ನೆಮ್ಮದಿಯಿಂದ ಬಾಳಲು ಸೈನಿಕರ ತ್ಯಾಗವೇ ಕಾರಣ

ದಾವಣಗೆರೆ:

      ಇಂದು ದೇಶದ ಒಳಗೆ ನಾವು ಶಾಂತಿ-ನೆಮ್ಮದಿಯಿಂದ ಬದುಕುತ್ತಿದ್ದೇವೆಂದರೆ, ಅದಕ್ಕೆ ಸೈನಿಕರ ತ್ಯಾಗ-ಬಲಿದಾನದ ಸೇವೆಯೇ ಕಾರಣವಾಗಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದರು.

    ನಗರದ ಶಿವಯೋಗಾಶ್ರಮದಲ್ಲಿ ಭಾನುವಾರದ ಜಿಲ್ಲಾ ಮಾಜಿ ಸೈನಿಕ ವಿವಿದೋದ್ದೇಶ ಸಂಘದ ಬೆಳ್ಳಿ ಹಬ್ಬ ಮಹೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ಇಂದು ಪ್ರತಿಯೊಬ್ಬರೂ ಶಾಂತಿ ನೆಮ್ಮದಿಯಿಂದ ಬದುಕುತ್ತಿದ್ದೇವೆಂದರೆ, ಅದು ಸೈನಿಕರಿಂದ ಸೇವೆಯಿಂದ ಎಂದು ಹೇಳಿದರು.

       ತಮ್ಮ ಸರ್ವಸ್ವವನ್ನೂ ಬಿಟ್ಟು, ತ್ಯಾಗ ಮನೋಭಾವನೆಯೊಂದಿಗೆ ದೇಶದ ಗಡಿ ಕಾಯುವ ಸೈನಿಕರೇ ನಿಜವಾದ ಹಿರೋಗಳಾಗಿದ್ದು, ಅವರ ಆದರ್ಶಗಳನ್ನು ನಾವು ಪಾಲಿಸಿ, ದೇಶ ರಕ್ಷಣೆಗೆ ಮುಂದಾಗಬೇಕಾದ ಅವಶ್ಯಕತೆ ಇದ್ದು, ಸೈನಿಕರ ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸಿವ ಮೂಲಕ ಗೌರವಯುತವಾಗಿ ನಡೆಸಿಕೊಳ್ಳಬೇಕೆಂದು ಒತ್ತಾಯಿಸಿದರು.

       ಇಂದು ಯುವಜನತೆ ಸಿನಿಮಾದಲ್ಲಿ ನಟಿಸುವ ನಟರನ್ನು ಹೀರೋಗಳೆಂದು ಭಾವಿಸುತ್ತಾರೆ. ಅವರೆಲ್ಲಾ ಕೇವಲ ಮೂರು ತಾಸಿನ ಪರದೆಯ ಮೇಲೆ ಬರುವ ಹೀರೋಗಳಾಗಿದ್ದಾರೆ. ಆದರೆ, ದೇಶದ ರಕ್ಷಣೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಸೇವೆ ಸಲ್ಲಿಸುತ್ತಿರುವವರೇ ನಿಜವಾದ ಹೀರೋಗಳು ಎಂದು ಬಣ್ಣಿಸಿದರು.

       ದೇಶದಲ್ಲಿ ಸೈನಿಕರ ಜೊತೆಗೆ ರೈತರ ಹಾಗೂ ಶಿಕ್ಷಕರ ಸೇವೆಯೂ ಸ್ಮರಣೀಯವಾಗಿದೆ. ಸೈನಿಕರು, ರೈತರು, ಶಿಕ್ಷಕರು ದೇಶದ ರಕ್ಷಕರಾಗಿದ್ದಾರೆ. ಅನ್ನವಿಲ್ಲದೆ, ಶಿಕ್ಷಣವಿಲ್ಲದೆ, ದೇಶದ ರಕ್ಷಣೆ ಇಲ್ಲದೆ ನೆಮ್ಮದಿಯಿಂದ ಬದುಕುವುದು ಅಸಾಧ್ಯ. ಈ ಮೂವರನ್ನು ನಾವು ನಮ್ಮ ಜೀವಮಾನದ್ದಕ್ಕೂ ಗೌರವಿಸಲೇ ಬೇಕು ಎಂದರು.

        ಮನುಷ್ಯನ ಶಾಂತಿ ನೆಮ್ಮದಿಗೆ ಸತ್ಸಂಗವೂ ಅಗತ್ಯವಾಗಿವೆ. ಸತ್ಸಂಗದಿಂದ ಒಳ್ಳೆಯ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿನಿತ್ಯ ತೋರಿಸಿದ್ದೇ ತೋರಿಸುವ, ಹೇಳಿದ್ದೇ ಹೇಳುವ, ನೋಡಿದ್ದೇ ನೋಡುವ ಟಿ.ವಿ.ಯಲ್ಲಿನ ಧಾರವಾಹಿಗಳಿಂದ ಕೆಲ ಸಮಯ ದೂರವಿದ್ದು, ಸತ್ಸಂಗದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿ ಪಡೆದುಕೊಳ್ಳಬೇಕೆಂದರು.

        ಕಳೆದ 109 ವರ್ಷಗಳಿಂದ ವಿರಕ್ತಮಠದಲ್ಲಿ ಶ್ರಾವಣ ಮಾಸದ ಪ್ರವಚನ ನಡೆದುಕೊಂಡು ಬರುತ್ತಿದೆ. ಈ ವರ್ಷವೂ ಕೂಡಾ ಆ.2ರಿಂದ 31ರವರೆಗೆ ಪ್ರತಿದಿನ ಸಂಜೆ ಶರಣರ ವಚನಗಳ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಶ್ರೀಗಳು ತಿಳಿಸಿದರು.

       ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಶೇಖರಪ್ಪ, ಈಶಪ್ರಭು ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸತ್ಯಪ್ರಕಾಶ್ ವಹಿಸಿದ್ದರು. ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್‍ವಸತಿ ಇಲಾಖೆಯ ಉಪ ನಿರ್ದೇಶಕ ಚಂದ್ರಪ್ಪ, ಸಂಘದ ಉಪಾಧ್ಯಕ್ಷ ಮನೋಹರ ಮಹೆಂದ್ರಪ್ಪ, ಕಾರ್ಯದರ್ಶಿ ಶಶಿಕಾಂತ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.ಅಭಿರಾಮ್ ಪ್ರಾರ್ಥಿಸಿದರು ಪ್ರತಿಕ್ಷ, ಅಂಜಲಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ಉಚಿತ ರಕ್ತ ತಪಾಸಣೆ ಶಿಬಿರ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap