ನರೇಗಾ ಒಂದೇ ಗ್ರಾ.ಪಂ. ಸದಸ್ಯರ ಕೆಲಸವಲ್ಲ: ಸಿದ್ದೇಶ್ವರ್

ದಾವಣಗೆರೆ:

      ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಮಾಡಿಸುವುದಷ್ಟೇ ಗ್ರಾಮ ಪಂಚಾಯತ್ ಸದಸ್ಯರುಗಳ ಕೆಲಸವಲ್ಲ. ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾಗೊಳಿಸುವ ಜವಾಬ್ದಾರಿಯೂ ನಿಮ್ಮ ಮೇಲಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ತಿಳಿಸಿದರು.

    ತಾಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಹುಲಿಕಟ್ಟೆ ಗ್ರಾಮದಲ್ಲಿ ನೂತನ ಗ್ರಾಮಪಂಚಾಯತಿ ಕಟ್ಟಡ, ವ್ಯಾಯಾಮಶಾಲೆ ಕಟ್ಟಡ ಹಾಗೂ ಅಂಬೇಡ್ಕರ್ ಭವನಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಗ್ರಾಮ ಪಂಚಾಯತಿಗಳ ಬಹುತೇಕ ಸದಸ್ಯರುಗಳು, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿಸುವುದು ಅಷ್ಟೆ ತಮ್ಮ ಕೆಲಸ ಎಂಬುದಾಗಿ ಭಾವಿಸಿಕೊಂಡು ಕಾರಣ ಅನೇಕ ಜವಬ್ದಾರಿಯುತ ಕೆಲಸಗಳನ್ನು ಮಾಡಿಸುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

     ಕೇಂದ್ರ ಸರ್ಕಾರ ವಿವಿಧ ವಿಮಾ ಯೋಜನೆ, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಜವಾಬ್ದಾರಿ ಗ್ರಾಮ ಪಂಚಾಯತಿ ಸದಸ್ಯರ ಹೆಗಲ ಮೇಲಿದೆ. ಆಯಾ ಗ್ರಾಮಗಳಲ್ಲಿ ಎಷ್ಟು ಜನ ವಿಮೆ ಮಾಡಿಸಿದ್ದಾರೆ, ಇನ್ನೂ ಎಷ್ಟು ಜನ ವಿಮೆ ಮಾಡಿಸುವವರಿದ್ದಾರೆ.

     ಅಫಘಾತವಾದವರಿಗೆ ಹಾಗೂ ಮೃತರಾದ ಎಷ್ಟು ಜನರಿಗೆ ವಿಮೆ ಹಣ ಬರಬೇಕಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಸದಸ್ಯರು ಹೊಂದಿರಬೇಕು. ಉಜ್ವಲ ಯೋಜನೆಯಡಿ ಎಷ್ಟು ಜನ ಫಲಾನುಭವಿಗಳಿದ್ದಾರೆ ನಮ್ಮ ಗ್ರಾಮವನ್ನು ಹೊಗೆರಹಿತ ಗ್ರಾಮವನ್ನಾಗಿ ಮಾಡಲು ಇನ್ನು ಎಷ್ಟು ಜನರಿಗೆ ಉಚಿತ ಗ್ಯಾಸ್ ಸಂಪರ್ಕ ಕೊಡಿಸಬೇಕು ಎನ್ನುವ ಬಗ್ಗೆಯೂ ಅವರು ಗಮನಹರಿಸಬೇಕೆಂದು ಸಲಹೆ ನೀಡಿದರು.

      2014 ರಿಂದ ದೇಶದಲ್ಲಿ ಸ್ವಚ್ಛ ಭಾರತ ಯೋಜನೆಯಡಿ ದೊಡ್ಡ ಕ್ರಾಂತಿಯೇ ಆಗಿದೆ, 2014ಕ್ಕಿಂತ ಮುಂಚೆ ಶೇ 45 ರಷ್ಟಿದ್ದ ಶೌಚಾಲಯ ಹೊಂದಿದವರ ಪ್ರಮಾಣ 2018ಕ್ಕೆ ಶೇ.88ಕ್ಕೆ ಏರಿದೆ. 2014 ರಿಂದ ಇಲ್ಲಿಯವರೆಗೂ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 8.10 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. 19 ರಾಜ್ಯಗಳ 427 ಜಿಲ್ಲೆಗಳಲ್ಲಿ ಸುಮಾರು 5 ಲಕ್ಷ ಗ್ರಾಮಗಳು ಬಯಲು ಶೌಚಾಲಯ ಮುಕ್ತ ಎಂದು ಘೋಷಣೆಯಾಗಿವೆ, ಇದು ಅಚ್ಚೇ ದಿನ್ ಅಲ್ಲವೇ ಎಂದು ಹೇಳಿದರು.

     ಕಾರ್ಯಕ್ರಮದಲ್ಲಿ ಶಾಸಕ ಎಂ.ಲಿಂಗಣ್ಣ, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷೆ ಗೀತಾ ಗಂಗಾಧರನಾಯ್ಕ, ಮಂಡಲ ಬಿ.ಜೆ.ಪಿ. ಅಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ್, ಜಿಲ್ಲಾ ಪಂಚಾಯತಿ ಸದಸ್ಯ ಕೆ.ಎಸ್.ಬಸವರಾಜ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಅಣಜಿ ಗುಡ್ಡೇಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap