ಚಳ್ಳಕೆರೆ
ನೃತ್ಯ ಮತ್ತು ಸಂಗೀತ ಕಲೆಗಳು ನಮ್ಮ ನಾಡಿನ ಹೆಮ್ಮೆಯ ಸಂಪ್ರದಾಯ ಬದ್ದ ಕಲೆಗಳಾಗಿದ್ದು, ಇಂತಹ ಕಲೆಗಳಿಗೆ ಪ್ರೋತ್ಸಾಹ ಅಗತ್ಯವಿದೆ. ಕಳೆದ ಹಲವಾರು ವರ್ಷಗಳಿಂದ ನೃತ್ಯ ನಿಕೇತನ ನಿರಂತರವಾಗಿ ಈ ಕಲೆಯನ್ನು ಶಾಶ್ವತವಾಗಿ ಉಳಿಯುವಂತೆ ಮಾಡಲು ಸಾವಿರಾರು ಮಕ್ಕಳಿಗೆ ಕಳೆದ ಸುಮಾರು 30 ವರ್ಷಗಳಿಂದ ನೃತ್ಯ ಮತ್ತು ಸಂಗೀತದ ಶಿಕ್ಷಣ ನೀಡುತ್ತಿದ್ದು, ನೃತ್ಯನಿಕೇತನದ ಕಾರ್ಯ ಶ್ಲಾಘನೀಯವಾದದ್ದು ಎಂದು ಮಾಜಿ ಸಚಿವರು, ಕಲಾ ಪೋಷಕರಾದ ಡಿ.ಸುಧಾಕರ ತಿಳಿಸಿದರು.
ಅವರು, ಮಂಗಳವಾರ ನಗರದ ಶ್ರೀಚಳ್ಳಕೆರೆಯಮ್ಮ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ನವರಾತ್ರಿ ಉತ್ಸವ ಪ್ರಯುಕ್ತ ನೃತ್ಯನಿಕೇತನ ಹಮ್ಮಿಕೊಂಡಿದ್ದ ನಾಟ್ಯಾರಾಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ನೂತನ ಧರ್ಮದರ್ಶಿ ಗೌಡ್ರ ರಾಮಣ್ಣ ಮಾತನಾಡಿ, ಗ್ರಾಮ ದೇವತೆಯಾದ ತಾಯಿ ಶ್ರೀಚಳ್ಳಕೆರೆಯಮ್ಮ ದೇವಸ್ಥಾನದಲ್ಲಿ ಇಂತಹ ಉತ್ತಮ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು ಸಂತಸ ತಂದಿದೆ. ಸುಮಾರು 40ಕ್ಕೂ ಹೆಚ್ಚು ಮಕ್ಕಳು ತಮ್ಮ ನಾಟ್ಯ ಕಲಾ ಸೇವೆಯನ್ನು ನೀಡಿದ್ದಾರೆ. ವಿಶೇಷವಾಗಿ ಮಹಿಷಾಸುರ ಮರ್ಧಿನಿ ಎಲ್ಲರ ಗಮನ ಸೆಳೆಯಿತು ಎಂದರು.
ಕಾರ್ಯಕ್ರಮದಲ್ಲಿ ನೃತ್ಯ ನಿಕೇತನ ಪ್ರಾಚಾರ್ಯ ಸುಧಾಮೂರ್ತಿ, ಸಂಚಾಲಕ ಯು.ಎಸ್.ವಿಷ್ಣುಮೂರ್ತಿರಾವ್,ಅರ್ಚಕ ಬಾಬಣ್ಣ, ಕಲಾವಿದ ಅಯಿತೋಳು ಚಂದ್ರಣ್ಣ, ಸಂಗೀತ ಶಿಕ್ಷಕ ಬಸವರಾಜು ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
