ಪಾವಗಡ
ನಿಧಿಗಳ್ಳರ ಹಾವಳಿಗೆ ಕಾಮನದುರ್ಗ ಬೆಟ್ಟದಲ್ಲಿ ಇರುವ ಶ್ರೀರಾಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ನಂದಿ ವಿಗ್ರಹ ಧ್ವ್ವಂಸಗೊಳಿಸಿದ ಘಟನೆ ನಡೆದಿದೆ.ತಾಲ್ಲೂಕಿನ ವೈ.ಎನ್.ಹೊಸಕೋಟೆ ಪೋಲೀಸ್ ಠಾಣಾ ವ್ಯಾಪ್ತಿಯ ಕಾಮನದುರ್ಗ ಬೆಟ್ಟದಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬಸವಣ್ಣ ವಿಗ್ರಹವನ್ನು ನಿಧಿಗಳ್ಳರು ಧ್ವಂಸ ಮಾಡಿದ್ದಾರೆ. ಇತ್ತೀಚೆಗೆ ನಿಡಗಲ್ ಸೇರಿದಂತೆ ವಿವಿಧ ಪುರಾತನ ದೇವಾಲಯಗಳಲ್ಲಿ ಇರುವ ವಿಗ್ರಹಗಳನ್ನು ಹಾಳು ಮಾಡುತ್ತಿದ್ದಾರೆ.
ತಲೆ ಭಾಗದಲ್ಲಿ ಪೂರ್ವಿಕರು ಚಿನ್ನ, ವಜ್ರ , ರತ್ನಾಭರಣಗಳನ್ನು ಅಡಗಿಸಿಟ್ಟಿರುತ್ತಾರೆ ಎಂಬ ಮೂಢ ನಂಬಿಕೆಯಿಂದ ಪೂರಾತನ ಕಾಲದ ನೂರಾರು ದೇವಾಲಯಗಳು ಇಂದು ಹಾಳಾಗುತ್ತಿವೆ. ತಾಲ್ಲೂಕು ಆಡಳಿತ ನಿಧಿಗಳ್ಳರ ಹಾವಳಿಗೆ ಯಾವುದೇ ಕಡಿವಾಣ ಹಾಕುವುದರಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀಲಮಮ್ಮನ ಹಳ್ಳಿ ಮಾಜಿ ಗ್ರಾ.ಪಂ.ಅಧ್ಯಕ್ಷ ಅಶ್ವತ್ಥಪ್ಪ, ಕಾಮನದುರ್ಗ ಬೆಟ್ಟ ಸೇರಿದಂತೆ ನಿಡಗಲ್ ಹಾಗೂ ತಾಲ್ಲೂಕಿನ ಹಲವು ದೇವಾಲಯಗಳು ನಿಧಿಗಳ್ಳರ ಹಾವಳಿಗೆ ಸಿಲುಕಿ ಹಾಳಾಗುತ್ತಿವೆ. ಕಳೆದ ಎರಡು ದಿನಗಳ ಹಿಂದೆ ಕಾಮನದುರ್ಗ ಬೆಟ್ಟದ ಶ್ರೀರಾಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿನ ನಂದಿ ವಿಗ್ರಹವನ್ನು ನಿಧಿಗಳ್ಳರು ಹೊಡೆದಿದ್ದು, ನಿಧಿಗಾಗಿ ಪುರಾತನ ವಿಗ್ರವನ್ನು ದ್ವಂಸಗೊಳಿಸುವುದು ಖಂಡನೀಯ. ಸಂಬಂಧಪಟ್ಟವರು ಇಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಂಡು, ತಾಲ್ಲೂಕಿನ ಪುರಾತನ ಕಾಲದ ದೇವಾಲಯಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಸರ್ಕಾರ ಹಾಗೂ ಜನತೆಯ ಮೇಲಿದೆ ಎಂದರು.
ತಾಲ್ಲೂಕಿನ ಹಲವು ದೇವಾಲಯಗಳಲ್ಲಿನ ವಿಗ್ರಹಗಳ ಧ್ವಂಸದಲ್ಲಿ ನೆರೆಯ ಆಂಧ್ರ್ರದವರು ಹೆಚ್ಚು ಭಾಗಿಯಾಗುತ್ತಿದ್ದಾರೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೀಲಮ್ಮನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








