ಮುಂದುವರೆದ ಜಟಾಪಟಿ :ಜಾನಪದ ಜಾತ್ರೆ ನೆನಗುದಿಗೆ

ಬೆಂಗಳೂರು

ವಿಶೇಷ ವರದಿ: ಸಂಧ್ಯಾ ಸೊರಬ

     ಹದಿಮೂರು ವರ್ಷಗಳ ಹಿಂದೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಯಶಸ್ವಿಯಾಗಿ ನಡೆದಿದ್ದ ʼಜಾನಪದ ಜಾತ್ರೆʼ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ತಮ್ಮ ಹಿಂದಿನ ಜನಪ್ರಿಯ ಕಾರ್ಯಕ್ರಮಗಳನ್ನು ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಮುಂದುವರೆಸುತ್ತಿರುವ ಕುಮಾರಸ್ವಾಮಿ, 2019-20ನೇ ಸಾಲಿನ ಬಜೆಟ್‌ನಲ್ಲಿ ಜಾನಪದ ಜಾತ್ರೆ ನಡೆಸಲು 2 ಕೋಟಿ ರೂ.ಅನುದಾನ ಮೀಸಲಿಟ್ಟಿದರು. ಆದರೆ ಈ ಬಾರಿ ಜಾನಪದ ಜಾತ್ರೆ ನೆನಗುದಿಗೆ ಬೀಳುವ ಲಕ್ಷಣಗಳು ಕಂಡುಬರುತ್ತಿವೆ.

    20-20 ಸರ್ಕಾರದಲ್ಲಿ ಗ್ರಾಮೀಣ ಕಲಾವಿದರನ್ನು ಗುರುತಿಸಿ ಬೆಂಗಳೂರು ಸೇರಿ ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದು ಹಾಗೂ ನಗರದ ಜನತೆಗೆ ಗ್ರಾಮೀಣ ಜಾನಪದ ಕಲೆಗಳ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಜಾನಪದ ಜಾತ್ರೆ ಆರಂಭಿಸಲಾಗಿತ್ತು. 20 ತಿಂಗಳ ಅವಧಿಯಲ್ಲಿ ಪ್ರತಿ ಶನಿವಾರ “ಜಾನಪದ ಜಾತ್ರೆ’ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು ಕೂಡ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿಯೂ ಇದನ್ನು ಮುಂದುವರೆಸಬೇಕೆಂದು ಕುಮಾರಸ್ವಾಮಿ ಮುಂದಾಗಿದ್ದರು. ಕಾರ್ಯಕ್ರಮ ಆಯೋಜನೆ ಕುರಿತು ಕಲಾ ಸಂಘಟಕರು ಹಾಗೂ ಜಾನಪದ ಅಕಾಡೆಮಿಯ ಜಟಾಪಟಿಯಿಂದಾಗಿ ಸದ್ಯಕ್ಕೆ ಕಾರ್ಯಕ್ರಮ ನಡೆಯುವ ಲಕ್ಷಣ ಕಾಣಿಸುತ್ತಿಲ್ಲ.

     ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿಂದಿನ ಕಾರ್ಯದರ್ಶಿಯಾಗಿದ್ದ ಅನಿಲ್‌ ಕುಮಾರ್‌, ಜಾನಪದ ಅಕಾಡೆಮಿ ಹಾಗೂ ಹಾವೇರಿ ಜಿಲ್ಲೆಯ ಗೋಟಗೋಡಿ ಜಾನಪದ ವಿಶ್ವವಿದ್ಯಾಲಯ ಜಂಟಿಯಾಗಿ ಕಾರ್ಯಕ್ರಮದ ಆಯೋಜನೆಯ ಜವಾಬ್ದಾರಿ ವಹಿಸುವಂತೆ ಸೂಚನೆ ನೀಡಿದ್ದರು. ಈ ಬಾರಿ ಕಾರ್ಯಕ್ರಮ ಆಯೋಜನೆಗಾಗಿ ಇಲಾಖೆ ಸಮಿತಿ ರಚಿಸಲು ಮುಂದಾಗಿದ್ದನ್ನು ಕೈ ಬಿಡುವಂತೆ ಹೇಳಿದ್ದರು.

     ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾನಪದ ಜಾತ್ರೆ ನಡೆಸುತ್ತಿದೆ ಎಂಬ ವಿಷಯ ತಿಳಿದ ಕೂಡಲೇ ಕಾರ್ಯಕ್ರಮದ ಆಯೋಜನೆಯನ್ನು ತಮಗೆ ನೀಡುವಂತೆ ರಂಗಕರ್ಮಿ ಕಲಾ ಸಂಘಟಕ ಕಪ್ಪಣ್ಣ ಪಟ್ಟುಹಿಡಿದ್ದಾರೆ. ಹಿಂದೆ ತಾವು ಮತ್ತು ತಂಡ ನಡೆಸಿದ ಪರಿಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿತ್ತು. ಹೀಗಾಗಿ ಇದನ್ನು ಬೇರೆ ಯಾವುದೇ ಸಮಿತಿಗೋ ಅಥವಾ ಜಾನಪದ ಅಕಾಡೆಮಿಗೆ ನೀಡಬಾರದು ಎಂದು ಹಠ ಹಿಡಿದಿದ್ದಾರೆ.

      ಆದರೆ ಕಲಾ ಸಂಘಟಕರಿಗೆ ನೀಡಿದರೆ ಜಾನಪದ ಅಕಾಡೆಮಿಯ ಕಲಾವಿದರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಕಾರ್ಯಕ್ರಮ ಆಯೋಜನೆಯ ಜವಾಬ್ದಾರಿಯನ್ನು ಅಕಾಡೆಮಿಗೆ ನೀಡಿದರೆ ಅನುಕೂಲವಾಗುತ್ತದೆ. ಇಲಾಖೆ ಹಾಗೂ ಕಲಾ ಸಂಘಟಕರೇ ಉತ್ಸವ, ಜಯಂತಿಗಳನ್ನು ನಡೆಸುತ್ತಿದ್ದಾರೆ.

      ಇಡೀ ವರ್ಷದಲ್ಲಿ ಅಕಾಡೆಮಿಯಿಂದ 200-300 ಕಲಾವಿದರಿಗೆ ಅವಕಾಶ ನೀಡಬೇಕಿದೆ. ನಮ್ಮ ಕಲಾವಿದರನ್ನು ತೃಪ್ತಿಪಡಿಸಲು ಇಲಾಖೆ ನಿರ್ದೇಶಕರಿಗೆ ʼಜಾನಪದ ಜಾತ್ರೆʼ ಯ ಜವಾಬ್ದಾರಿಯನ್ನು ನಮಗೆ ನೀಡುವಂತೆ ಪತ್ರ ಬರೆದಿದ್ದು, ನಿರ್ದೇಶಕರಾಗಲೀ ಸರ್ಕಾರವಾಗಲೀ ಇನ್ನೂ ತನ್ನ ತೀರ್ಮಾನ ಪ್ರಕಟಿಸಿಲ್ಲ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಟಾಕಪ್ಪಯುಎನ್‌ಐ ಕನ್ನಡ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ನಮ್ಮ ಅಭಿಪ್ರಾಯದ ಬಗ್ಗೆ ತಾವು ಕಪ್ಪಣ್ಣ ಅವರ ಜೊತೆಗಾಗಲೀ, ಕಪ್ಪಣ್ಣ ತಮ್ಮ ಜೊತೆಗಾಗಲೀ ಚರ್ಚಿಸಿಲ್ಲ. ಸರ್ಕಾರಕ್ಕೆ ತಮ್ಮ ಅಭಿಪ್ರಾಯ ಸಲ್ಲಿಸಲಾಗಿದೆ ಅಷ್ಟೆ ಎಂದರು.

    ಯುಎನ್‌ಐ ಕನ್ನಡ ಸುದ್ದಿಸಂಸ್ಥೆ ಜೊತೆ ಕಪ್ಪಣ್ಣ ಮಾತನಾಡಿ, ಜಾನಪದ ಜಾತ್ರೆ ಸಂಪ್ರದಾಯಬದ್ಧವಾಗಿ ನಡೆಯಬೇಕು. ಕಾರ್ಯಕ್ರಮದ ಯಶಸ್ವಿಗೆ ಒಬ್ಬ ನಾಯಕನಿರಬೇಕು. ನಾಯಕನ ಹಿಂದೆ ತಂಡ ಇರಬೇಕು. ಮೊದಲ ಬಾರಿಗೆ ನಡೆದ ಜಾನಪದ ಜಾತ್ರೆ ಅತ್ಯಂತ ಯಶಸ್ವಿಯಾಗುವುದಕ್ಕೆ ತಾವು ಕಾರಣ. ಸರ್ಕಾರ ನಮ್ಮ ಅಭಿಪ್ರಾಯ ಕೇಳದೇ ಈ ಬಾರಿ ಜಾತ್ರೆಮಾಡಲು ಮುಂದಾಗಿದೆ. ನನ್ನ ಕೆಲಸ ಏನು ಎನ್ನುವುದನ್ನು ಜಾನಪದ ಜಾತ್ರೆ ಹೇಳಿದೆ. ಜಾನಪದ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮದ ಹೊಣೆ ಹೊತ್ತುಕೊಳ್ಳಬೇಕು. ಆದರೆ ಕಾರ್ಯಕ್ರಮ ಆಯೋಜನೆ ನಮಗೆ ವಹಿಸಬೇಕು ಎಂದಿದ್ದಾರೆ.

      ಇನ್ನು ಈ ಇಬ್ಬರ ಜಟಾಪಟಿಯ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿ, “ಮೊಸರು ಕಡೆದರಷ್ಟೆ ಮಜ್ಜಿಗೆ ಬೆಣ್ಣೆ ಬರಲು ಸಾಧ್ಯʼ ಕಡೆಯುವ ಕೆಲಸವಾಗುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

     ಇನ್ನು ಇಲಾಖೆಯ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಮಾತುಗಳು ಇನ್ನೊಂದೆಡೆ ಕೇಳಿಬಂದಿವೆ. ಇಬ್ಬರ ಜಟಾಪಟಿ ಮುಂದುವರೆದೇ ಇದ್ದರೂ ಸರ್ಕಾರವಾಗಲೀ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಂದು ಸ್ಪಷ್ಟ ನಿರ್ಣಯಕ್ಕೆ ಇನ್ನೂ ಬಂದಿಲ್ಲ. ಹೀಗಾಗಿ ಜಾನಪದ ಜಾತ್ರೆ ನೆನಗುದಿಗೆ ಬೀಳುವ ಸಾಧ್ಯತೆಯೇ ಹೆಚ್ಚಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ