ಹೊನ್ನಾಳಿ:
ನಾಟಕಗಳಿಂದ ಮನರಂಜನೆ ಜೊತೆಗೆ ಬದುಕಿನ ಉತ್ತಮ ಸಂದೇಶ ಲಭಿಸುತ್ತದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕೊನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಾರುತಿ ಯುವಕ ಸಂಘದ ವತಿಯಿಂದ ಮಂಗಳವಾರ ರಾತ್ರಿ ಏರ್ಪಡಿಸಿದ್ದ “ನೇಗಿಲ ಯೋಗಿ” ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕ ಜೀವನದ ಭರಾಟೆಯಲ್ಲಿ ಮೂಲ ಸಂಪ್ರದಾಯಗಳಿಗೆ ತಿಲಾಂಜಲಿ ನೀಡುತ್ತಿರುವ ಸಂದರ್ಭದಲ್ಲಿ ನಾಟಕ ಕಲೆ ಗ್ರಾಮೀಣ ಪ್ರದೇಶದಲ್ಲಿ ಉಳಿದು ಬೆಳೆಯುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.
ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಈ ಭಾಗದ ರೈತರ ಹಿತ ದೃಷ್ಟಿಯಿಂದ ಮಂಜೂರಾದ 343 ಕೋಟಿ ರೂ.ಗಳಷ್ಟು ವೆಚ್ಚದ ತುಂಗಾ ನಾಲಾ ಆಧುನೀಕರಣ ಯೋಜನೆ ರೈತರಿಗೆ ಶಾಶ್ವತ ವರದಾನವಾಗಲಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಕೊನೆಯ ಭಾಗದ ರೈತರಿಗೆ ಆಧುನೀಕರಣಗೊಂಡ ನಾಲೆಗಳಿಂದ ಸರಾಗವಾಗಿ ನೀರು ತಲುಪಲಿದೆ ಎಂದರು.
ಕ್ಷೇತ್ರವನ್ನು ಬರಗಾಲ ಪಟ್ಟಿಗೆ ನಮ್ಮ ಇಚ್ಛಾಶಕ್ತಿಯಿಂದ ಹಲವಾರು ಬಾರಿ ಸರ್ಕಾರದ ಮೇಲೆ ಒತ್ತಡ ಹೇರಿ ಸೇರ್ಪಡೆಗೊಳಿಸಲಾಗಿದೆ. ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದಲ್ಲಿ ತಕ್ಷಣ ಸ್ಪಂದಿಸಲು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಲೋಕಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಜಿಲ್ಲಾದ್ಯಂತ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜಿ.ಎಂ. ಸಿದ್ಧೇಶ್ವರ್ ಲಕ್ಷ ಮತಗಳ ಅಂತರದಿಂದ ಜಯ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಿಪಂ ಸದಸ್ಯ ಎಂ.ಆರ್. ಮಹೇಶ್, ತಾಪಂ ಸದಸ್ಯ ಸಿ.ಆರ್. ಶಿವಾನಂದ್, ಕಸಬಾ ಸೊಸೈಟಿ ನಿರ್ದೇಶಕ ಕೆ.ಎನ್. ರಾಮಚಂದ್ರಗೌಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಾಂತರಾಜ್ ಪಾಟೀಲ್, ಜಿ.ಕೆ. ಸುರೇಶ್, ಕೊನಾಯಕನಹಳ್ಳಿ ಮಂಜುನಾಥ್, ನವೀನ್ ಸೇರಿದಂತೆ ಗ್ರಾಮದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.