ಕೋಲ್ಕತ :
ದೀದಿ ರಾಜ್ಯದಲ್ಲಿ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ಮಾಡಿದ ಸಾಧನೆ ಗಮನಾರ್ಹವಾಗಿದೆ ಅಲ್ಲದೇ ಪ.ಬಂಗಾಳದಲ್ಲಿ ಬಿಜೆಪಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಂಡಿರುವುದನ್ನು ಸಹಿಸಲಾರದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ರಾಜಕೀಯಕ್ಕೆ ಸಂಬಂಧಿಸಿದಂತೆ ತಮ್ಮ ಮುಂದಿನ ವ್ಯೂಹಗಾರಿಕೆಗೆ ಶ್ರೀಕಾರ ಬರೆದಿದ್ದಾರೆ.
ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದ ಅವರು “ನಾವು ಪ್ರಜಾಸತ್ತೆಯ ಉಳಿವಿಗಾಗಿ ಮನೆಮನೆ ಭೇಟಿ ನೀಡುವ ಆಂದೋಲನವನ್ನು ಆರಂಭಿಸುತ್ತೇವೆ; ನಮಗೆ ಇವಿಎಂಗಳ ಮೇಲೆ ನಂಬಿಕೆ ಇಲ್ಲ ಜೋತೆಗೆ ಅವು ಬೇಕಾಗಿಲ್ಲ; ನಾವು ಮತ್ತೆ ಮತ ಪತ್ರದ ಯುಗಕ್ಕೆ ಮರಳುವ ಅಗತ್ಯ ಬಂದೊದಗಿದೆ ಇವಿಎಂ ಸಾಚಾತನದ ಬಗ್ಗೆ ಸತ್ಯಶೋಧನ ಸಮಿತಿಯನ್ನು ರೂಪಿಸುವ ಅಗತ್ಯವಿದೆ’ ಎಂದು ಮಮತಾ ಹೇಳಿದ್ದಾರೆ.
ಪಶ್ಚಿಮ ಬಂಗಾಲದಲ್ಲಿ 2014ರಲ್ಲಿ ಕೇವಲ ಎರಡು ಸ್ಥಾನಗಳನ್ನು ಮಾತ್ರವೇ ಗೆದ್ದಿದ್ದ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ದಾಖಲೆಯ 18 ಸೀಟುಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸವನ್ನೇ ಬರೆದಿದೆ. ಇದು ಮಮತಾ ಬ್ಯಾನರ್ಜಿ ಅವರನ್ನು ಕಂಗಾಲು ಮಾಡಿದೆ ಎಂದರೆ ತಪ್ಪಿಲ್ಲ.
ರಾಜ್ಯದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯ ಎಲ್ಲ ಹಂತಗಳಲ್ಲಿ ಹಿಂಸೆ, ದೊಂಬಿ ಸ್ಫೋಟಗೊಂಡಿದೆ. ಇವೆಲ್ಲಕ್ಕೂ ಬಿಜೆಪಿಯೇ ಕಾರಣ ಎಂದು ಮಮತಾ ದೂರಿದ್ದಾರೆ. ಮೇಲಾಗಿ ಚುನಾವಣಾ ಆಯೋಗ ಬಿಜೆಪಿಯ ನಿರ್ದೇಶನದ ಪ್ರಕಾರ ಕೆಲಸ ಮಾಡುತ್ತಿದೆ; ಚುನಾವಣಾ ಆಯೋಗದ ಅಧಿಕಾರಿಗಳೆಲ್ಲರೂ ಆರ್‌ಎಸ್‌ಎಸ್ ಸದಸ್ಯರಾಗಿದ್ದಾರೆ ಎಂದೆಲ್ಲ ಮಮತಾ ದೂರಿದ್ದರು.
ರಾಜ್ಯದ ಮತದಾರರು ಮಮತಾ ಆಡಳಿತ ವೈಖರಿ , ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣ ಇತ್ಯಾದಿಗಳಿಂದ ಬೇಸತ್ತಿರುವುದನ್ನು ಚುನಾವಣೆಯಲ್ಲಿ ಬಹಿರಂಗಪಡಿಸಿದ್ದಾರೆ; ಮೇಲಾಗಿ ಚುನಾವಣೆ ಬಳಿಕ ಟಿಎಂಸಿಯ ಅನೇಕ ಶಾಸಕರು, ಕೌನ್ಸಿಲರ್‌ಗಳು ಬಿಜೆಪಿ ಸೇರಿರುವುದು ಮಮತಾ ಅವರ ನಿದ್ದೆಗೆಡಿಸಿದೆ ಎಂದು ವರದಿಗಳು ಹೇಳುತ್ತವೆ.