ದಾವಣಗೆರೆ:
ವೈದ್ಯಕೀಯ ಮತ್ತು ದಂತ ವೈದ್ಯ ಕೋರ್ಸ್‍ಗಳಿಗೆ ಪ್ರವೇಶ ಕಲ್ಪಿಸುವ ‘ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆ (ನೀಟ್) ತ ಭಾನುವಾರ ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ನಗರದ ತರಳಬಾಳು ಶಾಲೆ, ಜೈನ್ ತಾಂತ್ರಿಕ ಮಹಾವಿದ್ಯಾಲಯ, ತೊಳಹುಣಸೆಯ ಶಾಮನೂರು ಪಾರ್ವತಮ್ಮ ವಸತಿಯುತ ಶಾಲೆ ಸೇರಿದಂತೆ ಇತರೆ ಪರೀಕ್ಷೆ ಕೇಂದ್ರಗಳಲ್ಲಿ ನಡೆಯಿತು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‍ಟಿಎ) ನಡೆಸುತ್ತಿರುವ ಈ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ ಹಾಗೂ ಸಸ್ಯಶಾಸ್ತ್ರ ವಿಷಯಗಳಿಗೆ ಪರೀಕ್ಷೆ ನಡೆಸಿತು.
ಪರೀಕ್ಷಾ ಅಕ್ರಮ ತಡೆಗಟ್ಟುವ ಸಲುವಾಗಿ ಪರೀಕ್ಷಾರ್ಥಿಗಳಿಗೆ ಉಡುಪು ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಎನ್‍ಟಿಎ ಹಲವು ನಿರ್ಬಂಧ ವಿಧಿಸಿದ್ದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳತ್ತ ದೌಡಾಯಿಸಿದ್ದರು.
ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪತ್ರದ ಜತೆಗೆ, ವಿದ್ಯಾರ್ಥಿಗಳ ಭಾವಚಿತ್ರವುಳ್ಳ ಪಾನ್ ಕಾರ್ಡ್, ಚಾಲನಾ ಪರವಾನಗಿ, ಪಾಸ್‍ಪೋರ್ಟ್, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಇತರೆ ಗುರುತಿನ ಚೀಟಿಗಳನ್ನು ತೆಗೆದುಕೊಂಡು ಬಂದಿದ್ದರು.
ನಿರ್ಬಂಧಿತ ವಸ್ತುಗಳು:
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಲೋಹದ ವಸ್ತುಗಳು, ಜಾಮೆಟ್ರಿ ಬಾಕ್ಸ್, ಪೆನ್ಸಿಲ್ ಬಾಕ್ಸ್, ಹ್ಯಾಂಡ್ ಬ್ಯಾಗ್, ಪರ್ಸ್, ನೀರು, ತಿಂಡಿ ತಿನಿಸುಗಳು, ಪೇಪರ್ , ಮೊಬೈಲ್ ಫೋನ್, ಪೇಜರ್, ಕ್ಯಾಲ್ಕುಲೇಟರ್, ಕ್ಯಾಮೆರಾ, ಕೈಗಡಿಯಾರವನ್ನು ಪರೀಕ್ಷಾ ಕೇಂದ್ರಕ್ಕೆ ತರುವುದನ್ನು ನಿಷೇಧಿಸಲಾಗಿತ್ತು.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅರ್ಧ ತೋಳಿನ ಟಾಪ್ ಅಥವಾ ಅಂಗಿ ಸೇರಿದಂತೆ ಸಾಧಾರಣ ಉಡುಪುಗಳನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಉದ್ದ ತೋಳಿನ ಅಂಗಿ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಕಿವಿಯೋಲೆ, ರಿಂಗ್, ಮೂಗುತಿ, ಆಭರಣಗಳು, ಪೆಂಡೆಂಟ್, ಬ್ಯಾಡ್ಜ್ ಧರಿಸುವಂತಿರಲಿಲ್ಲ. ಹೀಗಾಗಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಮುಂಚೆ ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದ ದೃಶ್ಯ ಪರೀಕ್ಷಾ ಕೇಂದ್ರಗಳ ಬಳಿಯಲ್ಲಿ ಸಾಮಾನ್ಯವಾಗಿತ್ತು.ಪರೀಕಾ ಕೇಂದ್ರದ ಒಳಗೆ ನಿಷೇಧಿಸಿದ್ದ ವಸ್ತುಗಳನ್ನು ಇಡಲು ವ್ಯವಸ್ಥೆ ಸಹ ಮಾಡಲಾಗಿತ್ತು.