ಚಿತ್ರದುರ್ಗ
ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೆ ಬ್ಲಾಕ್‍ಮೇಲ್ ಮಾಡಿದವರಿಗೆ ಮಣೆ ಹಾಕಲಾಗಿದೆ. ಈಗಲೂ ಕಾಲಮಿಂಚಿಲ್ಲ ತಕ್ಷಣ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಜಿಲ್ಲಾ ನಾಯಕ ಸಮಾಜ ಬಿಜೆಪಿ ಪಕ್ಷದ ಮುಖಂಡರಲ್ಲಿ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಲೋಕಸಭೆ ಚುನಾವಣೆಯಲ್ಲಿ ಇಡೀ ರಾಜ್ಯಾದ್ಯಂತೆ ಪ್ರವಾಸ ಮಾಡಿ ಪ್ರಚಾರ ಮಾಡಿ ಹೆಚ್ಚಿನ ಸೀಟುಗಳನ್ನು ಬಿಜೆಪಿ ಪಡೆಯಲು ಶ್ರೀರಾಮುಲು ಪ್ರಮುಖ ಪಾತ್ರ ವಹಿಸಿದ್ದರು. 80 ರಿಂದ 100 ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಶ್ರೀರಾಮುಲು ಅವರಿಗೆ ಸಣ್ಣ ಖಾತೆ ನೀಡಿ ಯಡಿಯೂರಪ್ಪ ವಂಚನೆ ಮಾಡಿದ್ದಾರೆ. ಯಡಿಯೂರಪ್ಪ ಮಾಡಿರುವ ವಂಚನೆಯನ್ನು ಸಹಿಸಲು ಸಾಧ್ಯವಿಲ್ಲ. ಆಗಿರುವ ತಪ್ಪು ಸರಿಪಡಿಸದಿದ್ದರೆ ಬಿಜೆಪಿಯಿಂದ ನಾಯಕ ಶಾಸಕರು ಹೊರಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಚುನಾವಣೆಯಲ್ಲಿ ಸೋತ ಮಾಜಿ ಶಾಸಕರಿಗೆ ಮಂತ್ರಿ ಸ್ಥಾನ ಜೊತೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಅದು ಯಡಿಯೂರಪ್ಪ ಅವರ ಜಾತಿಗೆ ಸೇರಿದವರಾದ ಲಕ್ಷ್ಮಣ್ ಸವದಿ ಅವರಿಗೆ ಉತ್ತಮ ಖಾತೆ ನೀಡಲಾಗಿದೆ. ಶ್ರೀರಾಮುಲು ಅವರಿಗೆ ಆರೋಗ್ಯ ಸಚಿವರನ್ನಾಗಿ ಮಾಡಲಾಗಿದೆ. ಕೊಟ್ಟರೆ ಉಪಮುಖ್ಯಮಂತ್ರಿ ಸ್ಥಾನ ನೀಡಲಿ ಇಲ್ಲದಿದ್ದರೆ ಶ್ರೀರಾಮುಲು ಬಿಜೆಪಿಯಲ್ಲಿ ಮುಂದುವರೆಯಬೇಕೆ ಅಥವಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆ ಎಂಬ ಬಗ್ಗೆ ಸಮಾಲೋಚನೆ ನಡೆಸಲು ಶೀಘ್ರದಲ್ಲಿ ರಾಜನಹಳ್ಳಿ ವಾಲ್ಮೀಕಿ ಸ್ವಾಮೀಜಿ ಸಮ್ಮುಖದಲ್ಲಿ ಸಭೆ ಕರೆಯಲಾಗುವುದು. ಆ ಸಭೆಯಲ್ಲಿ ಸ್ವಾಮೀಜಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿರುತ್ತವೆ ಎಂದರು.
ವಿಧಾನಸಭೆ ಚುನಾವಣೆ ವೇಳೆಯಲ್ಲಿ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಭರವಸೆ ನೀಡಿದ ಮೇರೆಗೆ ನಾಯಕ ಜನಾಂಗದವರು ಬಿಜೆಪಿಗೆ ಮತ ನೀಡಿದರು. ಈಗ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಕಿತ್ತೊಗಿರುವ ಖಾತೆ ನೀಡಿದ್ದಾರೆ. ಇದರಿಂದ ನಾಯಕ ಜನಾಂಗಕ್ಕೆ ಭಾರಿ ಅನ್ಯಾಯವಾಗಿದೆ. ತತ್‍ಕ್ಷಣ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ತಿಪ್ಪೇಸ್ವಾಮಿ, ರಾಜೇಶ್, ಕಾಟೀಹಳ್ಳಿ ಕರಿಯಜ್ಜ, ಅಂಜನಪ್ಪ , ಬಿ.ಟಿ.ಸೋಮೇಂದ್ರ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ