತಲುಪಿ ಶೀಘ್ರದಲ್ಲಿ ನೀರು ಹರಿಸಲಾಗುವುದು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ತಿಗಳನಹಳ್ಳಿಯಲ್ಲಿ ಸ್ಥಗಿತಗೊಂಡಿದ್ದ ಹೇಮಾವತಿ ನಾಲಾ ಕಾಮಗಾರಿಯ ಆರಂಭಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿಗಳು ಸ್ಥಗಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರು ಬಿಟ್ಟುಕೊಡದ ಜಮೀನುಗಳನ್ನು ವಶಡಪಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ ಹಾಗೂ ರೈತರಿಗೆ ಯಾವುದೇ ರೀತಿಯಲ್ಲಿ ಪರಿಹಾರದ ತೊಂದರೆಯಾಗದಂತೆ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ತಿಳಿಸಿದೆ ಎಂದರು.
ಹೇಮಾವತಿ ನಾಲಾ ಕಾಮಗಾರಿ ಮೊದಲನೇ ಹಂತವಾಗಿ ಸಾಸಲು, ಪೆಮ್ಮಲದೇವರಕೆರೆಗೆ ಹಾಗೂ ಎರಡನೇ ಹಂತದಲ್ಲಿ ಪಟ್ಟದದೇವರಕೆರೆಗೆ ನೀರು ಹರಿಸಲಾಗುವುದು, ಜಮೀನು ಬಿಟ್ಟುಕೊಟ್ಟ ರೈತರಿಗೆ ಪರಿಹಾರ ನೀಡಲು ಅವಾರ್ಡ್ ಆಗಿದ್ದು 3ಕೋಟಿ 80ಲಕ್ಷ ಹಣ ಬಿಡುಗಡೆಯಾಗಿದೆ, ಇದರಲ್ಲಿ ಕೆಲವು ರೈತರ ಅವಾರ್ಡ್ ತೆಗೆದುಕೊಂಡು ಭೂಮಿ ಬಿಟ್ಟುಕೊಟ್ಟಿದ್ದಾರೆ, ಕೆಲವರು ನ್ಯಾಯಾಲಯಕ್ಕೆ ಹೋಗಿರುವುದರಿಂದ ಹಾಗೂ ಜಮೀನು ಮಾಲೀಕರು ಸ್ಥಳದಲ್ಲಿ ಇಲ್ಲದ ಕಾರಣ ಹೇಮಾವತಿ ಕಾಮಗಾರಿ ತಡವಾಗುತ್ತಿದೆ, ಹಿಂದಿನ ನಾಲಾ ಕಾಮಗಾರಿ ಗುತ್ತಿಗೆದಾರರಿಗೆ ಸರ್ಕಾರ ರೈತರಿಂದ ಜಮೀನು ವಶಪಡಿಸಿಕೊಂಡು ನೀಡದ ಕಾರಣ ಗುತ್ತಿಗೆದಾರರು ನ್ಯಾಯಾಲಯದಲ್ಲಿ ನಷ್ಠವಾಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ ಹಾಗಾಗಿ ಕಾಮಗಾರಿ ಸ್ಥಗಿತವಾಗಿತ್ತು, ಗುತ್ತಿಗೆದಾರರನ್ನು ಕರೆದು ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಬೇರೆ ಗುತ್ತಿಗೆದಾರರ ಮುಖಾಂತರ ಪೆಮ್ಮಲದೇವರ ಕೆರೆಯವರೆಗೆ ಕಾಮಗಾರಿ ಮಾಡಿಸಿಕೊಳ್ಳಿ ಎಂದು ನ್ಯಾಯಾಲಯಕ್ಕೆ ಮೊರೆ ಹೋದ ಗುತ್ತಿಗೆದಾರರು ಸಂಧಾನಕ್ಕೆ ಬಂದಿದ್ದ ಕಾರಣಕ್ಕಾಗಿ ಮತ್ತೊಬ್ಬ ಗುತ್ತಿಗೆದಾರರಿಂದ ಕಾಮಗಾರಿ ಮಾಡಿಸುತ್ತಿರುವುದಾಗಿ ತಿಳಿಸಿದರು.
ಎತ್ತಿನಹೊಳೆ ಯೋಜನೆ ಕಾಮಗಾರಿ ಬರದಿಂದ ನಡೆಯುತ್ತಿದ್ದು ಚಿ.ನಾ.ಹಳ್ಳಿ, ತಿಪಟೂರು, ತುರುವೇಕೆರೆಗೆ ನೀರು ಹರಿಯುವುದಿಲ್ಲ ಆದರೆ ಅರಸೀಕೆರೆ, ಕೊರಟಗೆರೆ ಹಾಗೂ ಮಧುಗಿರಿ ತಾಲ್ಲೂಕುಗಳಿಗೆ ನೀರು ಹರಿಯುತ್ತದೆ, ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯಬೇಕಾದರೆ ಹೋರಾಟ ಮಾಡುವುದು ಅನಿವಾರ್ಯ ಎಂದ ಅವರು, 1.5 ಟಿ.ಎಮ್.ಸಿ ನೀರು ತಾಲ್ಲೂಕಿಗೆ ನೀಡುವಂತೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ ಎಂದರು.
ಜಿ.ಪಂ.ಸದಸ್ಯೆ ಮಂಜುಳಮ್ಮ ಮಾತನಾಡಿ, ಸ್ಥಗಿತಗೊಂಡಿದ್ದ ಹೇಮಾವತಿ ನಾಲಾ ಪುನರ್ ಕಾಮಗಾರಿಗೆ ಶಾಸಕ ಜೆ.ಸಿ.ಮಾಧುಸ್ವಾಮಿರವರು ಶಿವರಾತ್ರಿ ದಿವಸದಂದು ಗುದ್ದಲಿ ಪೂಜೆ ನೆರವೇರಿಸಿರುವುದರಿಂದ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಹಾಗೂ ಶಾಸಕರ ಬದ್ಧತೆಯಿಂದ ತಾಲ್ಲೂಕಿನ ಹಲವು ಸಿ.ಸಿರಸ್ತೆ, ಚರಂಡಿ ಕಾಮಗಾರಿಗಳು ನೆರವೇರುತ್ತಿವೆ ಎಂದು ಹೇಳಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಹೆಚ್.ಆರ್.ಶಶಿಧರ್ ಮಾತನಾಡಿ, ಹೇಮಾವತಿ ನಾಲಾ ಕಾಮಗಾರಿಗೆ ಜೆ.ಸಿ.ಮಾಧುಸ್ವಾಮಿರವರು ಎಂದಿಗೂ ವಿರೋಧ ವ್ಯಕ್ತಪಡಿಸಿರಲಿಲ್ಲ ಆದರೆ ಕೆಲವು ವಿರೋಧಿಗಳು ಮಾತ್ರ ಹೇಮಾವತಿ ಕಾಮಗಾರಿ ಸ್ಥಗಿತಗೊಳ್ಳಲು ಮಾಧುಸ್ವಾಮಿಯವರೇ ಕಾರಣ ಎಂದು ಸುಳ್ಳು ಸುದ್ದಿಯನ್ನು ಹಬ್ಬಸಿದ್ದರು, ಶಾಸಕರೇ ಮುಂದೆ ನಿಂತು ಕಾಮಗಾರಿ ಪೂರ್ಣಗೊಳಿಸಲು ಮೊದಲಿನಿಂದಲೂ ಕಂಕಣ ಬದ್ದರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಬಿಜೆಪಿ ಕಾರ್ಯದರ್ಶಿ ನಿರಂಜನ್‍ಮೂರ್ತಿ, ತಾ.ಪಂ.ಸದಸ್ಯ ಕೇಶವಮೂರ್ತಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಿಮ್ಲಾಪುರ ಶಂಕರಲಿಂಗಪ್ಪ, ಎ.ಪಿ.ಎಂ.ಸಿ ಸದಸ್ಯ ಶಿವರಾಜ್, ಮಾಜಿ ಪುರಸಭಾಧ್ಯಕ್ಷ ಹೆಚ್.ಬಿ.ಪ್ರಕಾಶ್, ಸಿ.ಎಂ.ರಂಗಸ್ವಾಮಯ್ಯ, ಮಾಜಿ ಪುರಸಭಾ ಸದಸ್ಯ ಸಿ.ಪಿ.ಮಹೇಶ್, ಮಲಗೊಂಡನಹಳ್ಳಿ ಗಂಗಾಧರಯ್ಯ, ಬರಗೂರು ಬಸವರಾಜು, ಪ್ರಸನ್ನಕುಮಾರ್, ಎನ್.ಎನ್.ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.