ತುಮಕೂರು
ಡಾ. ಶಿವಕುಮಾರಸ್ವಾಮೀಜಿಗಳು ಐಕಾನ್. ಇವರು ಸ್ವಾಮೀಜಿಗಳಿಗೆಲ್ಲಾ ಆದರ್ಶ. ಸ್ವಾಮೀಜಿಗಳು ಹೇಗಿರಬೇಕು ಎಂಬುದಕ್ಕೆ ಸಿದ್ಧಗಂಗಾಶ್ರೀಗಳು ಮಾದರಿ. ಎಲ್ಲಾ ಸ್ವಾಮೀಜಿಗಳಿಗೂ ಅವರಂತಾಗುವ ಕನಸು ಇದ್ದೇಇದೆ ಎಂದು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರ ವೀರಶೈವ ಸಮಾಜ ಸೇವಾ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ನಗರದ ಚಿಕ್ಕಪೇಟೆಯ ನವೀಕರಣಗೊಂಡ ಶ್ರೀ ವೀರಭದ್ರಸ್ವಾಮಿ ಕಲ್ಯಾಣ ಮಂಟಪದ ಉದ್ಘಾಟನೆ ಹಾಗೂ ಡಾ. ಶಿವಕುಮಾರಸ್ವಾಮಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಶಿಥಿಲಗೊಂಡಿದ್ದ ವೀರಭದ್ರಸ್ವಾಮಿ ಕಲ್ಯಾಣ ಮಂಟಪವನ್ನು ನವೀಕರಣಗೊಳಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಸಮಾಜದ ಬಡ ಜನರ ಮದುವೆಯಂತಹ ಸಮಾರಂಭಗಳಿಗೆ ಕೈಗೆಟಕುವ ಬೆಲೆಯಲ್ಲಿ ದೊರೆಯುವಂತೆ ಅನುಕೂಲ ಮಾಡಿಕೊಟ್ಟಿರುವ ಸಮಾಜ ಸೇವಾ ಸಮಿತಿ ಕೆಲಸ ಪ್ರಶಂಸನೀಯ ಎಂದರು.
ಇಂದು ತಮ್ಮ 58ನೇ ಜನ್ಮದಿನ. ಹಿರೇಮಠಕ್ಕೆ ಬೆಳಗಿನಿಂದಲೂ ಭಕ್ತರು ಆಗಮಿಸುತ್ತಲೇ ಇದ್ದಾರೆ. ಮಠಕ್ಕೆ ಆಸ್ತಿ ಇಲ್ಲ, ಭಕ್ತರೇ ಆಸ್ತಿ. ಜಾತ್ಯಾತೀತವಾಗಿ ಎಲ್ಲರೂ ತಮ್ಮನ್ನು ಪ್ರೀತಿಸುತ್ತಿದ್ದಾರೆ. 1986ರಲ್ಲಿ ಇದೇ ವೀರಭದ್ರಸ್ವಾಮಿ ದೇವಸ್ಥಾನದಿಂದ ಹೊರಟು ಹಿರೇಮಠದಲ್ಲಿ ತಮ್ಮ ಪಟ್ಟಾಧಿಕಾರವಾಯಿತು. ಅಂದಿನಿಂದ ಇಂದಿನವರೆಗೆ ಮಠದ ಬಗ್ಗೆ ಬೇಸರವಾಗಲಿ, ತಮ್ಮಿಂದ ಯಾವುದೇ ಲೋಪ ಆದಂತಹ ಭಾವನೆಯಾಗಲಿ ತಮ್ಮನ್ನು ಕಾಡಿಲ್ಲ. ಎಂದರು.
ಈ 58 ವರ್ಷ ವಯಸ್ಸಿನಲ್ಲೂ ತಾವು ಟೆನ್ಷನ್‍ಲೆಸ್ ಸ್ವಾಮೀಜಿ, ಶುಗರ್ ಲೆಸ್, ಬಿ ಪಿ ಲೆಸ್ ಸ್ವಾಮೀಜಿ. ಜ್ಞಾನಪರ ಒಲವು, ಓದು ಬರಹ ಮಾಡುತ್ತಿರುವುದರಿಂದ ಹಾಗೂ ಯಶಸ್ಸು, ಮನಸ್ಸು ಸಾಥ್ ನೀಡಿರುವುದರಿಂದ ವಯಸ್ಸು ತೆಪ್ಪಗೆ ಕುಳಿತಿದೆ. ಅದೇ ಉತ್ಸಾಹ, ಲವಲವಿಕೆ ಈಗಲೂ ಇದೆ ಎಂದು ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಚಿಕ್ಕತೊಟ್ಕು ಕೆರೆ ಅಟವಿಸ್ವಾಮಿ ಜಂಗಮ ಮಠದ ಅಟವಿ ಶಿವಲಿಂಗ ಸ್ವಾಮೀಜಿ ಮಾತನಾಡಿ, ಮಾನವನನ್ನು ದೇವರನ್ನಾಗಿ ಮಾಡುವುದು ವೀರಶೈವ ತತ್ವ. ಮನುಷ್ಯ ತಾನು ಮಾಡುವ ಉತ್ತಮ ಕೆಲಸಗಳಿಂದ ದೇವರಾಗಬಹುದು ಎಂದು ವೀರಶೈವರ ಜೀವನ ತತ್ವ ಸಾರಿ ಹೇಳಿದೆ ಎಂದು ಹೇಳಿದರು.
ಸಂಘಟನೆಯಲ್ಲಿ ಶಕ್ತಿ ಇದೆ ಎಲ್ಲರೂ ಕೂಡಿದರೆ ಒಳ್ಳೆಯದನ್ನು ಮಾಡಬಹುದು ಎಂಬುದನ್ನು ವೀರಶೈವ ಸಮಾಜ ಸೇವಾ ಸಮಿತಿ ಮಾಡಿ ತೋರಿಸಿದೆ. ಈ ಸಮಿತಿ ಹಲವಾರು ಸಮಾಜ ಸೇವಾ ಕಾರ್ಯ ಮಾಡಿ ಜನಮನ್ನಣೆ ಗಳಿಸಿದೆ. ಉತ್ತಮ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು, ವೀರಶೈವ ಸಮಾಜದ ಆಸ್ತಿಯನ್ನು ಉಳಿಸುವ, ಬೆಳೆಸುವ ಶ್ಲಾಘನೀಯ ಕಾರ್ಯವನ್ನು ಸಮಾಜ ಮಾಡುತ್ತಿದೆ ಎಂದರು. ಡಾ. ಶಿವಕುಮಾರಸ್ವಾಮಿಗಳು ತಮ್ಮ ಸೇವೆ, ಕಾಯಕನಿಷ್ಠೆಯಿಂದ ದೇವರಾಗಿದ್ದಾರೆ ಎಂದರು.
ಉರವಕೊಂಡ ಉರಗಾದ್ರಿ ಗವಿ ಮಠದ ಚನ್ನಬಸವ ರಾಜೇಂದ್ರ ಸ್ವಾಮೀಜಿ ಆಶೀವಚನೆ ನೀಡಿದರು.ಸಿದ್ಧರಬೆಟ್ಟದ ರಂಭಾಪುರಿ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕ್ರಿಯಾಶೀಲರು ಸಮಾಜಕ್ಕೆ ಒಳ್ಳೆಯದನ್ನೇ ಮಾಡುತ್ತಾರೆ. ವೀರಶೈವ ಸಮಾಜದ ಅಧ್ಯಕ್ಷ ಟಿ ಬಿ ಶೇಖರ್ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ತಾಳ್ಮೆ, ಸಹನೆಯಿಂದ ಸಮಾಜಕ್ಕೆ ನೆರವಾಗುವಂತಹ ಕೆಲಸ ಮಾಡಿದ್ದಾರೆ ಎಂದರು.
ಒಳ್ಳೆಯ ನಾಯಕ ಎನಿಸಿಕೊಳ್ಳುವವರು ಒಳ್ಳೆಯ ಗುಣಗಳನ್ನ ಬೆಳೆಸಿಕೊಂಡು ಎಲ್ಲರೊಡಗೂಡಿ ನಿಸ್ವಾರ್ಥತೆಯಿಂದ ಕೆಲಸ ಮಾಡಬೇಕಾಗುತ್ತದೆ, ಆಮೂಲಕ ಆತ ಯಶಸ್ವಿ ನಾಯಕನಾಗುತ್ತಾನೆ, ಇಂತಹ ಗುಣಗಳೊಂದಿಗೆ ಟಿ ಬಿ ಶೇಖರ್ ನಾಯಕರಾಗಿದ್ದಾರೆ ಎಂದು ಹೇಳಿದರು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಬೆಳಿಗ್ಗೆ ಆಗಮಿಸಿ ನವೀಕರಣಗೊಂಡ ವೀರಭದ್ರ ಸ್ವಾಮಿ ಕಲ್ಯಾಣ ಮಂಟಪ ಉದ್ಘಾಟಿಸಿ ಶುಭಕೋರಿದರು.ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿ ನುಡಿದ ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ ಬಿ ಶೇಖರ್, ಶೀಥಿಲಗೊಂಡು ಅನಾನುಕೂಲ ಸ್ಥಿತಿಯಲ್ಲಿದ್ದ ಕಲ್ಯಾಣ ಮಂಟಪವನ್ನು ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ, ವೀರಶೈವ ಸಮಾಜದವರಿಗೆ ಒಂದು ಮದುವೆಗೆ 25 ಸಾವಿರ ರೂ, ಇತರರಿಗೆ 40 ಸಾವಿರ ರೂ ಬಾಡಿಗೆಗೆ ನೀಡಲಾಗುತ್ತದೆ ಎಂದು ಹೇಳಿದರು.
ಸಭಾಂಗಣ, ಸುಸಜ್ಜಿತ ಅಡುಗೆ ಮನೆ, ಡೈನಿಂಗ್ ಹಾಲ್ ನಿಮಾಣ ಮಾಡಿ ಅನುಕೂಲ ಮಾಡಲಾಗಿದೆ, ಸಮಾಜ ಬಾಂಧವರು ಇದರ ಪ್ರಯೋಜನ ಪಡೆಯುವಂತೆ ಕೋರಿದರು.ಸಾಹಿತಿಗಳಾದ ಎಂ ವಿ ನಾಗಣ್ಣ ಹಾಗೂ ಡಾ. ಎಸ್ ಗುರುಪ್ರಕಾಶ್ ಅವರು ಉಪನ್ಯಾಸ ನೀಡಿದರು. ವೀರಶೈವ ಸಮಾಜದ ಮಾಜಿ ಅಧ್ಯಕ್ಷರಾದ ಸಿ ವಿ ಮಹದೇವಯ್ಯ, ಸಿ ವೀರಭದ್ರಯ್ಯ, ಕೆ ವೈ ಸಿದ್ಧಲಿಂಗಮೂರ್ತಿ, ವೀರಶೈವ ಕೋ-ಆಪರೇಟೀವ್ ಬ್ಯಾಂಕ್ ಅಧ್ಯಕ್ಷ ಟಿ ಎಂ ಯೋಗೀಶ್, ವಿವಿಧ ಸಂಸ್ಥೆಗಳ ಮುಖಂಡರಾದ ಎಸ್ ಎಂ ರಾಜು, ಟಿ ಸಿ ಓಹಿಲೇಶ್ವರ್, ಟಿ ಎನ್ ಮಹದೇವಪ್ಪ, ಬಿ ಎಸ್ ನಾಗರತ್ನ, ತೀರ್ಥ ಓಹಿಲೇಶ್ವರ್, ನಗರಪಾಲಿಕೆ ಸದಸ್ಯರಾದ ಮಹೇಶ್, ಮಂಜುಳಾ ಆದರ್ಶ್, ದೀಪ ಮಹೇಶ್, ನಿರ್ಮಲಾ ಶಿವಕುಮಾರ್ ಮೊದಲಾದವರು ಭಾಗವಹಿಸಿದ್ದರು.
ವೀರಶೈವ ಸಮಾಜದ ಉಪಾಧ್ಯಕ್ಷ ಎಸ್ ಜಿ ಚಂದ್ರಮೌಳಿ, ಗೌರವ ಕಾರ್ಯದರ್ಶಿ ರುದ್ರಕುಮಾರ್ ಆರಾಧ್ಯ, ಸಹಕಾರ್ಯದರ್ಶಿ ಅತ್ತಿ ರೇಣುಕಾನಂದ, ಕೋಶಾಧಿಕಾರಿ ಶಿವಲಿಂಗಮ್ಮ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು.