ನನಗೂ ಮಂತ್ರಿ ಸ್ಥಾನ ಸಿಗುವ ಭರವಸೆ:ತಿಪ್ಪಾರೆಡ್ಡಿ

ಚಿತ್ರದುರ್ಗ

    ಜಿಲ್ಲೆಯ ಹಿರಿಯ ಶಾಸಕ, ರಾಜಕೀಯ ಅನುಭವ ಹೊಂದಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮಂತ್ರಿ ಆಗಬೇಕೆಂಬ ಆಸೆ ಇದ್ದು, ಭರವಸೆಯೂ ಇದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆ.

    ಮೈತ್ರಿ ಸರ್ಕಾರ ಬೀಳುವ ಹಂತದಲ್ಲಿರುವ ಈ ವೇಳೆ ಬಿಜೆಪಿ ಶಾಸಕರೆಲ್ಲರೂ ಒಂದೆಡೆ (ರೇಸಾರ್ಟ್‍ನಲ್ಲಿ) ಇರುವುದು ಅನಿವಾರ್ಯವಾಗಿದೆ. ವರಿಷ್ಠರ ಅನುಮತಿ ಪಡೆದು ಚಿತ್ರದುರ್ಗಕ್ಕೆ ಆಗಮಿಸಿದ್ದೇನೆ. ಬಿ.ಎಸ್.ಯಡಿಯೂರಪ್ಪ ಮತ್ತಿತರ ನಾಯಕರ ಒಪ್ಪಿಗೆ ಪಡೆದು, ಆರ್‍ಎಸ್‍ಎಸ್‍ನ ಗುರುವಂದನಾ ಕಾರ್ಯಕ್ರಮ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯ ಹಿನ್ನೆಲೆಯಲ್ಲಿ ಚಿತ್ರದುರ್ಗಕ್ಕೆ ಆಗಮಿಸಿದ್ದೇನೆ. ನನ್ನ ಮೇಲೂ ಬಹಳಷ್ಟ ನಂಬಿಕೆಯನ್ನಿಟ್ಟು ಕಳುಹಿಸಿದ್ದಾರೆ. ಇದು ನನಗೆ ಬಹಳ ಸಂತಸವನ್ನು ತಂದಿದೆ.

    ಚಿತ್ರದುರ್ಗ ಜಿಲ್ಲೆ ದಾವಣಗೆರೆ ಜಿಲ್ಲೆಗೆ ಹೋಲಿಸಿದರೆ ಬಹಳಷ್ಟು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಇನ್ನೂ ಬಹಳಷ್ಟು ಅಭಿವೃದ್ಧಿ ಕಾಣಬೇಕು. ಆದರೆ, ಇಚ್ಛಾಶಕ್ತಿ ಕಾರಣಕ್ಕೆ ಸಾಧ್ಯವಾಗಿಲ್ಲ. ನಾನು ಕೂಡ ಕೇವಲ ಶಾಸಕನಾಗಿ ಅಧಿಕಾರ ಅನುಭವಿಸಿದೆ. ಜತೆಗೆ ನಾನಿದ್ದ ಪಕ್ಷ ಅಧಿಕಾರದಲ್ಲಿದ್ದಿದ್ದು ಕೂಡ ಅಪರೂಪ. ಈಗ ಕಾಲ ಕೂಡಿಬಂದಿದೆ.

    ರೈತನಾಯಕ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಗೆ ಕಾಲ ಸನಿಹವಾಗಿದ್ದು, ಬೆಂಗಳೂರಿಗೆ ತೆರಳಿ ಬಿಎಸ್‍ವೈ ನೇತೃತ್ವದಲ್ಲಿ ಸಭೆಯಲ್ಲಿ ಪಾಲ್ಗೊಂಡು, ಸೋಮವಾರ ವಿಶ್ವಾಸಮತದಲ್ಲಿ ಪಾಲ್ಗೊಳ್ಳುತ್ತೇನೆ. ಬಹುತೇಕ ಸರ್ಕಾರ ಈಗಾಗಲೇ ಬಹುಮತ ಕಳೆದುಕೊಂಡಿದ್ದು, ತಾಂತ್ರಿಕ ಮುದ್ರೆ ಬೀಳಬೇಕಾಗಿದೆಯಷ್ಟೇ ಎಂದು ತಿಳಿಸಿದರು.

    ಮಂತ್ರಿ ಆಗುವ ವಿಶ್ವಾಸ ಹೊಂದಿದ್ದು, ಭರವಸೆಯೂ ಇದೆ. ಒಂದು ವೇಳೆ ಮಂತ್ರಿ ಸ್ಥಾನ ದೊರೆತರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಜತೆಗೆ ನನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆ, ನೇರ ರೈಲ್ವೆ ಮಾರ್ಗ ಸೇರಿ ಅನೇಕ ಯೋಜನೆಗೆ ಮುಕ್ತಿ ನೀಡುವ ಪ್ರಯತ್ನ ಮಾಡಬೇಕು ಎಂಬ ಆಸೆ ಇದೆ ಎಂದು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link