ನೆಲ,ಜಲ,ಭಾಷೆಯ ರಕ್ಷಣೆಗೆ ಮುಂದಾಗಲು ಕರೆ

ಕುಣಿಗಲ್

     ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ಗ್ಲೋಬಲ್ ಹೆಲ್ತ್ ಅಂಡ್ ಎಜುಕೇಷನ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಕ್ರೀಡೆಯ ಆಡುವುದರ ಜೊತೆಗೆ ಕ್ರೀಡಾಭಿಮಾನವನ್ನು ಯುವ ಸಮುದಾಯ ಬೆಳೆಸಿಕೊಂಡು ನಮ್ಮ ನೆಲ, ಜಲ, ಭಾಷೆಯ ರಕ್ಷಣೆಗೆ ಮುಂದಾಗಬೇಕಿದೆ ಎಂದು ಶಾಸಕ ರಂಗನಾಥ್ ತಿಳಿಸಿದರು.

      ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಪಂದ್ಯಕ್ಕೆ ಬಾ ನ ರವಿ ಉತ್ತಮ ವೇದಿಕೆ ನಿರ್ಮಿಸಿರುವುದು ಅಭಿನಂದನೀಯ ವಿಚಾರವಾಗಿದೆ. ಉಳ್ಳವರು ಸಮಾಜ ಸೇವಕರು , ಸಂಘ ಸಂಸ್ಥೆಗಳು ಹೆಚ್ಚಾಗಿ ಕ್ರೀಡೆಯನ್ನು ಆಯೋಜನೆ ಮಾಡಿದಾಗ ಸಮಾಜದ ಸ್ವಾಸ್ಥ್ಯ ಉತ್ತಮ ಗೊಳ್ಳುವುದರ ಜೊತೆಗೆ ಆರೋಗ್ಯವಂತ ಯುವ ಸಮುದಾಯ ನಿರ್ಮಾಣಗೊಳ್ಳಲಿದೆ ಎಂದರು.  

      ತಾಲ್ಲೂಕಿನಲ್ಲಿ ಹೇಮಾವತಿ ನೀರು ಹರಿಸಲು ಕೆಲವು ರಾಜಕೀಯ ವ್ಯಕ್ತಿಗಳು ಬಿಡುತ್ತಿಲ್ಲ. ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಕೆಲವು ಜನ ಕಾಲ ಕಳೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಅರೇಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ ಕ್ರೀಡೆಯಲ್ಲಿ ದೇಹದ ಶಕ್ತಿಗೆ ಸಮಾನಾಗಿ ಮಾನಸಿಕ ಸ್ಥಿರತೆ, ಚಿಂತನಾಶೀಲತೆ ಕೆಲಸ ಮಾಡಬೇಕು. ಇದಕ್ಕಾಗಿ ಕ್ರೀಡೆಯ ಜೊತೆ ಜೊತೆಗೆ ಕ್ರೀಡಾಪಟುಗಳು ಧ್ಯಾನ , ಆಧ್ಯಾತ್ಮ , ಯೋಗಗಳನ್ನು ತೊಡಗಿಸಿಕೊಂಡಾಗ ಮನಸ್ಸನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಎದುರಾಳಿಯ ಹಿಮ್ಮೆಟ್ಟಿಸಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ಕ್ರೀಡಾಪಟು ಉತ್ಸಾಹದಿಂದ ಕಬಡ್ಡಿ ಆಡಿದ್ದಾರೆ. ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಬಹುಮುಖ್ಯ ಎಂದರು.

     ಮುಖಂಡ ಬಾ ನ ರವಿ ಮಾತನಾಡಿ ಕುಣಿಗಲ್ ತಾಲ್ಲೂಕಿನಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯ ನಡೆಸಬೇಕೆಂದಾಗ ಸ್ಥಳೀಯವಾಗಿ ಎಲ್ಲರೂ ಉತ್ತಮ ಬೆಂಬಲ ನೀಡಿದರು. ಇದರಿಂದ ರಾಜ್ಯಮಟ್ಟದ ಕಬಡ್ಡಿ ಪಂದ್ಯ ಉತ್ತಮವಾಗಿ ನಡೆಯಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಬೇಕೆಂದು ನಾವು ತೀರ್ಮಾನಿಸಿದ್ದೇವೆ ಎಂದರು.

      ಪ್ರಥಮ ಬಹುಮಾನವನ್ನು ಬೆಂಗಳೂರಿನ ಎಸ್‍ಜಿಎಸ್ ತಂಡ ಪಡೆದ 40 ಸಾವಿರ ನಗದು ಹಾಗೂ ಪಾರಿತೋಷಕವನ್ನು ತನ್ನದಾಗಿಸಿಕೊಂಡಿತ್ತು. ಎರಡನೆಯ ಬಹುಮಾನ ಬೆಂಗಳೂರಿನ ಸಾಹಿಮಾತಾ ತಂಡದ ಪಾಲಾಯಿತು. ಪಂದ್ಯದಲ್ಲಿ ಬೆಂಗಳೂರು, ದಾವಣಗೆರೆ, ಹಾಸನ, ಮೈಸೂರು, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 37 ಬಾಲಕರು , 17 ಬಾಲಕಿಯರ ತಂಡಗಳು ಭಾಗವಹಿಸಿದ್ದವು.

      ಈ ಸಂದರ್ಭದಲ್ಲಿ ಮುಖಂಡರಾದ ನಾಗೇಶ್ , ನೀಲತ್ತಹಳ್ಳಿ ರವಿ, ಬೇಗೂರು ನಾರಾಯಣ್ , ಪುರಸಭಾ ಅಜಯ್ , ಜಗದೀಶ್ , ಸದಸ್ಯ ಶಂಕರ್ , ರೆಹಮಾನ್ ಶರೀಫ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link