ನೂತನ ತುಮಕೂರು ಪಾಲಿಕೆ ಆಯುಕ್ತರ ಅಧಿಕಾರ ಸ್ವೀಕಾರ..!!

ತುಮಕೂರು

       ತುಮಕೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಐ.ಎ.ಎಸ್. ಅಧಿಕಾರಿ ಟಿ.ಭೂಪಾಲನ್ ಜ.18 ರಂದು ಅಪರಾಹ್ನ 12 ಗಂಟೆಯಲ್ಲಿ ಪಾಲಿಕೆಯ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಇವರು ಮಹಾನಗರ ಪಾಲಿಕೆ ರಚನೆಯಾದ ಬಳಿಕ ಪಾಲಿಕೆಗೆ ನೇಮಕಗೊಂಡಿರುವ ಮೂರನೇ ಆಯುಕ್ತರಾಗಿದ್ದಾರೆ. ಅಲ್ಲದೆ ಇವರು ಪಾಲಿಕೆಗೆ ನೇಮಕಗೊಂಡ ಮೊದಲನೇ ಐ.ಎ.ಎಸ್. ಅಧಿಕಾರಿಯೂ ಹೌದು.

      ಪಾಲಿಕೆಯ ಆಯುಕ್ತರ ಕೊಠಡಿಯಲ್ಲಿ ಅಧಿಕಾರ ಹಸ್ತಾಂತರ ನಡೆಯಿತು. ಹಿಂದಿನ ಆಯುಕ್ತ ಎಲ್.ಮಂಜುನಾಥ ಸ್ವಾಮಿ ನೂತನ ಆಯುಕ್ತರಿಗೆ ಹೂಗುಚ್ಛ ನೀಡಿ ಶುಭ ಕೋರುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಇದಕ್ಕೂ ಮೊದಲು ನೂತನ ಆಯುಕ್ತರು ಮತ್ತು ಹಳೆಯ ಆಯುಕ್ತರು ಹಲವು ಕಾಗದ ಪತ್ರಗಳಿಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಪಾಲಿಕೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ತಿಪ್ಪೇರುದ್ರಪ್ಪ, ಎಕ್ಸಿಕ್ಯುಟೀವ್ ಇಂಜಿನಿಯರ್ ಆಶಾ, ನೀರು ಪೂರೈಕೆ ವಿಭಾಗದ ಎ.ಇ.ಇ. ವಸಂತ್, ಅಕೌಂಟ್ಸ್ ಅಧಿಕಾರಿ ಶಿವಣ್ಣ, ಸಹಾಯಕ ಕಂದಾಯಾಧಿಕಾರಿ ನೀಲಲೋಚನ ಪ್ರಭು, ಕಚೇರಿ ವ್ಯವಸ್ಥಾಪಕ ಮಹೇಶ್ ಮೊದಲಾದ ಹಲವು ಅಧಿಕಾರಿಗಳು ಹಾಜರಿದ್ದು, ಹೊಸ ಆಯುಕ್ತರಿಗೆ ಶುಭಕೋರಿದರು.

        ಹಿಂದಿನ ಆಯುಕ್ತ ಎಲ್.ಮಂಜುನಾಥ ಸ್ವಾಮಿ ಪಾಲಿಕೆಯಲ್ಲಿರುವ ಸಿಬ್ಬಂದಿ ವಿವರ, ಪಾಲಿಕೆಯಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಳ್ಳಲಾದ ಪ್ರಮುಖ ಕಾರ್ಯಗಳು ಹಾಗೂ ತಾವು ಸ್ಮಾರ್ಟ್ ಸಿಟಿ ಕಂಪನಿಯ ಸಿ.ಇ.ಓ. ಆಗಿದ್ದಾಗ ಕೈಗೊಳ್ಳಲಾದ ಯೋಜನೆಗಳ ಬಗ್ಗೆ ಹೊಸ ಆಯುಕ್ತರಿಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

       ಪಾಲಿಕೆಯ ಸಿಬ್ಬಂದಿ ವಿವರದ ಕಡತ ಪರಿಶೀಲಿಸಿದ ಹೊಸ ಆಯುಕ್ತರು, ಇಲ್ಲಿನ ವಿವಿಧ ವಿಭಾಗಗಳ ಅಧಿಕಾರಿ -ಸಿಬ್ಬಂದಿಗಳ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಜನರ ಸಹಕಾರ ಅಗತ್ಯ

      ಅಧಿಕಾರ ಸ್ವೀಕಾರದ ಬಳಿಕ “ಪ್ರಜಾಪ್ರಗತಿ”ಯೊಂದಿಗೆ ಮಾತನಾಡಿದ ನೂತನ ಆಯುಕ್ತ ಟಿ. ಭೂಪಾಲನ್ “ತುಮಕೂರು ನಗರವು ಕ್ಷಿಪ್ರವಾಗಿ ಬೆಳೆಯುತ್ತಿರುವ ನಗರವಾಗಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ದೊರೆತಿರುವುದು ನನಗೆ ಸಂತೋಷ ತಂದಿದೆ. ತುಮಕೂರಿನಲ್ಲಿ ಕರ್ತವ್ಯ ನಿರ್ವಹಣೆಗೆ ಅಪಾರ ಅವಕಾಶಗಳಿವೆ ಹಾಗೂ ಜೊತೆಯಲ್ಲೇ ಸವಾಲುಗಳೂ ಇವೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಂಪೂರ್ಣ ಸಹಕಾರ ಬಯಸುತ್ತೇನೆ” ಎಂದು ಹೇಳಿದರು.

       “ಇದು ನನಗೆ ದೊರೆತಿರುವ ಎರಡನೇ ನೇಮಕ ಆಗಿದೆ. ಮೊದಲಿಗೆ ನಾನು ಉಡುಪಿ ಜಿಲ್ಲೆ ಕುಂದಾಪುರ ಉಪ ವಿಭಾಗದಲ್ಲಿ ಉಪವಿಭಾಗಾಧಿಕಾರಿ ಆಗಿ ಕಾರ್ಯನಿರ್ವಹಿಸಿದ್ದೇನೆ. ಈಗ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತನಾಗಿ ನೇಮಕಗೊಂಡಿದ್ದಾನೆ. ಇದು ಮತ್ತೊಂದು ಅವಕಾಶವಾಗಿದೆ” ಎಂದು ಅವರು ಹೇಳಿದರು.

ಸಿದ್ಧಗಂಗಾ ಮಠಕ್ಕೆ ಭೇಟಿ

       ನೂತನ ಆಯುಕ್ತ ಭೂಪಾಲನ್ ಅಧಿಕಾರ ಸ್ವೀಕರಿಸಿದ ನಂತರ ಹಿಂದಿನ ಆಯುಕ್ತರು ಮತ್ತು ಸಿಬ್ಬಂದಿ ವರ್ಗದ ಜೊತೆಗೆ ಸಿದ್ಧಗಂಗಾ ಮಠಕ್ಕೆ ಶ್ರೀಗಳ ದರ್ಶನ ಪಡೆಯಲು ತೆರಳಿದರು.

3 ನೇ ಆಯುಕ್ತರು

         ತುಮಕೂರು ನಗರಸಭೆಯು ದಿನಾಂಕ 20-12-2013 ರಂದು ಮಹಾನಗರ ಪಾಲಿಕೆಯಾಗಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು. ಅಂದಿನಿಂದ ದಿನಾಂಕ 18-07-2017 ರವರೆಗೆ ಕೆ.ಎಂ.ಎ.ಎಸ್. ಶ್ರೇಣಿಯ ಅಧಿಕಾರಿ ಅಶದ್ ಆರ್.ಷರೀಫ್ ಮೊದಲನೇ ಆಯುಕ್ತರಾಗಿ ಕಾರ್ಯನಿರ್ವಹಿಸಿದರು. ದಿನಾಂಕ 18-07-2017 ರಿಂದ ದಿನಾಂಕ 18-01-2019 ರವರೆಗೆ ಕೆ.ಎಂ.ಎ.ಎಸ್. ಶ್ರೇಣಿಯ ಎಲ್.ಮಂಜುನಾಥ ಸ್ವಾಮಿ ಎರಡನೇ ಆಯುಕ್ತರಾಗಿದ್ದು, ಇದೀಗ ಮೂರನೇ ಆಯುಕ್ತರಾಗಿ ಭೂಪಾಲನ್ ನೇಮಕಗೊಂಡಿದ್ದಾರೆ.

ಹಿಂದಿನ ನಗರಸಭೆಯಲ್ಲಿ ಕಾರ್ಯ ನಿರ್ವಹಿಸಿದ ಐ.ಎ.ಎಸ್. ಅಧಿಕಾರಿಗಳು:

         ಈ ಹಿಂದಿನ ತುಮಕೂರು ನಗರ ಸಭೆಯ ಪೌರಾಯುಕ್ತರ ಹುದ್ದೆಯಲ್ಲೂ ಕೆಲವು ಐ.ಎ.ಎಸ್. ಅಧಿಕಾರಿಗಳು ಕಾರ್ಯನಿರ್ವಹಿಸಿ, ನಗರದ ಅಭಿವೃದ್ಧಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ದಿನಾಂಕ 13-09-2001 ರಿಂದ ದಿನಾಂಕ 16-03-2002 ರವರೆಗೆ ಪಿ.ಮಣಿವಣ್ಣನ್ ; ದಿನಾಂಕ 06-10-2008 ರಿಂದ ದಿನಾಂಕ 17-06-2009 ರವರೆಗೆ ತುಳಸಿ ಮದ್ದಿನೇನಿ; ದಿನಾಂಕ 21-03-2011 ರಿಂದ ದಿನಾಂಕ 10-10-2011 ರವರೆಗೆ ಅನುರಾಗ್ ತಿವಾರಿ; ದಿನಾಂಕ 28-01-2012 ರಿಂದ ದಿನಾಂಕ 22-02-2012 ರವರೆಗೆ ಹಾಗೂ ದಿನಾಂಕ 03-09-2012 ರಿಂದ ದಿನಾಂಕ 30-10-2012 ರವರೆಗೆ ರೋಹಿಣಿ ಸಿಂಧೂರಿ ದಾಸರಿ; ದಿನಾಂಕ 30-10-2012 ರಿಂದ ದಿನಾಂಕ 02-11-2012 ರವರೆಗೆ ಎಸ್.ಎಸ್.ನಕುಲ್ ಅವರುಗಳು ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ