ನಾಯಕ ಸಮಾಜದ ಮುಖಂಡರ ಪ್ರತಿಭಟನೆ

ಚಿತ್ರದುರ್ಗ:

    ಕರ್ನಾಟಕ ರಾಜ್ಯದಲ್ಲಿ ನಿಗಧಿಪಡಿಸಿರುವ ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ ಶೇ.7.5 ಕ್ಕೆ ಹೆಚ್ಚಿಸುವಂತೆ ಚಿತ್ರದುರ್ಗ ನಾಯಕ ಸಮಾಜದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.

     ಮದಕರಿನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನಾಯಕ ಸಮಾಜದವರು ಮೀಸಲಾತಿ ಹೆಚ್ಚಳದಲ್ಲಿ ಆಗಿರುವ ಅನ್ಯಾಯವನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
2011 ರ ಜನಗಣತಿ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ ಪರಿಶಿಷ್ಟ ವರ್ಗದವರ ಜನಸಂಖ್ಯೆ 42,48,987 ರಷ್ಟಿದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇ.6.95 ರಷ್ಟಿದೆ.

      ಈಗಾಗಲೆ ಜನಗಣತಿ ಪಡೆದು ಎಂಟು ವರ್ಷಗಳು ಕಳೆದಿರುವುದರಿಂದ ಜನಸಂಖ್ಯೆ ಶೇ.ಏಳಕ್ಕೂ ಅಧಿಕವಾಗಿದೆ. ರಾಜ್ಯದಲ್ಲಿ ವಿವಿಧ ಹುದ್ದೆಗಳಿಗೆ ನಡೆಯುವ ನೇಮಕಾತಿ ಬಡ್ತಿ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳ ವಲಯದಲ್ಲಿ ಕೇವಲ ಶೇ.3 ರಷ್ಟು ಮೀಸಲಾತಿಯನ್ನು ನಿಗಧಿಪಡಿಸಲಾಗಿದೆ. ಇದರಿಂದ ಅನೇಕ ದಶಕಗಳಿಂದಲೂ ಪರಿಶಿಷ್ಟ ವರ್ಗದವರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

      ಕೆಲವು ಮುಂದುವರೆದ ವರ್ಗಗಳು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿರುವ ಹೆಸರುಗಳನ್ನು ಬಳಸಿಕೊಂಡು ಜಾತಿ ಪ್ರಮಾಣ ಪತ್ರ ನೀಡುವ ಪ್ರಾಧಿಕಾರವಾದ ತಹಶೀಲ್ದಾರ್‍ಗಳಿಂದ ಜಾತಿ ಪ್ರಮಾಣ ಪತ್ರವನ್ನು ಅಸಾಂವಿಧಾನಿಕವಾಗಿ ಪಡೆದುಕೊಂಡು ಪರಿಶಿಷ್ಟ ವರ್ಗದವರಿಗೆ ಮೀಸಲಿರುವ ಸೌಲಭ್ಯಗಳನ್ನು ಕಬಳಿಸುತ್ತಿರುವುದು ನಾಯಕ ಸಮುದಾಯದ ಗಮನಕ್ಕೆ ಬಂದಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕೂಡಲೆ ಗಮನ ಹರಿಸಿ ಅರ್ಹರಲ್ಲದವರಿಗೆ ಪರಿಶಿಷ್ಟ ವರ್ಗದ ಜಾತಿ ಪ್ರಮಾಣ ಪತ್ರ ನೀಡುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

       ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಕರ್ನಾಟಕ ರಾಜ್ಯದಲ್ಲಿ ಒಟ್ಟು 50 ಬುಡಕಟ್ಟು ಗುಂಪುಗಳನ್ನು ಪರಿಶಿಷ್ಟ ವರ್ಗವೆಂದು ಅಧಿಸೂಚಿಸಲಾಗಿದೆ. ಪ್ರತಿ ಬುಡಕಟ್ಟು ತನ್ನದೆ ಆದ ಸಂಸ್ಕತಿ, ಸಂಪ್ರದಾಯ, ಆಚರಣೆಗಳನ್ನು ರೂಢಿಸಿಕೊಂಡಿದ್ದು, ಬದಲಾವಣೆ ಸಂದಿಗ್ದತೆಯಲ್ಲಿದೆ. ಇದರ ಮೂಲ ಸಮಸ್ಯೆಗಳಾದ ವಸತಿ, ಕೃಷಿ, ಭೂಮಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಪೌಷ್ಟಿಕತೆ ಇತ್ಯಾದಿಗಳ ಬಗ್ಗೆ ಗಮನ ಹರಿಸಿ ಮುಖ್ಯವಾಹಿನಿಗೆ ತರಲು ಪ್ರಾಮುಖ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಪರಿಶಿಷ್ಟ ವರ್ಗದವರ ಅನೇಕ ವರ್ಷಗಳ ಬೇಡಿಕೆಯಾದ ಪ್ರತ್ಯೇಕ ಪರಿಶಿಷ್ಟ ವರ್ಗ ಸಚಿವಾಲಯವನ್ನು ಸ್ಥಾಪಿಸಬೇಕು ಎಂದು ಪ್ರತಿಭಟನಾನಿರತ ನಾಯಕ ಸಮಾಜದವರು ಸರ್ಕಾರವನ್ನು ಆಗ್ರಹಿಸಿದರು.

      ಚಿತ್ರದುರ್ಗ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ನಾಯಕ ಸಮಾಜ ನೌಕರರ ಜಿಲ್ಲಾಧ್ಯಕ್ಷ ಸದಾಶಿವಪ್ಪ, ಸರ್ವೆಬೋರಣ್ಣ, ನಗರಸಭೆ ಸದಸ್ಯ ದೀಪು, ಯುವ ವಕೀಲ ಅಶೋಕ್‍ಬೆಳಗಟ್ಟ, ಹೆಚ್.ಅಂಜಿನಪ್ಪ, ಸೋಮೇಂದ್ರ, ಕಾಟಿಹಳ್ಳಿ ಕರಿಯಪ್ಪ, ರವಿ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap