ಮಧುಗಿರಿ
ಪ್ರೇಮ ವಿವಾಹಕ್ಕೆ ಹುಡುಗಿಯ ಕುಟುಂಬಸ್ಥರಿಂದ ವಿರೋಧವಿದ್ದ ಹಿನ್ನೆಲೆಯಲ್ಲಿ ಮದುವೆಗೆ ಮುನ್ನ ಗಂಡು ಮಗು ಹೆತ್ತ ಯುವತಿಯೊಬ್ಬಳು ತಾನು ಕೆಲಸ ಮಾಡುತ್ತಿದ್ದ ರೇಷ್ಮೆ ಶೆಡ್‍ನಲ್ಲಿನ ವಾಷಿಂಗ್ ಮೆಷಿನ್ ಮೇಲೆ ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿಟ್ಟು, ಯಾರದೊ ಮಗು ಇಲ್ಲಿದೆ ಎಂದು ಪರಿಚಯಸ್ಥರಿಗೆ ಸುಳ್ಳು ಹೇಳಿದ್ದಾಳೆ. ನಂತರ ಸಿಡಿಪಿಒರವರ ಮಧ್ಯಸ್ಥಿಕೆಯಿಂದ ತಾಯಿ ಮಗು ಸುರಕ್ಷಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬುಧವಾರ ನಡೆದಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಮರವೇಕೆರೆಯ ಗ್ರಾಮದ ಮಾರುತಿ ಎನ್ನುವವರ ರೇಷ್ಮೆ ಶೆಡ್‍ನಲ್ಲಿನ ವಾಷಿಂಗ್ ಮೆಷಿನ್ ಮೇಲೆ ಬಟ್ಟೆಯಲ್ಲಿ ಸುತ್ತಿದ್ದ ಗಂಡು ಮಗುವನ್ನು ಯಾರೊ ಇಟ್ಟು ಹೋಗಿದ್ದಾರೆ ಎಂದು ಕೆಲಸದಾಕೆ ಮಾರುತಿಯವರ ಕುಟುಂಬಸ್ಥರಿಗೆ ತಿಳಿಸಿದ್ದಳು.
ಈಕೆಯ ಮಾತುಗಳನ್ನು ನಂಬಿದ ಕುಟುಂಬಸ್ಥರು ಗ್ರಾಮದ ಸುತ್ತ ಮುತ್ತಲಿನವರು ಈ ರೀತಿಯ ಕಾರ್ಯದಲ್ಲಿ ತೊಡಗಿರಬಹುದು, ಯಾರಿಗೂ ಕೊಡುವುದು ಬೇಡ, ಇಂದಲ್ಲಾ ನಾಳೆ ಮತ್ತೆ ಇಟ್ಟವರು ವಾಪಸ್ಸು ಬಂದೆ ಬರುತ್ತಾರೆಂದುಕೊಂಡು ಮಗುವನ್ನು ತಮ್ಮ ಮನೆಯಲ್ಲಿಯೇ ಬೆಳಗಿನಿಂದ ಲಾಲನೆ ಪಾಲನೆಯಲ್ಲಿ ತೊಡಗಿದ್ದರು.
ನವಜಾತ ಶಿಶುವನ್ನು ಯಾರೋ ಬೇಲಿಯಲ್ಲಿ ಎಸೆದು ಹೋಗಿದ್ದಾರೆ. ಶಿಶುವನ್ನು ಗ್ರಾಮದ ಮನೆಯೊಂದರಲ್ಲಿ ಹಾರೈಕೆ ಮಾಡಲಾಗುತ್ತಿದೆ ಎಂದು ಸಿಡಿಪಿಓ ಕೆಂಪಹನುಮಯ್ಯನವರಿಗೆ ದೂರವಾಣಿ ಕರೆಯೊಂದು ಹೋಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರ್ರವೃತ್ತರಾದ ಅಧಿಕಾರಿ ಮತ್ತು ಸಿಬ್ಬಂದಿವರ್ಗ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಾರುತಿ ಕುಟುಂಬದವರ ಬಳಿ ವಿಚಾರಿಸುತ್ತಿರುವಾಗ ಅಲ್ಲಿಯೇ ಇದ್ದ ಕೆಲಸದಾಕೆ, ಈ ಮಗು ನನ್ನದೆ. ಮಂಗಳವಾರ ರಾತ್ರಿ ರೇಷ್ಮೆ ತೋಟದಲ್ಲಿ ಹೆರಿಗೆಯಾಗಿದೆ. ನಾನೆ ಮಗುವಿನ ತಾಯಿ ಎಂದು ಶಾರದ (21) ಹೆಸರಿನ ಕೆಲಸದಾಕೆ ಒಪ್ಪಕೊಂಡಿದ್ದಾಳೆ. ವಿಚಾರಣೆ ಬಳಿಕ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆಗೆ ಮಗು ಮತ್ತು ತಾಯಿಯನ್ನು ಕರೆತಂದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಯುವತಿ ಶಾರದ ಮಾತನಾಡಿ, ನಾನು ಮೂಲತಃ ಚಿಕ್ಕತೊಟ್ಲುಕೆರೆ ಗ್ರಾಮದ ವಾಸಿ. ನನಗೆ ತಂದೆ, ತಾಯಿ ಯಾರೂ ಇಲ್ಲ. ಸುಮಾರು ವರ್ಷಗಳಿಂದ ಮಾರುತಿಯವರ ತೋಟದಲ್ಲಿ ಕೆಲಸ ಮಾಡುತ್ತಿದ್ದೇನೆ. ತೋಟದ ಕೆಲಸಕ್ಕೆ ಬರುತ್ತಿದ್ದ ದೊಡ್ಡಹಟ್ಟಿಯ ಶೇಖರ್ (28) ಪರಿಚಯವಾಗಿದ್ದು, ನಾನು ಸುಮಾರು ವರ್ಷಗಳಿಂದ ಇಷ್ಟಪಡುತ್ತಿದ್ದೆನೆ. ನಮ್ಮಗಳ ವಿವಾಹಕ್ಕೆ ಕುಟುಂಬಸ್ಥರ ವಿರೋಧವಿತ್ತು. ಅಷ್ಟರಲ್ಲಿ ಈ ರೀತಿಯಾಗಿದೆ. ಆದರೆ ನನಗೆ ಮಗುವನ್ನು ಬಿಟ್ಟುಹೋಗುವ ಮನಸ್ಸಿರಲಿಲ್ಲ. ಆದ್ದರಿಂದ ಈ ರೀತಿ ಮಾಡಬೇಕಾಯಿತು ಎಂದು ತಿಳಿಸಿದ್ದಾಳೆ.
ಯುವಕ ಶೇಖರ್ ಮಾತನಾಡಿ ನಾನು ಶಾರದಾಳನ್ನು ಪ್ರೀತಿಸುತ್ತಿದ್ದೆನೆ ಈ ಹಿಂದಯೇ ನಮ್ಮಿಬ್ಬರ ಮದುವೆಯ ಬಗ್ಗೆ ನನ್ನ ಕುಟುಂಬದಲ್ಲಿ ಯಾರ ವಿರೋಧವು ಇರಲಿಲ್ಲ ಈಕೆಯ ಕುಟುಬಂಸ್ಥರಿಂದ ನನಗೆ ತೊಂದರೆಯಾಗುವ ಭಯವಿದೆ ಈ ಮೊದಲೆ ಎಲ್ಲಾರೂ ಒಪ್ಪಿದ್ದರೆ ಈ ರೀತಿ ಘಟನೆ ನಡೆಯುತ್ತಿರಲಿಲ್ಲ ನನ್ನ ಹೆಂಡತಿ ಮತ್ತು ಮಗುವನ್ನು ಜೋಪಾನ ವಾಗಿ ಸಾಕುತ್ತೆನೆ ನಾವಿಬ್ಬರು ಅನೂನ್ಯವಾಗಿರುತ್ತೆವೆ ಇನ್ನೂ ಸ್ವಲ್ಪ ದಿನದಲ್ಲಿಯೇ ರಿಜಿಸ್ಟರ್ ಮದುವೆಯಾಗುತ್ತೆನೆಂದು ಸ್ಪಷ್ಟಪಡಿಸಿದ್ದಾನೆ.
ಸಿಡಿಪಿಓ ಕೆಂಪಹನುಮಯ್ಯ ಮಾತನಾಡಿ ಮಗು ಮತ್ತು ತಾಯಿ ಆರೋಗ್ಯವಾಗಿದ್ದು ಅವರಿಬ್ಬರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ಯುವಕನಿಗೆ ಮಾಹಿತಿ ನೀಡಲಾಗಿದ್ದು ಶೇಖರ್ ಶಾರದ ಜತೆ ವಿವಾಹವಾಗಲು ಒಪ್ಪಿದ್ದಾನೆ ಇಬ್ಬರು ವಯಸ್ಕರಾಗಿರುವುದರಿಂದ ವಿವಾಹ ವಾಗಲು ಯಾವುದೇ ಅಡ್ಡಿಯಿಲ್ಲ ಇವರಿಬ್ಬರ ವಿವಾಹಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂಧರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಲೋಕೇಶ್ ರೆಡ್ಡಿ, ಪುರುಷೋತ್ತಮ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ