ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳು

ಸಣ್ಣ ಸೌಲಭ್ಯಗಳಿಗೂ ಶುಲ್ಕ: ಗ್ರಾಹಕರಲ್ಲಿ ಗೊಂದಲ

ತುಮಕೂರು

       ಬ್ಯಾಂಕುಗಳಲ್ಲಿ ವಿಧಿಸುವ ವಿವಿಧ ರೀತಿಯ ದರಗಳು ದುಬಾರಿಯಾಗುತ್ತಿವೆ. ಬ್ಯಾಂಕಿಂಗ್ ಕ್ಷೇತ್ರ ಸೇವಾ ವಲಯವಾಗಿ ಉಳಿಯದೆ ನೇರಾ ನೇರಾ ವಾಣಿಜ್ಯ ಉದ್ದೇಶಕ್ಕಾಗಿಯೇ ಹುಟ್ಟಿಕೊಂಡಿವೆಯೇನೋ ಎಂಬ ಭಾವನೆ ಮೂಡುತ್ತಿದೆ. ಗ್ರಾಹಕರಿಗೆ ಸರಳವಾಗಿ ಸೇವಾ ಸೌಲಭ್ಯ ನೀಡುವ ಬದಲು ರಾಷ್ಟ್ರೀಕೃತ ಬ್ಯಾಂಕುಗಳು ಗ್ರಾಹಕರ ಜೇಬಿಗೆ ಬರೆ ಹಾಕಲು ಹೊರಟಿವೆ. 

ಜನರ ಬಳಿ ಇರುವ ಹಣವನ್ನು ಸುರಕ್ಷಿತವಾಗಿ ಇಡಲು ಬ್ಯಾಂಕುಗಳು ಅವಶ್ಯಕ. ಅದೇ ರೀತಿ ಜನರಿಗೆ ಅಗತ್ಯ ಸಾಲ ನೀಡಲು ಈ ಬ್ಯಾಂಕುಗಳ ಅವಶ್ಯಕತೆ ಇದೆ. ಕೊಡುವ ಮತ್ತು ಪಡೆಯುವ ರೀತಿಯಲ್ಲಿ ಸೇವಾ ವಲಯದಲ್ಲಿ ಈ ಬ್ಯಾಂಕಿಂಗ್ ವಲಯ ಕಾರ್ಯನಿರ್ವಹಿಸಬೇಕು. ಹಿಂದಿನಿಂದಲೂ ಈ ಪರಿಪಾಟಲು ಬೆಳೆದುಕೊಂಡು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಮೇಲೆ ಹೊರೆ ಹೆಚ್ಚಾಗುತ್ತಿರುವ ಬಗ್ಗೆ, ವಿಪರೀತ ತರಾವರಿ ಶುಲ್ಕಗಳನ್ನು ವಿಧಿಸುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. 

ನಗರಗಳು ಸೇರಿದಂತೆ ಇಂದು ಹಳ್ಳಿಗಾಡಿನಲ್ಲೂ ಬ್ಯಾಂಕ್ ಸೌಲಭ್ಯ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಾ ಇದೆ. ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ತೆರೆಯಲೇಬೇಕು ಎಂಬ ಕೇಂದ್ರ ಸರ್ಕಾರದ ಯೋಜನೆಯಂತೆ ಇಂದು ದೇಶದ ಶೇ. 60ರಿಂದ 70ರಷ್ಟು ಜನ ಇಂದು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಆಯಾ ನಗರಗಳಲ್ಲಿ ಅವರಿಗೆ ಅನುಕೂಲವಾಗುವ ಬ್ಯಾಂಕ್‍ಗಳಲ್ಲಿ ಬ್ಯಾಂಕ್ ಖಾತೆ ತೆರೆದು ವ್ಯವಹಾರ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಕೆಲವೊಂದು ಬ್ಯಾಂಕ್‍ಗಳನ್ನು ವಿಲೀನ ಮಾಡುವ, ದರಗಳನ್ನು ಏರಿಸುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸಂಬಂಧಪಡುವ ಎಸ್‍ಬಿಎಂ, ಎಸ್‍ಬಿಎಚ್ ಸೇರಿದಂತೆ ಇನ್ನಿತರ ಬ್ಯಾಂಕ್‍ಗಳನ್ನು ಎಸ್‍ಬಿಐನೊಂದಿಗೆ ವಿಲೀನ ಮಾಡಲಾಯಿತು. ನಂತರ ಪಂಜಾಬ್ ನ್ಯಾಷನಲ್ ಬ್ಯಾಂಕ್, ವಿಜಯ ಬ್ಯಾಂಕ್‍ಗಳನ್ನು ವಿಲೀನ ಮಾಡಲಾಯಿತು. ಆಗಸ್ಟ್ ಅಂತ್ಯದಲ್ಲಿ 10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಾಲ್ಕು ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲಾಗಿದೆ. ಹೀಗೆ ಬ್ಯಾಂಕ್‍ಗಳನ್ನು ವಿಲೀನ ಮಾಡಿ ಎರಡು ಮೂರು ಬ್ಯಾಂಕ್‍ಗಳನ್ನು ಒಂದರಲ್ಲಿ ವಿಲೀನಗೊಳಿಸುತ್ತಿರುವುದರಿಂದ ಈ ಬ್ಯಾಂಕ್‍ಗಳಲ್ಲಿ ಖಾತೆಗಳನ್ನು ಹೊಂದಿರುವ ಗ್ರಾಹಕರಿಗೆ ಗೊಂದಲಗಳು ಸೃಷ್ಟಿಯಾಗಿವೆ.

ಸ್ಟೇಟ್ ಬ್ಯಾಂಕ್‍ಗಳಿಗೆ ಸಂಬಂಧಿಸಿದ ಖಾತೆಗಳನ್ನು ಎಸ್‍ಬಿಐನಲ್ಲಿ ವಿಲೀನಗೊಳಿಸಿದ್ದು, ಈ ಬ್ಯಾಂಕ್‍ಗಳಲ್ಲಿ ಖಾತೆಗಳನ್ನು ಹೊಂದಿರುವ ಗ್ರಾಹಕರು ಎಸ್‍ಬಿಐ ಬ್ಯಾಂಕ್‍ಗೆ ಹೊಂದಿಕೊಂಡಿದ್ದಾರೆ. ಆದರೆ ಎಸ್‍ಬಿಐನಲ್ಲಿ ವಹಿವಾಟು ನಡೆಸಲು ಶುಲ್ಕಗಳನ್ನು ಹೆಚ್ಚಳ ಮಾಡಿದ್ದು, ಅದು ಜುಲೈ ತಿಂಗಳಿಂದಲೇ ಜಾರಿಗೊಂಡಿದೆ. ಆದರೆ ಈ ಬಗ್ಗೆ ಇನ್ನೂ ಬ್ಯಾಂಕ್ ನೌಕರರಿಗೆ ಸರಿಯಾದ ಮಾಹಿತಿ ಇಲ್ಲ. ಕೇವಲ ಹಿರಿಯ ಅಧಿಕಾರಿಗಳನ್ನು ಹೊರತು ಪಡಿಸಿದರೆ ಕೆಳ ವರ್ಗದ ನೌಕರರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇದು ಗ್ರಾಹಕರಿಗೆ ತಿಳಿಯದೇ ತಮ್ಮ ಜೇಬಿಗೆ ಕತ್ತರಿ ಹಾಕಿಸಿಕೊಳ್ಳುತ್ತಿದ್ದಾರೆ.

ಉಳಿತಾಯ ಖಾತೆದಾರ ಜೇಬಿಗೆ ಕತ್ತರಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಳಿತಾಯ ಖಾತೆ ತೆರೆಯಲು ಕನಿಷ್ಟ ಮೊತ್ತವನ್ನು ಹೂಡಿಕೆ ಮಾಡಬೇಕು. ಅದರಲ್ಲಿ ಇಂತಿಂತಹ ಪ್ರದೇಶಗಳಿಗೆ ಇಷ್ಟು ಎಂದು ನಿಗದಿ ಮಾಡಲಾಗಿದೆ. ಮೆಟ್ರೋ ನಗರಗಳು ಎಂದರೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಾದಂತಹ ಪ್ರದೇಶಗಳಲ್ಲಿ ಖಾತೆ ತೆರೆದರೆ ಅದರಲ್ಲಿ ಕನಿಷ್ಠ 3000 ಹಣವನ್ನು ಇರಿಸಬೇಕು. ಒಂದು ವೇಳೆ ಈ ನಿಗದಿತ ಮೊತ್ತದಲ್ಲಿ ಅರ್ಧದಷ್ಟು ಹಣ ಕಡಿಮೆ ಇದ್ದಲ್ಲಿ ಅಂದರೆ 1500 ರೂಗಳಿದ್ದರೆ ಅದಕ್ಕೆ 11 ರೂ.ಶುಲ್ಕ ವಿಧಿಸಲಾಗುತ್ತದೆ. 50 ರಿಂದ 75 ನಷ್ಟಿದ್ದರೆ, (1500 ರಿಂದ 750ರೂಗಳವರೆಗೆ)  ಅದಕ್ಕೆ 14 ರೂ. ಹೆಚ್ಚುವರಿಯಾಗಿ ಶುಲ್ಕ ಭರಿಸಬೇಕಾಗುತ್ತದೆ. 750ಕ್ಕಿಂತ ಕಡಿಮೆ ಇದ್ದಲ್ಲಿ ಅದಕ್ಕೆ 17 ರೂ. ಹೆಚ್ಚುವರಿಯಾಗಿ ಶುಲ್ಕ ಭರಿಸಬೇಕಾಗುತ್ತದೆ. ಇದು ಗ್ರಾಹಕರ ಮೇಲಾಗುತ್ತಿರುವ ಹೊರೆ.

ಅದೇ ರೀತಿ ತಾಲ್ಲೂಕು ಕೇಂದ್ರಗಳಲ್ಲಿನ ಬ್ಯಾಂಕ್‍ನಲ್ಲಿ ಖಾತೆ ಇದ್ದವರು ಕನಿಷ್ಠ 2000 ರೂಗಳನ್ನು ಇಡಬೇಕು. ಅದರಲ್ಲಿ 50% ಹಣಕ್ಕೆ ಅಂದರೆ 1000 ರೂಗಳಿಗೆ 8 ರೂ. 50 ರಿಂದ 75 ನಷ್ಟಿದ್ದರೆ   1500 ರಿಂದ 750ರೂಗಳವರೆಗೆ 11 ರೂ ಹೆಚ್ಚುವರಿಯಾಗಿ ಶುಲ್ಕ ಭರಿಸಬೇಕಾಗುತ್ತದೆ. 500ಕ್ಕಿಂತ ಕಡಿಮೆ ಇದ್ದಲ್ಲಿ ಅದಕ್ಕೆ 14 ರೂ. ಹೆಚ್ಚುವರಿಯಾಗಿ ಶುಲ್ಕ ಭರಿಸಬೇಕಾಗುತ್ತದೆ.

ಹಳ್ಳಿ ಪ್ರದೇಶಗಳಲ್ಲಿ ತೆರೆದ ಉಳಿತಾಯ ಖಾತೆಗಳಿಗೆ ಕನಿಷ್ಠ 1000 ರೂ ಹಣವನ್ನು ಇಡಬೇಕಾಗುತ್ತದೆ. ಅದರಲ್ಲಿ 50% ಹಣಕ್ಕೆ ಅಂದರೆ 500 ರೂಗಳು ಮಾತ್ರ ಇದ್ದರೆ ಅದಕ್ಕೆ 5 ರೂ. 50 ರಿಂದ 75 ರಷ್ಟು ಇದ್ದರೆ 8 ರೂ. 75 ಕ್ಕಿಂತ ಕಡಿಮೆಯಿದ್ದರೆ 11 ರೂ. ಹಣ ಕಡಿತಗೊಳ್ಳುತ್ತದೆ.

ಬ್ಯಾಂಕುಗಳಲ್ಲಿ ವಹಿವಾಟು ನಡೆಸುವ ಗ್ರಾಹಕರಿಗೆ ಇದೊಂದು ಸಣ್ಣ ಮೊತ್ತ ಎನ್ನಿಸಬಹುದು. ಆದರೆ ದೈನಂದಿನ ವ್ಯವಹಾರಗಳಲ್ಲಿ ತೊಡಗಿಕೊಳ್ಳುವ, ಬ್ಯಾಂಕ್ ವ್ಯವಹಾರಗಳಲ್ಲಿ ಮುಳುಗಿರುವವರು ಇದೇನು ಸಾರ್ವಜನಿಕರ ಹಣವಲ್ಲವೆ ಎಂದು ಪ್ರಶ್ನಿಸುತ್ತಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link