ಬೆಂಗಳೂರು
ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು ಇಂದಿನಿಂದ ರಾಜ್ಯದ ಎಲ್ಲಾ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ವಿದೇಶಗಳಿಂದ ಬರುವವರನ್ನು ತಪಾಸಣೆಗೆ ಒಳಪಡಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಬುಧವಾರ ಕೊರೋನಾ ವೈರಸ್ ಬಗ್ಗೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಪ್ರಸ್ತಾಪ ಮಾಡಿ, ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಗಮನಿಸಿದ್ದೇವೆ. ನಮ್ಮ ದೇಶಕ್ಕೂ ಇದು ಕಾಲಿಟ್ಟಿದ್ದು ಬೆಂಗಳೂರಿಗೆ ಬಂದು ಹೋದ ಹೈದರಾಬಾದ್ ಇಂಜಿನಿಯರ್ ಒಬ್ಬರಿಗೆ ಕೊರೋನಾ ಶಂಕೆ ಪ್ರಕರಣ ನಮ್ಮನ್ನೆಲ್ಲಾ ಆತಂಕಕ್ಕೆ ಸಿಲುಕಿಸಿದೆ. ಈ ಮಹಾಮಾರಿ ತಡೆಗೆ ಯಾವ ರೀತಿಯಲ್ಲಿ ಸರ್ಕಾರ ಸಜ್ಜಾಗಿದೆ ಎಂದು ಪ್ರಶ್ನಿಸಿದರು.
ನಂತರ ಜೆಡಿಎಸ್ ಸದಸ್ಯ ಶರವಣ ಮಾತನಾಡಿ, ನಾನು ನಿನ್ನೆ ಸರ್ಕಾರದ ಗಮನ ಸೆಳೆಯಲು ಮಾಸ್ಕ್ ಹಾಕಿಕೊಂಡು ಬಂದಿದ್ದೆ. ಅದನ್ನು ನೋಡಿ ಅನೇಕರು ನಿಮಗೇನಾದರೂ ಕೊರೋನಾ ಬಂದಿದೆಯಾ ಎಂದು ಹಾಸ್ಯ ಮಾಡಿದರು. ನಿನ್ನೆ ನನಗೆ ಈ ವಿಚಾರ ಮಾತನಾಡಲು ಅವಕಾಶ ಸಿಗಲಿಲ್ಲ. ಕೆಲವು ಸಾಮಾಜಿಕ ಜಾಲತಾಣಗಳಲ್ಲೂ ಕೊರೋನಾ ಬಗ್ಗೆ ನೆಗೆಟಿವ್ ಅಂಶಗಳು ಪ್ರಚಾರ ಆಗುತ್ತಿವೆ. ಇಂತಹವುಗಳನ್ನು ನಿಯಂತ್ರಿಸುವ ಕೆಲಸ ಆಗಬೇಕಿದೆ ಎಂದರು.
ರಾಜ್ಯದ ಜನರಿಗೆ ಕೊರೊನಾ ಬಗ್ಗೆ ಇರುವ ಭಯ ನೀಗಿಸಬೇಕಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣ ಬಳಸಿಕೊಳ್ಳಬೇಕು. ಜೊತೆಗೆ ಬಸ್ ಆಟೋಗಳ ಹಿಂದೆ ಜಾಹೀರಾತು ಹಾಕಬೇಕು. ಸಚಿವರು ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿ ಪರಾಮರ್ಶೆ ಮಾಡಬೇಕು ಎಂದು ಹೇಳಿದರು.
ಈ ವೇಳೆ ಮತ್ತೋರ್ವ ಸದಸ್ಯ ಧರ್ಮಸೇನಾ ಹೆಸರು ಹೇಳುವ ಬದಲು ಸದನದಲ್ಲಿ ಬಾಯಿ ತಪ್ಪಿ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಹೆಸರು ಬಳಕೆ ಮಾಡಿ ನಂತರ ಸರಿಪಡಿಸಿಕೊಂಡರು.
ಕೈ ಕುಲುಕಲು ಭಯವಂತೆ ಬಿ.ಸಿ ಪಾಟೀಲ್ ಗೆ:
ಕೃಷಿ ಸಚಿವ ಬಿ.ಸಿ ಪಾಟೀಲ್ ಮಾತನಾಡಿ, ನಾನು ಮಂತ್ರಿ ಆದ ಮೇಲೆ ನನ್ನ ಕ್ಷೇತ್ರಕ್ಕೆ ಹೋದೆ. ಜನರು ನನ್ನ ಕೈಕುಲುಕಿ ಅಭಿನಂದನೆ ಹೇಳಲು ಬಂದಿದ್ದರು. ಆದರೆ ನನಗೆ ಕೈಕುಲುಕಲು ಭಯ, ಸುಮ್ಮನೆ ನಮಸ್ಕಾರ ಮಾಡುತ್ತಿದ್ದೆ. ಆದರೆ ಮಂತ್ರಿ ಆದ ಮೇಲೆ ಇವನಿಗೆ ಸೊಕ್ಕು ಬಂದಿದೆ ಎಂದು ಜನ ತಿಳಿದುಕೊಳ್ಳುತ್ತಿದ್ದರು. ಆಮೇಲೆ ಅವರಿಗೆ ಕೊರೋನಾ ಕಾಯಿಲೆ ಭಯದಿಂದ ಹಾಗೆ ಮಾಡಿದೆ ಎಂದು ತಿಳಿ ಹೇಳಿದೆ ಎಂದರು.
ಸಚಿವರ ಈ ಹೇಳಿಕೆಗೆ ಸದನ ನಗೆಗಡಲಲ್ಲಿ ತೇಲಿತು. ಒಟ್ಟಿನಲ್ಲಿ ಜನಕ್ಕೆ ಕೈ ಕೊಡಲಿಲ್ಲ ಅಲ್ವಾ ನೀವು, ನಮಗೆ ಕೈ ಕೊಟ್ಟ ಹಾಗೆ ಜನಕ್ಕೆ ಕೈ ಕೊಡಬೇಡಿ ಎಂದು ಕಾಂಗ್ರೆಸ್ ನ ನಾರಾಯಣ ಸ್ವಾಮಿ ಬಿ.ಸಿ ಪಾಟೀಲ್ ಕಾಲೆಳೆದರು. ಅದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಸಚಿವರು, ನಾನು ಕೈ ಕೊಡ್ಲಿಲ್ಲ, ನೀವು ಕೈ ಬಿಟ್ಟಿದ್ದಕ್ಕೆ ರಾಜೀನಾಮೆ ಕೊಟ್ಟು ಜನಾಶೀರ್ವಾದ ಪಡೆದು ಮತ್ತೆ ಬಂದಿದ್ದೇನೆ ಎಂದರು.
ಕೊರೋನಾ ಬಗ್ಗೆ ಸದಸ್ಯರ ಮಾತಿನ ನಂತರ ಉತ್ತರ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಕೊರೋನಾ ಚೀನಾದಲ್ಲಿ ಕಂಡುಬಂದ ವೈರಸ್, 76 ದೇಶಗಳಲ್ಲಿ ಈ ವೈರಸ್ ಹರಡಿದೆ. ಭಾರತದಲ್ಲಿ 5 , ಕೇರಳದಲ್ಲಿ 3, ದೆಹಲಿ, ತೆಲಂಗಾಣದಲ್ಲಿ 1 ಪ್ರಕರ ಖಾತರಿ ಆಗಿದೆ. ಯಾವುದೇ ಸಾವು ಸಂಭವಿಸಿಲ್ಲ. ಆದರೆ ರಾಜ್ಯದಲ್ಲಿ ಯಾವುದೇ ಪ್ರಕರಣ ಖಾತರಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕೊರೋನಾ ಬಾದಿತ ದೇಶಗಳಿಂದ ಬರುವವರಿಗೆ 28 ದಿನಗಳ ಕಾಲ ವಿಶೇಷ ನಿಗಾ ವಹಿಸಲಿದ್ದೇವೆ, ರಾಜ್ಯದ 50 ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ, ಈಗಾಗಲೇ ಅಗತ್ಯವಾದ ಎಲ್ಲ ಸಲಕರಣೆಗಳು, ಮಾಸ್ಕ್, ಔಷಧಿಗಳನ್ನು ನೀಡಲಾಗಿದೆ. ಅಗತ್ಯ ಮಾರ್ಗ ಸೂಚಿಯಂತೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ