ನೌಕರರಿಗೆ ಆಶ್ರಯ ಸೌಲಭ್ಯ, ಸೂಕ್ತ ಕ್ರಮಕ್ಕೆ ಆಗ್ರಹ

ದಾವಣಗೆರೆ :

        ಸರ್ಕಾರಿ ನೌಕರರು ಆಶ್ರಯ ಯೋಜನೆ ಅಡಿಯಲ್ಲಿ ಮನೆ, ನಿವೇಶನ ಪಡೆದಿದ್ದು, ಅವರ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ ಅವರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಒತ್ತಾಯಿಸಿದರು.

       ನಗರದ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ 8ರಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಅರ್ಜಿ ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ, ಮಹಾನಗರ ಪಾಲಿಕೆ ನೌಕರರು ಹಾಗೂ ಇತರೆ ಇಲಾಖೆಗಳ ನೌಕರರು ಆಶ್ರಯ ಯೋಜನೆಯಡಿ ನಿವೇಶನಗಳ ಹಕ್ಕುಪತ್ರ ಪಡೆದಿದ್ದು, ಸೂಕ್ತ ತನಿಖೆ ನಡೆಸಿ ಬಡವರಿಗೆ ಸೇರಬೇಕಾಗಿರುವ ನಿವೇಶನ ಮತ್ತು ಮನೆಗಳನ್ನು ಅಕ್ರಮವಾಗಿ ಪಡೆದಿರುವ ನೌಕರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

       ನೌಕರರು ಹಕ್ಕುಪತ್ರ ಪಡೆದಿರುವ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದರೂ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಆಂಜನೇಯ ಬಡಾವಣೆಯಲ್ಲಿ ಮೂರು ಅಂತಸ್ತಿನ ಕಟ್ಟಡಕ್ಕೆ ಪರವಾನಗಿ ಪಡೆದು ಐದು ಅಂತಸ್ತಿನ ಕಟ್ಟಡ ನಿರ್ಮಿಸುವ ಮೂಲಕ ಪಾಲಿಕೆಯನ್ನು ವಂಚಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ದೂರು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಗಾದಿ, ಪಾಲಿಕೆ ಮತ್ತು ಇತರೆ ನೌಕರರು ಆಶ್ರಯ ಯೋಜನೆಯಡಿ ಸೌಲಭ್ಯ ಪಡೆದಿರುವ ಬಗೆಗಿನ ದೂರನ್ನು ಪರಿಶೀಲಿಸಲಾಗುವುದು. ನಿಮಗೆ ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆಯಡಿ ನಿಗದಿತ ಸಮಯದೊಳಗೆ ಮಾಹಿತಿ ನೀಡದಿದ್ದರೆ ಮೇಲ್ಮನವಿ ಸಲ್ಲಿಸಬಹುದು. ಹಾಗೂ ಪರವಾನಿಗಿ ಇಲ್ಲದೇ ಹೆಚ್ಚುವರಿ ಕಟ್ಟಡದ ನಿರ್ಮಾಣದ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

         ಕೊಂಡಜ್ಜಿಯ ಅಲೆಮಾರಿ ಜನಾಂಗದವರು, ತಮಗೆ ಇರಲು ಮನೆ, ನಿವೇಶನ ಏನೂ ಇಲ್ಲ. ಮಳೆಗಾಲದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಮಕ್ಕಳು ಶಾಲೆಗೆ ಹೋಗುವುದು ಕಷ್ಟವಾಗುತ್ತಿದೆ. ನಾವು ಕಳೆದ 20 ವರ್ಷಗಳಿಂದ ವಸತಿಗಾಗಿ ಮನವಿ ಸಲ್ಲಿಸುತ್ತಿದ್ದೇವೆ. ಆದೂ ಯಾರೂ ಸಹ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಕೊನೆಪಕ್ಷ ನೀವಾದರೂ ಶೀಘ್ರವಾಗಿ ಕ್ರಮ ಕೈಗೊಂಡು ಸೂಕ್ತ ವಸತಿ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು.

        ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಮೊದಲು ನಡೆಸಿದ ಜನಸಂಪರ್ಕ ಸಭೆಯೇ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಕುರಿತಾಗಿತ್ತು. ವಿಶೇಷ ವಸತಿ ಯೋಜನೆಯಡಿ ಸುಮಾರು 2 ಸಾವಿರ ಮನೆಗಳ ನಿರ್ಮಾಣ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪ್ರಕ್ರಿಯೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮಂಜೂರಾದ ತಕ್ಷಣವೇ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

         ಎಂ.ಬಿ. ರಮೇಶ್ ಎಂಬುವರು ಅರ್ಜಿಸಲ್ಲಿಸಿ, ಹರಿಹರದ ದಿ ಮೈಸೂರು ಕಿರ್ಲೋಸ್ಕರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ 18 ವರ್ಷವಾದರೂ ಇನ್ನೂ ಗ್ರಾಚುಯಿಟಿ ದೊರೆತಿಲ್ಲ್ಲ. ಆದ್ದರಿಂದ ಗ್ರಾಚ್ಯುಟಿ ನಿಧಿ ಹಾಗೂ ಬಡ್ಡಿ ಕೊಡಿಸಲು ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಯಿಸಿದ ಡಿಸಿ ಬಗಾದಿ ಗೌತಮ್, ಈ ಬಗ್ಗೆ ಕಾರ್ಮಿಕ ಅಧಿಕಾರಿಗಳಿಗೆ ತಿಳಿಸಿ ಗ್ರಾಚುಯಿಟಿ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು

        ಇಂದಿರಾಗಾಂಧಿ ವೃದ್ದಾಪ್ಯ ವೇತನವು ಜುಲೈನಲ್ಲೇ ಮಂಜೂರಾದರೂ ಈವರೆಗೆ ತಮ್ಮ ಖಾತೆಗೆ ವೇತನ ಪಾವತಿಯಾಗಿಲ್ಲವೆಂದು ವೃದ್ಧರೋರ್ವರು ಅರ್ಜಿ ಸಲ್ಲಿಸಿದರು. ಆಗಸ್ಟ್ ಮಾಹೆಯಿಂದಲೇ ನಿಮ್ಮ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿಗೆ ವೇತನ ಪಾವತಿಯಾಗಿದೆ ಎಂದು ದಾಖಲೆ ತೋರಿಸುತ್ತದೆ. ತಾಂತ್ರಿಕ ತೊಂದರೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗೆ ಇದೇ ವೇಳೆ ಸೂಚಿಸಿದರು.

        ಯಾಸ್ಮಿನ್ ತಾಜ್ ಎಂಬುವವರಿಗೆ ಶಾದಿ ಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸಿ 1 ವರ್ಷವಾದರೂ ಯೋಜನೆಯ ಸೌಲಭ್ಯ ಲಭಿಸಿಲ್ಲ. ಈ ಬಗ್ಗೆ ಶೀಘ್ರ ಕ್ರಮಕ್ಕಾಗಿ ಕೋರಿ ಸಲ್ಲಿಸಿದ ಮನವಿಗೆ ಜಿಲ್ಲಾಧಿಕಾರಿಗಳು, ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಗಳಿಗೆ ಈ ವಿಳಂಬಕ್ಕೆ ಕಾರಣ ಕೇಳಿದರು. ಈ ವೇಳೆ ಅಧಿಕಾರಿ ಮಾತನಾಡಿ, ಆನ್‍ಲೈನ್‍ನಲ್ಲಿ ಬಂದಿರುವ ಅರ್ಜಿಗಳನ್ನು ಜೇಷ್ಟತೆಗನುಗುಣವಾಗಿ ವಿಲೇ ಮಾಡಲಾಗುತ್ತಿದೆ. ಅನುದಾನ ಬಂದಿದ್ದು ತಡವಾದ್ದರಿಂದ ವಿಳಂಬವಾಗುತ್ತಿದೆ ಎಂದರು. ಆಗ ಜಿಲ್ಲಾಧಿಕಾರಿ ಈ ಅರ್ಜಿಗಳನ್ನು ಪರಿಶೀಲಸಿ ಶೀಘ್ರವಾಗಿ ಸೌಲಭ್ಯ ನೀಡುವಂತೆ ತಿಳಿಸಿದರು.

           ನಾಗರೀಕ ಚಿದಾನಂದ ಎಂಬುವವರು ಅರ್ಜಿಸಲ್ಲಿಸಿ, ಇಲ್ಲಿನ ಶಂಕರ ವಿಹಾರ ಬಡಾವಣೆಯಲ್ಲಿ ರಸ್ತೆ, ಚರಂಡಿ ಮತ್ತು ವಿದ್ಯುತ್ ದೀಪ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದರು.

          ರೈತ ಹೆಚ್.ಆರ್ ಶಂಕ್ರಪ್ಪ ಅರ್ಜಿಸಲ್ಲಿಸಿ, ಆನಗೋಡು ಹೋಬಳಿಯ ಹುಣಸೆಕಟ್ಟೆ ಗ್ರಾಮದಲ್ಲಿ ರಿ ಸರ್ವೇಯಲ್ಲಿ ತಮ್ಮ ಸರ್ವೇ ನಂಬರ್ ಬದಲಾಗಿದ್ದು, ಎಲ್ಲಾ ದಾಖಲೆಗಳಲ್ಲಿ ಪಹಣಿ ಮುಟೇಷನ್‍ನಲ್ಲಿ ರಿ ಸರ್ವೇಯಲ್ಲಿ ಬದಲಾದ ಸಂಖ್ಯೆ ಬರುವಂತೆ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು. 

         ಸಭೆಯಲ್ಲಿ ಉಪ ವಿಭಾಗಾಧಿಕಾರಿ ಬಿ.ಟಿ ಕುಮಾರಸ್ವಾಮಿ, ದಾವಣಗೆರೆ ತಹಶೀಲ್ದಾರ್ ಸಂತೋಷ್ ಕುಮಾರ್, ಮಹಾನಗರಪಾಲಿಕೆ ಉಪ ಆಯುಕ್ತ ರವೀಂದ್ರ ಬಿ ಮಲ್ಲಾಪುರ, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಡಿಹೆಚ್‍ಓ ಡಾ.ತ್ರಿಪುಲಾಂಬ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link