ತುಮಕೂರು
ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳು ಮಕ್ಕಳಿಗೆ ಅವಶ್ಯಕವಾಗಿದ್ದು, ಜಿಲ್ಲೆಯಲ್ಲಿ ಮಾದರಿ ತರಬೇತಿ ಕೇಂದ್ರ ಮಾಡಲು ಅಗತ್ಯ ನೆರವು ಕಲ್ಪಿಸಿಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರದ ಹೊರವಲಯದ ಬೆಳಗುಂಬ ಬಳಿ ಇರುವ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ತರಬೇತಿ ಕೇಂದ್ರದ ಶಿಲಾನ್ಯಾಸವನ್ನು ನೇರವೇರಿಸಿ ಅವರು ಮಾತನಾಡಿದರು. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತರಿಗೆ ತಿಳಿಸಿದ ಅವರು, ಮಾದರಿ ತರಬೇತಿ ಕೇಂದ್ರವನ್ನು ತ್ವರಿತವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಅನುದಾನ ಬಿಡುಗಡೆ ಮಾಡಿಸುವ ಭರವಸೆ ನೀಡಿದರು.
ತರಬೇತಿ ಕೇಂದ್ರದ ಬಳಿ ಪಿಕಪ್ ನಿರ್ಮಿಸಿಕೊಡುವಂತೆ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಮನವಿ ಮಾಡಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಮಾಣ ಮಾಡುವ ಭರವಸೆ ನೀಡಿದ ಅವರು, ಈ ತರಬೇತಿ ಕೇಂದ್ರದಲ್ಲಿ ಮಕ್ಕಳಿಗೆ ಉತ್ತಮ ತರಬೇತಿ ಸಿಗುವಂತಾಗಲಿ ಎಂದು ಆಶಿಸಿದರು.
ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, ಸ್ಕೌಟ್ಸ್ ಗೈಡ್ಸ್ ಅವಶ್ಯಕವಿರುವ ಪಠ್ಯೇತರ ಚಟುವಟಿಕೆ. ಮಕ್ಕಳಲ್ಲಿ ಶಿಸ್ತು, ಪರಿಸರ, ದೇಶಭಕ್ತಿಯನ್ನು ಮೂಡಿಸುವ ಉತ್ಕøಷ್ಟ ಸಂಸ್ಥೆ ಎಂದು ಹೇಳಿದ ಅವರು, ಮಕ್ಕಳಿಗೆ, ಶಿಕ್ಷಕರಿಗೆ ಸ್ಕೌಟ್ಸ್ ವಿಚಾರ ಗೊತ್ತಾಗಬೇಕು. 7 ಲಕ್ಷ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿದ್ದಾರೆ.
ಶನಿವಾರ ಬ್ಯಾಗ್ ಲೆಸ್ ಡೇ ಆಗಿದ್ದು, ಅಲ್ಲಿ ಈ ಚಟುವಟಿಕೆ ನಡೆಸಬೇಕು ಎಂದ ಅವರು, ನೇಚರ್ ಸ್ಟಡಿ ಸೆಂಟರ್‍ಗೆ ಅವಶ್ಯಕವಾಗಿರುವ ಜಾಗ ಇದಾಗಿದ್ದು, ಮಕ್ಕಳಿಗೆ ಪ್ರಕೃತಿ ಅಧ್ಯಯನಕ್ಕೆ ಅಗತ್ಯವಾದ ಪರಿಸರವಿದ್ದು, ಬೆಂಗಳೂರಿನ ಸುತ್ತಮುತ್ತ ಇಂತಹ ಜಾಗವಿಲ್ಲ. ಹಾಗಾಗಿ ಈ ಕೇಂದ್ರವನ್ನು ಕೆಲಸವನ್ನು ನಿಲ್ಲಿಸದೆ ಪೂರ್ಣ ಗೊಳಿಸಬೇಕು ಎಂದು ಸೂಚಿಸಿದರು.
ಮುಂದಿನ ತಿಂಗಳು ದೊಡ್ಡಬಳ್ಳಾಪುರದಲ್ಲಿ ನಡೆಯಲ್ಲಿರುವ ರಾಜ್ಯ ಮಟ್ಟದ ಜಾಂಬೋರಿಯಲ್ಲಿ ಮಕ್ಕಳಿಗೆ ಬಿದಿರು, ಹುಲ್ಲಿನಿಂದ ಬುಟ್ಟಿ ತಯಾರಿಕೆ ಹಾಗೂ ನಮ್ಮ ಸ್ಕೂಲ್ ರೇಡಿಯೋ ಬಗ್ಗೆ ತರಬೇತಿ ನೀಡಬೇಕು. ಎನ್‍ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ರೆಡ್‍ಕ್ರಾಸ್, ಎನ್‍ಎಸ್‍ಎಸ್ ಎಲ್ಲ ಒಂದಾಗಿ ಕೆಲಸ ಮಾಡಬೇಕು ಎಂದ ಅವರು, ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಮಕ್ಕಳು ನೆರೆ ಸಂತ್ರಸ್ತರಿಗಾಗಿ ಕಳೆದ ಒಂದೂವರೆ ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ಗ್ರಾಮಾಂತರ ಶಾಸಕ ಗೌರಿಶಂಕರ್ ಮಾತನಾಡಿ, ಈ ಕೇಂದ್ರವು ಶೀಘ್ರ ಉದ್ಘಾಟನೆಯಾಗುವುದಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆಯನ್ನು ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮುಖ್ಯ ಆಯುಕ್ತೆ ಆಶಾ ಪ್ರಸನ್ನಕುಮಾರ್, ಸ್ಕೌಟ್ಸ್ ಸಂಸ್ಥೆಯ ಮಕ್ಕಳಿಗೆ ತರಬೇತಿಗೆ ಎರಡು ಎಕರೆ ಜಮೀನು ಮಂಜೂರಾಗಿದ್ದು, ಮಕ್ಕಳಿಗೆ ಅವಶ್ಯಕ ತರಬೇತಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು. ಈ ತರಬೇತಿ ಕೇಂದ್ರದಿಂದ ಜಿಲ್ಲೆಯ ಎಲ್ಲಾ ಶಾಲೆಯ ಮಕ್ಕಳಿಗೆ ಅಗತ್ಯ ತರಬೇತಿ ಪಡೆಯಲು ಅನುಕೂಲವಾಗುವುದು ಎಂದ ಅವರು, ಎಲ್ಲರ ಸಹಕಾರದಿಂದ ರಾಜ್ಯಕ್ಕೆ ಮಾದರಿಯಾಗಿ ತರಬೇತಿ ಕೇಂದ್ರವನ್ನು ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ನಾಗಣ್ಣ ಮಾತನಾಡಿದರು. ಜಿಲ್ಲಾ ಆಯುಕ್ತ ಬಿ.ಆರ್. ವೇಣು ಗೋಪಾಲ್‍ಕೃಷ್ಣ, ಸುಭಾಷಿಣಿ, ಉಪಾಧ್ಯಕ್ಷ ಪ್ರಸನ್ನಕುಮಾರ್, ಡಿಡಿಪಿಐ ಲಲಿತಾಕುಮಾರಿ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಷಾ, ತಾಲ್ಲೂಕು ಅಧ್ಯಕ್ಷ ಬೆಳ್ಳಿ ಲೋಕೇಶ್, ಖಜಾಂಚಿ ಕಿಶೋರ್, ತರಬೇತಿ ಆಯುಕ್ತೆ ಸಿಂದಗಿಕರ್, ನಂದಕುಮಾರ್, ಆಂಜಿನಪ್ಪ, ಕೆಂಪರಂಗಯ್ಯ, ಯತೀಶ್ ಕುಮಾರ್, ವೀರಭದ್ರಯ್ಯ ಸೇರಿದಂತೆ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ